ಗುಡ್ಡೆಹೊಸೂರು, ಜ. 27: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇದೇ ಪ್ರಥಮ ಬಾರಿಗೆ ಏರ್ಪಡಿಸಲಾಗಿರುವ, ತಾ. 31 ರಂದು ನಡೆಯಲಿರುವ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಇಂದು ಬಿಡುಗಡೆ ಮಾಡಲಾಯಿತು.

ಸಮ್ಮೇಳನ ಜರುಗಲಿರುವ ಬಸವನಹಳ್ಳಿಯ ಮೊರಾರ್ಜಿ ವಸತಿ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಲತೀಫ್ ಲಾಂಛನ ಬಿಡುಗಡೆ ಮಾಡಿದರು.

ಈ ಸಂದರ್ಭ ಮಾತನಾಡಿದ ಅವರು, ಮಕ್ಕಳಿಗೆ ಸಾಹಿತ್ಯ ಹಾಗೂ ಕನ್ನಡದ ಬಗ್ಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಮೊದಲ ಪ್ರಯತ್ನ ಶ್ಲಾಘನೀಯವಾದುದು. ಇಂತಹ ಸಮ್ಮೇಳನಗಳಿಂದ ಮಕ್ಕಳಲ್ಲಿ ಸಾಹಿತ್ಯ, ಸಂಸ್ಕøತಿ ಬಗ್ಗೆ ಅರಿವು ಮೂಡಲಿದೆ. ಮಕ್ಕಳು ಉತ್ತಮ ಪ್ರಜೆಯಾಗಲು ಸಹಕಾರಿಯಾಗಲಿದೆ. ಎಲ್ಲರೂ ಇಂತಹ ಕಾರ್ಯಗಳಿಗೆ ಸಹಕಾರ, ಪ್ರೋತ್ಸಾಹ ನೀಡಬೇಕೆಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಭಾಗವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅವಕಾಶ ಕಲ್ಪಿಸಿದ್ದಾರೆ. ಭಾಗವಹಿಸುವವರಿಗೆ ಹಾಜರಾತಿ ಪತ್ರವನ್ನು ಸ್ಥಳದಲ್ಲೇ ನೀಡಲಾಗುವದು ಎಂದು ತಿಳಸಿದರು.

ಸಮ್ಮೇಳನ ಸಂಬಂಧ ಈಗಾಗಲೇ ಪೂರ್ವ ಸಿದ್ಧತೆಗಳನ್ನು ಕೈಗೊಂಡಿದ್ದು, ಎಲ್ಲ ಶಾಲೆಗಳಿಗೂ ಆಹ್ವಾನ ಪತ್ರ ಕಳುಹಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಈ ಸಂದರ್ಭ ಕಸಾಪ ಸದಸ್ಯ ಕುಡೆಕಲ್ ಗಣೇಶ್, ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಸದಸ್ಯರುಗಳಾದ ನಾರಾಯಣ, ಗುರುಬಸಪ್ಪ, ಎಸ್. ಧನಪಾಲ್, ಗುಡ್ಡೆಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಸಣ್ಣಸ್ವಾಮಿ, ಬಸವನಹಳ್ಳಿ ಪ್ರೌಢಶಾಲಾ ಶಿಕ್ಷಕ ಚಂದ್ರ ನಾಯಕ್, ನವೀನ್ ಚಂದ್ರಶೇಖರ್ ಇನ್ನಿತರರಿದ್ದರು.