ಸೋಮವಾರಪೇಟೆ, ಜ.27: ಕಳೆದ 2004ರಲ್ಲಿ ಆಗಿರುವ ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿರುವ ಹಿನ್ನೆಲೆ ಇದೀಗ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾಗಿರುವ ವಿಜಯಲಕ್ಷ್ಮೀ ಸುರೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ ಹಿನ್ನೆಲೆ ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ಮುಂದೂಡಲಾಯಿತು.ಪ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ ಪ.ಪಂ. ಸಭಾಂಗಣದಲ್ಲಿ ಆಯೋಜನೆಗೊಂಡಿದ್ದು, ಸಭೆಯ ಪ್ರಾರಂಭದಲ್ಲಿಯೇ ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷೆಯ ರಾಜೀನಾಮೆಗೆ ಆಗ್ರಹಿಸಿದರು.
2004ರಲ್ಲಿ ನಡೆದ ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ಅಂದು ಸದಸ್ಯೆಯಾಗಿದ್ದ ವಿಜಯಲಕ್ಷ್ಮೀ ಅವರ ವಿರುದ್ಧ ಇತ್ತೀಚೆಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಹಿನ್ನೆಲೆ ಅಧ್ಯಕ್ಷೆ ಸ್ಥಾನದಲ್ಲಿ ಮುಂದುವರೆಯಲು ನೈತಿಕತೆಯಿಲ್ಲ. ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಸದಸ್ಯರುಗಳಾದ ಕೆ.ಎ. ಆದಂ, ಶೀಲಾ ಡಿಸೋಜ, ಮೀನಾಕುಮಾರಿ, ನಾಮನಿರ್ದೇಶಿತ ಸದಸ್ಯೆ ಬಿ.ಜಿ. ಇಂದ್ರೇಶ್ ಅವರುಗಳು ಒತ್ತಾಯಿಸಿದರು.
ಅಧ್ಯಕ್ಷರು ರಾಜೀನಾಮೆ ನೀಡದಿದ್ದರೆ ಸಭೆ ನಡೆಸಲು ಬಿಡುವದಿಲ್ಲ. ಸಭೆ ಮುಂದೂಡಿ ಎಂದು ಒತ್ತಾಯಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷೆ ವಿಜಯಲಕ್ಷ್ಮೀ ಅವರು, ಮೊಕದ್ದಮೆ ದಾಖಲಾಗಿರುವ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಯಾವದೇ ಸಮನ್ಸ್ ಬಂದಿಲ್ಲ. ಒಂದು ವೇಳೆ ಮೊಕದ್ದಮೆ ದಾಖಲಾಗಿದ್ದರೆ ಅದನ್ನು ನ್ಯಾಯಾಲಯದಲ್ಲಿಯೇ ಪ್ರಶ್ನಿಸುತ್ತೇವೆ. ಸಭೆಯಲ್ಲಿ ವೃಥಾ ಗೊಂದಲ ಸೃಷ್ಟಿಸಬೇಡಿ ಎಂದರು.
ಇದಕ್ಕೆ ಒಪ್ಪದ ವಿಪಕ್ಷ ಸದಸ್ಯರು ಅಧ್ಯಕ್ಷೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಖಾತೆ ವರ್ಗಾವಣೆಯ ದಾಖಲೆಗಳ ಪರಿಶೀಲನೆ ಕಾರ್ಯವನ್ನು ಪ.ಪಂ. ಮುಖ್ಯಾಧಿಕಾರಿ ಮತ್ತು ಕಂದಾಯ ನಿರೀಕ್ಷಕರು ಮಾಡುತ್ತಾರೆ. ಸಾಮಾನ್ಯ ಸಭೆಯಲ್ಲಿ ಖಾತೆ ವರ್ಗಾವಣೆಗೆ ಒಪ್ಪಿಗೆಯನ್ನಷ್ಟೇ ಪಡೆಯುತ್ತಾರೆ. 2004ರಲ್ಲಿ ನಡೆದಿರುವ ಖಾತೆ ಬದಲಾವಣೆ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ನೀವುಗಳು ಸಭೆಗೆ ಅಗೌರವ ತರಬೇಡಿ. ಗೊಂದಲ ಸೃಷ್ಟಿಸಬೇಡಿ ಎಂದು ವಿಜಯಲಕ್ಷ್ಮೀ ಸುರೇಶ್ ಹೇಳಿದರು.
ಇಷ್ಟಕ್ಕೂ ಸುಮ್ಮನಾಗದ ಕಾಂಗ್ರೆಸ್ ಸದಸ್ಯರು ತಮ್ಮ ವಾದವನ್ನು ಮುಂದುವರೆಸಿದರು. ಈ ಸಂದರ್ಭ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದವು.
(ಮೊದಲ ಪುಟದಿಂದ) 2004ರಲ್ಲಿ ತಾನು ಸದಸ್ಯೆಯಷ್ಟೇ. ಅಧ್ಯಕ್ಷೆಯಾಗಿರಲಿಲ್ಲ. ಅಷ್ಟಕ್ಕೂ ಖಾತೆ ವರ್ಗಾವಣೆ ಕಂದಾಯ ನಿರೀಕ್ಷಕರು ಮತ್ತು ಮುಖ್ಯಾಧಿಕಾರಿಗಳ ಅಧಿಕಾರ ವ್ಯಾಪ್ತಿಯಲ್ಲಿದೆ. ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ನಾವುಗಳೂ ಸಹ ಕಾನೂನು ಹೋರಾಟ ಮಾಡುತ್ತೇವೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದ್ದು ಸಹಕರಿಸಿ ಎಂದರು.
ಆದರೂ ಸಭೆಯಲ್ಲಿ ಗೊಂದಲ ಮುಂದುವರೆಯಿತು. ಈ ಸಂದರ್ಭ ಅಧ್ಯಕ್ಷೆ ಸಹಿತ ಬಿಜೆಪಿ ಸದಸ್ಯರು ಸಭಾಂಗಣದಿಂದ ಹೊರ ಬಂದು ಚರ್ಚಿಸಿ ಕೋರಂ ಇರುವ ಹಿನ್ನೆಲೆ ಸಭೆಯನ್ನು ನಡೆಸುವ ತೀರ್ಮಾನ ಕೈಗೊಂಡು ಸಭಾಂಗಣದ ಒಳಗೆ ಆಗಮಿಸಿ ಸಭೆ ನಡೆಸಲು ಮುಂದಾದರು. ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ಆಸನದ ಎದುರು ಬಂದು ಸಭೆ ನಡೆಸಲು ಬಿಡುವದಿಲ್ಲ. ಮೊಕದ್ದಮೆ ದಾಖಲಾಗಿರುವ ಹಿನ್ನೆಲೆ ನೀವು ಸಭೆ ನಡೆಸಬೇಡಿ, ಬೇಕಾದರೆ ಬಿ.ಎಂ. ಸುರೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಎಂದರು.
2004 ಆಡಳಿತ ಮಂಡಳಿಯಲ್ಲಿ ನೀವೂ ಸಹ ಸದಸ್ಯರಾಗಿದ್ದೀರಿ. ನಿಮ್ಮ ಮೇಲೂ ಮೊಕದ್ದಮೆ ದಾಖಲಾಗಿದೆ. ಮೊದಲು ನೀವು ರಾಜೀನಾಮೆ ನೀಡಿ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರು ಕೆ.ಎ. ಆದಂ ಅವರಿಗೆ ಸವಾಲು ಹಾಕಿದರು. ನಾನು ಈಗಲೇ ರಾಜೀನಾಮೆ ನೀಡುತ್ತೇನೆ. ನೀವೂ ನೀಡಿ ಎಂದು ಆದಂ ಪ್ರತಿ ಸವಾಲು ಎಸೆದರು.
ಈ ಬಗ್ಗೆ ಕೆಲಕಾಲ ವಾದ ವಿವಾದ ನಡೆಯಿತೇ ಹೊರತು ಯಾವದೇ ತೀರ್ಮಾನಕ್ಕೆ ಬರಲಾಗಲಿಲ್ಲ. ಬಿ.ಎಂ. ಸುರೇಶ್ ಅಧ್ಯಕ್ಷೆಯಲ್ಲಿ ಸಭೆ ನಡೆಸಿ ಎಂದು ವಿಪಕ್ಷ ಸದಸ್ಯರು ಹೇಳಿದ ಸಂದರ್ಭ, ಅಧ್ಯಕ್ಷೆ ವಿಜಯಲಕ್ಷ್ಮೀ ಅವರು ‘ನೀವು ಹೇಳಿದಂತೆ ಕೇಳಲು ಆಗುವದಿಲ್ಲ. ಸಭೆ ಪ್ರಾರಂಭಿಸಿ’ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.
ವಿಪಕ್ಷದವರು ಸಭೆ ನಡೆಸದಂತೆ ಮುಖ್ಯಾಧಿಕಾರಿಯನ್ನು ತಡೆದರು. ಇದರಿಂದಾಗಿ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಅಡಕತ್ತರಿಯಲ್ಲಿ ಸಿಲುಕಿದಂತಾಯಿತು. ಅಂತಿಮವಾಗಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವದು. ಸದ್ಯಕ್ಕೆ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವದು ಎಂದು ಪ್ರಕಟಿಸಿದರು.
ಏನಿದು ಪ್ರಕರಣ?: ರೇಂಜರ್ ಬ್ಲಾಕ್ನ ನಿವಾಸಿ ದಿ. ನರಸ ಅವರಿಗೆ 1957-58ರಲ್ಲಿ ನಗರೂರು ಗ್ರಾಮದ 0.10 ಸೆಂಟ್ ಜಾಗವನ್ನು ಸರ್ಕಾರ ಮಂಜೂರು ಮಾಡಿತ್ತು. ಇದನ್ನು 1967ರಲ್ಲಿ ಲಿಂಗರಾಜು ಅವರಿಗೆ ರೂ. 1 ಸಾವಿರಕ್ಕೆ ಭೋಗ್ಯಕ್ಕೆ ನೀಡಿದ್ದರು. 1984ರಲ್ಲಿ ಮನೆ ಬಿಟ್ಟುಕೊಡುವಂತೆ ಕೇಳಿಕೊಂಡಿದ್ದರೂ ಬಿಟ್ಟುಕೊಟ್ಟಿರಲಿಲ್ಲ.
ನರಸ ಅವರ ನಿಧನದ ನಂತರ ಅವರ ಪುತ್ರ ರಾಮಚಂದ್ರ ಅವರು ಈ ಬಗ್ಗೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಮೇರೆ ವಿಚಾರಣೆ ನಡೆದು ಹೆಚ್.ಎನ್. ರಾಮಚಂದ್ರ ಅವರಿಗೆ ಮನೆ ಬಿಟ್ಟುಕೊಡುವಂತೆ ಆದೇಶ ಬಂದಿತ್ತು. ಆದರೂ ಈ ಆದೇಶವನ್ನು ಅಧಿಕಾರಿಗಳು ಪಾಲಿಸಿರಲಿಲ್ಲ.
ಈ ಮಧ್ಯೆ ರಾಮಚಂದ್ರ ಅವರಿಗೆ ಸೇರಿದ್ದ ಮನೆ ನಿವೇಶನವನ್ನು ಬಿ.ಆರ್. ಲಿಂಗರಾಜು ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ 2004ರಲ್ಲಿ ತಮ್ಮ ಹೆಸರಿಗೆ ದಾಖಲೆಗಳನ್ನು ಮಾಡಿಸಿಕೊಂಡಿದ್ದು, ಇದಕ್ಕೆ ಅಂದಿನ ಮುಖ್ಯಾಧಿಕಾರಿ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ಹೊಣೆಗಾರರಾಗಿದ್ದಾರೆ ಎಂದು ರಾಮಚಂದ್ರ ಅವರು ನ್ಯಾಯಾಲಯಕ್ಕೆ ಖಾಸಗಿ ಮೊಕದ್ದಮೆ ದಾಖಲಿಸಿದ್ದರು.
ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಲಾಗಿದ್ದು, ಬಿ.ಆರ್.ಲಿಂಗರಾಜು ಸೇರಿದಂತೆ, ಅಂದಿನ ಮುಖ್ಯಾಧಿಕಾರಿ, ಅಧ್ಯಕ್ಷರು, ಸದಸ್ಯರುಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಅರ್ಜಿದಾರ ರಾಮಚಂದ್ರ ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆ ನ್ಯಾಯಾಲಯವು ಅಂದಿನ ಆಡಳಿತ ಮಂಡಳಿಯ ಸದಸ್ಯರುಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಸೂಚಿಸಿದೆ.
ಈ ಹಿನ್ನೆಲೆ ಲಿಂಗರಾಜು, ಅಂದಿನ ಮುಖ್ಯಾಧಿಕಾರಿ, ಅಧ್ಯಕ್ಷೆ ಲೀಲಾ ನಿರ್ವಾಣಿ, ಸದಸ್ಯರುಗಳಾಗಿದ್ದ ವಿಜಯಲಕ್ಷ್ಮೀ, ಉಷಾ ತೇಜಸ್ವಿ, ಎ.ಎಸ್. ಮಲ್ಲೇಶ್, ಹೆಚ್.ಎಸ್. ಶೋಭ, ಕೆ.ಎ. ಆದಂ, ಬಿ. ಸಂಜೀವ, ಎಸ್.ಎಸ್. ಮೂರ್ತಿ, ಎ.ಬಿ. ಅಜಯ್ಕುಮಾರ್, ನಳಿನಿ ಗಣೇಶ್ ಅವರುಗಳಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಇದರ ಪ್ರಥಮ ವಿಚಾರಣೆ ತಾ.29.01.2018ರಂದು ನಡೆಯಲಿದೆ. -ವಿಜಯ್