ಸಿದ್ದಾಪುರ, ಜ. 27: ಜಾನುವಾರು ಸಾಗಾಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 9 ಜಾನುವಾರುಗಳನ್ನು ಮರಳಿ ಪಿಂಜರ್ ಪೋಲ್ಗೆ ನೀಡುವಂತೆ ಮಡಿಕೇರಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಕೆಲವು ತಿಂಗಳುಗಳ ಹಿಂದೆ ನೆಲ್ಯಹುದಿಕೇರಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ್ದ ಸುಳಿವಿನ ಮೇರೆಗೆ ಸಿದ್ದಾಪುರ ಪೋಲಿಸರು ಧಾಳಿ ನಡೆಸಿ 9 ಜಾನುವಾರುಗಳನ್ನು ವಶಪಡಿಸಿ ಕೊಂಡು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಶಪಡಿಸಿಕೊಂಡಿದ್ದ 9 ಜಾನುವಾರು ಗಳನ್ನು ಮೈಸೂರಿನ ಗೋಶಾಲೆಗೆ ಕಳುಹಿಸಿಕೊಡಲಾಗಿತ್ತು. ಈ ಬಗ್ಗೆ ನ್ಯಾಯಾಲಯದ ಮೊರೆ ಹೋದ ಕೆ.ಎಂ ಬಷೀರ್ ಎಂಬವರು ಸಾಕಲು ತಂದ ಜಾನುವಾರುಗಳನ್ನು ಪೊಲೀಸರು ಕಾನೂನಿಗೆ ವಿರುದ್ಧವಾಗಿ ವಶಪಡಿಸಿಕೊಂಡು ಮೈಸೂರಿನ ಗೋಶಾಲೆಗೆ ನೀಡಿದ್ದಾರೆ ಎಂದು ಮಡಿಕೇರಿಯ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗೋ ಶಾಲೆಯ ವಶದಲ್ಲಿ ರುವ ಜಾನುವಾರುಗಳನ್ನು ಮರಳಿ ಅದರ ವಾರಿಸುದಾರರಿಗೆ ಸಾಕಲು ನೀಡಬೇಕೆಂದು ನ್ಯಾಯಾಲಯ ಅದೇಶ ನೀಡಿದ್ದರಿಂದ ಮೈಸೂರಿನಿಂದ 9 ಜಾನುವಾರುಗಳನ್ನು ನೆಲ್ಯಹುದಿಕೇರಿಗೆ ತಂದು ವಾರಿಸುದಾರರಿಗೆ ನೀಡಲಾಯಿತು. ಆದೇಶದ ವಿರುದ್ಧ ಮಹಾವೀರ್ ಚಂದ್ ಎಂಬವರು ಮಡಿಕೇರಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಇದೀಗ ಮರಳಿ ಜಾನುವಾರುಗಳನ್ನು ಮೈಸೂರಿನ ಗೋ ಶಾಲೆಗೆ ನೀಡುವಂತೆ ಆದೇಶ ನೀಡಿದೆ.
ಮಹಾವೀರ್ ಚಂದ್ ಪರವಾಗಿ ಮಡಿಕೇರಿಯ ವಕೀಲ ಕೃಷ್ಣ ಮೂರ್ತಿ ವಾದಿಸಿದ್ದರು.