ಮಡಿಕೇರಿ, ಜ. 27 : ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕೆಪಿಸಿಸಿಯ ಇಬ್ಬರು ವೀಕ್ಷಕರ ಉಪಸ್ಥಿತಿಯಲ್ಲಿ ತಾ. 29 ರಂದು ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆ ನಡೆಯಲಿದೆ ಎಂದು ಪಕ್ಷದ ಜಿಲ್ಲಾ ವಕ್ತಾರ ಪಪ್ಪು ತಿಮ್ಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಗರದ ಹೋಟೆಲ್ ವ್ಯಾಲಿವ್ಯೂನಲ್ಲಿ ಕೆಪಿಸಿಸಿ ವೀಕ್ಷಕರಾದ ಎಂಎಲ್ಸಿ ಆರ್.ಧರ್ಮಸೇನ ಹಾಗೂ ಮಾಜಿ ಎಂಎಲ್ಸಿ ಬಾಲರಾಜ್ ಅವರು ಜಿಲ್ಲಾ ಕಾಂಗ್ರೆಸ್ ಪ್ರಮುಖರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಕರ್ತರೊಂದಿಗೆ ಚುನಾವಣಾ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಚರ್ಚಿಸಿ, ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘÀಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನಾ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಇಲ್ಲಿಯವರೆಗಿನ ಅವಧಿಯಲ್ಲಿ 2097 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಬಗ್ಗೆ ಸಾಧನಾ ಸಮಾವೇಶದಲ್ಲಿ ಮೂರು ತಾಲೂಕಿನ ಯೋಜನೆ ಮತ್ತು ಬಿಡುಗಡೆಯಾದ ಅನುದಾನದ ವಿವರಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ ಸದಸ್ಯೆ ಸುನೀತ ಮಂಜುನಾಥ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭು ರೈ ಹಾಗೂ ಬೊಳ್ಳಂಡ ಶರಿ ಗಿರೀಶ್ ಉಪಸ್ಥಿತರಿದ್ದರು.