ನಾಪೆÇೀಕ್ಲು, ಜ. 27: ಕಕ್ಕಬ್ಬೆ – ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ನಾಲ್ಕು ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಲಗ್ಗೆಯಿಡುವದರ ಮೂಲಕ ಕಾಫಿ ಗಿಡ, ಫಸಲು, ಬಾಳೆ, ತೆಂಗು, ಅಡಿಕೆ ಗಿಡಗಳು ಧ್ವಂಸಗೊಂಡು ಅಪಾರ ನಷ್ಟ ಸಂಭವಿಸಿದೆ.
ಗ್ರಾಮದ ಬಡಕಡ ಸುರೇಶ್ ಬೆಳ್ಯಪ್ಪ, ಐನಮಂಡ ರೈನಾ ಕಾರ್ಯಪ್ಪ, ಕಾಂಡಂಡ ಸುನಿಲ್ ಅವರ ತೋಟ ಹಾಗೂ ಇತರ ಕಾಫಿ ತೋಟಗಳಲ್ಲಿ ನಾಲ್ಕು ಕಾಡಾನೆಗಳು ಅತ್ತಿಂದಿತ್ತ ಸಂಚರಿಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಕಾರ್ಮಿಕರ ಸಮಸ್ಯೆಯಿಂದ ಕಾಫಿ ಕುಯ್ಲಿಗೆ ಹರಸಾಹಸ ಪಡುತ್ತಿರುವ ಬೆಳೆಗಾರರಿಗೆ ಕಾಡಾನೆ ಹಾವಳಿ ನಿದ್ದೆಗೆಡಿಸಿದೆ. ಕಾಡಾನೆಯನ್ನು ಕೂಡಲೇ ಕಾಡಿಗಟ್ಟುವ ಕಾರ್ಯ ಕೈಗೊಳ್ಳುವದರೊಂದಿಗೆ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಸರಕಾರವನ್ನು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ನಾಪೆÇೀಕ್ಲು ವಲಯ ಅರಣ್ಯ ಉಪಸಂರಕ್ಷಣಾಧಿಕಾರಿ ಸುರೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಬೀಡುಬಿಟ್ಟಿರುವ ಕಾಡಾನೆಗಳು
ಸಿದ್ದಾಪುರ: ಇತ್ತೀಚೆಗೆ ಕಾಫಿ ಬೆಳೆಗಾರರಾದ ಮೋಹನ್ದಾಸ್ ಅವರ ಮೇಲೆ ಕಾಡಾನೆ ಧಾಳಿ ನಡೆಸಿದ ಬಳಿಕ ಕಾಡಾನೆಗಳ ಹಿಂಡು ಕರಡಿಗೋಡು ವ್ಯಾಪ್ತಿಯ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ. ಆರ್.ಆರ್.ಟಿ. ತಂಡವು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದೆ. ರಾತ್ರಿ ಸಮಯದಲ್ಲಿ ಹಿಂತಿರುಗಿ ಕಾಫಿ ತೋಟಗಳಿಗೆ ಬರುತ್ತಿದ್ದು ಅರಣ್ಯ ಇಲಾಖೆಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರವು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ ಅಜ್ಜಿನಿಕಂಡ ರಾಜುಅಪ್ಪಯ್ಯ ಮನವಿ ಮಾಡಿದ್ದಾರೆ.
ಹುಲಿ ಧಾಳಿ
ಸಿದ್ದಾಪುರ: ಕಾಡು ಕೋಣವೊಂದರ ಮೇಲೆ ಹುಲಿ ಧಾಳಿ ನಡೆಸಿದ ಘಟನೆ ಸಿದ್ದಾಪುರ ಸಮೀಪದ ಬೀಟಿಕಾಡು ಕಾಫಿ ತೋಟದ ಒಳಗೆ ನಡೆದಿದೆ.
ಸಿದ್ದಾಪುರ ಬೀಟಿಕಾಡು ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡುಕೋಣಗಳ ಪೈಕಿ ಕಳೆದ ಮೂರು ದಿನಗಳ ಹಿಂದೆ ಕಾಡುಕೋಣವೊಂದು ಕೆರೆಗೆ ನೀರು ಕುಡಿಯಲು ತೆರಳಿ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿತ್ತು. ಇದೀಗ ಕಾಡುಕೋಣವೊಂದನ್ನು ಹುಲಿಯು ಧಾಳಿ ನಡೆಸಿ ಕಾಫಿ ತೋಟದ ಒಳಗೆ ತಿಂದು ಅರ್ಧ ಭಾಗವನ್ನು ತೋಟದ ಒಳಗೆ ಬಿಟ್ಟು ಹೋಗಿದೆ. ಕಾರ್ಮಿಕರು ಇಂದು ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಕಾಡುಕೋಣದ ಅವಶೇಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಚೌಡಿಕಾಡು, ಬಿಬಿಟಿಸಿ ಕಂಪೆನಿಗೆ ಸೇರಿದ ಬೀಟಿಕಾಡು ಕಾಫಿ ತೋಟಗಳಲ್ಲಿ ಜಾನುವಾರಗಳ ಮೇಲೆ ಧಾಳಿ ನಡೆಸಿ ಹುಲಿಯು ಅಟ್ಟಹಾಸ ಮೆರೆಯುತ್ತಿದ್ದರೂ ಕೂಡ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಹುಲಿಯನ್ನು ಸೆರೆಹಿಡಿಯಲು ಯಾವದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಕಾರ್ಮಿಕರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲು ಪ್ರಾರಂಭವಾಗಿದ್ದು ಒಂದೆಡೇ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಹುಲಿಯ ಉಪಟಳದಿಂದಾಗಿ ಹಾಗೂ ಕಾಡುಕೋಣಗಳ ಉಪಟಳದಿಂದ ಕೆಲಸ ಮಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಹುಲಿಯನ್ನು ಸೆರೆಹಿಡಿಯಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ.