ಮಡಿಕೇರಿ, ಜ. 26: ಓಡಿಪಿ ಸಂಸ್ಥೆಯ ಸ್ನೇಹಾಶ್ರಯ ಸಮಿತಿಯ ದಶಮಾನೋತ್ಸವದ ಅಂಗವಾಗಿ ತಾ. 27 ರಂದು (ಇಂದು) ‘ನನ್ನ ಆರೋಗ್ಯ ನನ್ನ ಹಕ್ಕು-ಕಳಂಕ ತಾರತಮ್ಯ ತಡೆಯೋಣ’ ಘೋಷ ವಾಕ್ಯದೊಂದಿಗೆ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ನೇಹಾಶ್ರಯ ಸಮಿತಿಯ ಕಾರ್ಯಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು, ಲಯನ್ಸ್ ಮತ್ತು ಲಯನೆಸ್ ಕ್ಲಬ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಓಡಿಪಿ ಸಂಸ್ಥೆ ಮೈಸೂರು, ಮಹಿಳೋದಯ ಮಹಿಳಾ ಒಕ್ಕೂಟ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ರೋಟರಿ ಮಿಸ್ಟಿ ಹಿಲ್ಸ್, ಕೊಡವ ಸಮಾಜ ಹಾಗೂ ಸರ್ವೋದಯ ನೆಟ್ ವಕ್ರ್ಸ್‍ನ ಸಂಯುಕ್ತ ಆಶ್ರಯದಲ್ಲಿ ನಡೆÀಯುತ್ತಿರುವ ಕಾರ್ಯಾಗಾರವನ್ನು ಬೆಳಿಗ್ಗೆ 10.30 ಗಂಟೆಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದರು.

ಸ್ನೇಹಾಶ್ರಯ ಸಮಿತಿಯ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿದ ಅವರು, ಕಳೆದ 10 ವರ್ಷಗಳಿಂದ ಜಿಲ್ಲೆಯ ಹೆಚ್‍ಐವಿ ಮತ್ತು ಏಡ್ಸ್ ಸೋಂಕಿತ ಮಕ್ಕಳ ಆರೈಕೆಯಲ್ಲಿ ಸಮಿತಿ ತೊಡಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಎಆರ್‍ಟಿ ಸೆಂಟರ್‍ನಿಂದ ಶಿಫಾರಸ್ಸು ಮಾಡಲ್ಪಟ್ಟ ಎರಡರಿಂದ 18 ವರ್ಷದೊಳಗಿನ, ಬಡತನ ರೇಖೆಗಿಂತ ಕೆಳಗಿರುವ ನೊಂದ ಸೋಂಕಿತ ಮಕ್ಕಳಿಗೆ ಸಂಸ್ಥೆ ಆಶ್ರಯ ನೀಡುತ್ತಿದೆ.

ಮಕ್ಕಳಿಗೆ ಪೌಷ್ಟಿಕ ಆಹಾರ, ಆರೋಗ್ಯ, ವಿದ್ಯಾಭ್ಯಾಸ, ಆಪ್ತ ಸಮಾಲೋಚನೆ ಹಾಗೂ ಪೋಷಕರಿಗೆ ಆತ್ಮ ಸ್ಥೈರ್ಯ ಮೂಡಿಸುವದು ಸಂಸ್ಥೆಯ ಉದ್ದೇಶವಾಗಿದೆ. ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮ್ಮ ಸಂಸ್ಥೆ ಪ್ರಸ್ತುತ 31 ಮಕ್ಕಳ ಆರೈಕೆಯಲ್ಲಿ ತೊಡಗಿದೆ. ಇವರಲ್ಲಿ ಮೂವರು ಮಕ್ಕಳು ಅಕಾಲಿಕವಾಗಿ ಮೃತಪಟ್ಟಿದ್ದು, ಉಳಿದವರನ್ನು ಸುವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳ ಲಾಗುತ್ತಿದೆ ಎಂದರು. ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕದ ಡಾ. ಶಿವಕುಮಾರ್ ಮಾತನಾಡಿ, ವಿಶೇಷ ಪಾಲನ ಯೋಜನೆಯಡಿ ಹೆಚ್‍ಐವಿ ಸೋಂಕಿತ ಹಾಗೂ ಬಾಧಿತ 96 ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ತಲಾ ಒಂದು ಸಾವಿರ ರೂಪಾಯಿ ನೀಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕದ ಮೇಲ್ವಿಚಾರಕ ಸುನೀತಾ ಮುತ್ತಣ್ಣ, ಸ್ನೇಹಾಶ್ರಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಾಯ್ಸ್ ಮೆನೇಜಸ್, ಸರ್ವೋದಯ ನೆಟ್ ವಕ್ರ್ಸ್‍ನ ಎ.ಬಿ. ಚಂಗಪ್ಪ ಹಾಗೂ ಲಯನೆಸ್ ಕ್ಲಬ್‍ನ ಕನ್ನಂಡ ಕವಿತಾ ಬೊಳ್ಳಪ್ಪ ಉಪಸ್ಥಿತರಿದ್ದರು.