ನಾಪೋಕ್ಲು, ಜ. 26: ಇಲ್ಲಿಗೆ ಸಮೀಪದ ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಗೆ ಒಳಪಟ್ಟ ನಾಲಡಿ ಗ್ರಾಮದ ಪೊನ್ನೋಳಂಡ ಪೊನ್ನಪ್ಪ ಎಂಬವರ ಮೇಯಲು ಬಿಟ್ಟ ಹಸುವೊಂದು ಆನೆ ಧಾಳಿಗೆ ಸಿಲುಕಿ ಸಾವನ್ನಪ್ಪಿದೆ. ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಧಾಳಿಯಾಗುತ್ತಿದ್ದು ಗ್ರಾಮಸ್ಥರು ಭಯಭೀüತರಾಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಮೇಯಲು ಬಿಟ್ಟ ಹಸು ಕೊಟ್ಟಿಗೆಗೆ ಬಾರದ ಕಾರಣ ಹುಡುಕಲು ತೆರಳಿದ ಪೊನ್ನಪ್ಪ ಅವರಿಗೆ ಮನೆಯಿಂದ ಕೂಗಳತೆ ದೂರದಲ್ಲಿ ಹಸುವಿನ ಮೃತದೇಹ ದೊರೆತಿದೆ. ಈಗ ಕಾಫಿ ಕೊಯ್ಲಿನ ಕೆಲಸ ಬಿರುಸುಗೊಂಡಿದ್ದು ಇದೀಗ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಹಣ್ಣಾದ ಕಾಫಿ ಫಸಲನ್ನು ಆನೆಗಳು ತಿಂದು ನಷ್ಟವನ್ನುಂಟುಮಾಡುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಒಂದು ಮರಿಯಾನೆ ಸೇರಿದಂತೆ ಮೂರು ಆನೆಗಳು ನಿರಂತರವಾಗಿ ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಅವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.