ಮಡಿಕೇರಿ, ಜ. 26: ಗಣರಾಜ್ಯೋತ್ಸವ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹಾಗೂ ಅತಿಥಿಗಳು ಸರಕಾರದ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು. ಇಲ್ಲಿನ ಕಾವೇರಿ ಕಲಾಕ್ಷೇತ್ರ ಮುಂಭಾಗದಲ್ಲಿ ವಿಶೇಷಚೇತನ ಮಂದಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಅಲ್ಲದೆ ಸ್ತ್ರೀಶಕ್ತಿ ಒಕ್ಕೂಟಕ್ಕೆ ಮೊಬೈಲ್ ಕ್ಯಾಂಟೀನ್ ನಡೆಸುವ ಸಂಬಂಧ ಅನುದಾನದೊಂದಿಗೆ ಅನುಮತಿ ಪತ್ರ ವಿತರಿಸಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ‘ಲ್ಯಾಪ್‍ಟಾಪ್’ಗಳನ್ನು ವಿತರಿಸಿ ಶುಭ ಹಾರೈಸಿದರು. ಸಚಿವರೊಂದಿಗೆ ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಶ್ರೀವಿದ್ಯಾ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಸೇರಿದಂತೆ ವಿವಿಧ ಮುಖಂಡರು, ಇಲಾಖಾ ಅಧಿಕಾರಿಗಳು ನಗರಸಭಾ ಸದಸ್ಯರು, ಇತರರು ಹಾಜರಿದ್ದರು.