ವೀರಾಜಪೇಟೆ, ಜ. 26: ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಕೇರಳದ ಹುಲಿಕಲ್‍ನ ಆದಿ ಬೈತೂರಪ್ಪ ವಾರ್ಷಿಕ ಉತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು.

10ನೇ ಊಟ್ ಉತ್ಸವದ ಅಂಗವಾಗಿ ದೇವಣಗೇರಿಯ ಪುಗ್ಗೇರ ತಕ್ಕ ಮುಖ್ಯಸ್ಥರು ಉತ್ಸವ ಮೂರ್ತಿ ಯನ್ನು ಹೊತ್ತ ಆನೆ ಅಂಬಾರಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದಾಗ ಬಾಳೋಪಾಟ್ ಹಾಡುತ್ತಿದ್ದಂತೆ ಅಂಬಾರಿ ಮುಂದೆ ಸಾಗುತ್ತಿತ್ತು.

ಆನೆಯಿಂದ ಪುರೋಹಿತ ದೇವರ ವಿಗ್ರಹ ಕೆಳಗಿಳಿಸುವ ಸಮಯದಲ್ಲಿ ಶಿವ ತಾಂಡವ ನೃತ್ಯದೊಡನೆ ಭಂಡಾರ ಪಡೆಯುವ ದೃಶ್ಯ ಭಕ್ತಾದಿಗಳಿಗೆ ಅಮೋಘವಾಗಿತ್ತು.

11ನೇ ಊಟ್ ಉತ್ಸವದಲ್ಲಿ ಹಿಂದೆಂದೂ ಕಾಣದ ಭಕ್ತಾದಿಗಳು ಭಾಗವಹಿಸಿದ್ದುದು ವಿಶೇಷವೆನಿಸಿತ್ತು. ದೇವರು ಮೈದುಂಬಿ ಬರುವ ತಿರೋಳಕಾರರ ದೃಶ್ಯ ಹಾಗೂ ಭಕ್ತಾದಿಗಳು ದೇವರ ಆಶೀರ್ವಾದ ಪಡೆದು ಪುನೀತರಾಗುವ ದೃಶ್ಯ ಭಕ್ತಾದಿಗಳನ್ನು ಚಕಿತಗೊಳಿಸಿತು.

ಈ ಬಾರಿ ಬೈತೂರು ಉತ್ಸವದಲ್ಲಿ ಕೊಡಗಿನ ಭಕ್ತಾದಿಗಳಿಗೆ ತಂಗಲು ‘ಕೊಡಗು ಹಾಲ್’ ಭವನ ನಿರ್ಮಿಸಿರುವದರಿಂದ ಸಹಸ್ರಾರು ಭಕ್ತಾದಿಗಳು ತಂಗಲು ಅನುಕೂಲವಾಯಿತು. ಇದರಿಂದ ಭಕ್ತಾದಿಗಳ ಸಂಖ್ಯೆ ಅಧಿಕವಾಗಿತ್ತೆಂದು ಪುಗ್ಗೇರ ಪೊನ್ನಪ್ಪ ಹಾಗೂ ಬಿಲ್ಡಿಂಗ್ ಫಂಡ್‍ನ ಅಧ್ಯಕ್ಷ ಪುಗ್ಗೇರ ರಂಜಿ ದೇವಯ್ಯ ತಿಳಿಸಿದರು.