ಒಡೆಯನಪುರ, ಜ. 24: ಶನಿವಾರಸಂತೆ ಗ್ರಾ.ಪಂ. ಆಡಳಿತ ಮಂಡಳಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಈ ಹಿಂದಿನ ಮಾಸಿಕ ಸಭೆಗಳಲ್ಲಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಬಾಕಿಯಾಗಿರುವ ಕಾಮಗಾರಿಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಿದರು.
ಅದರಂತೆ ಹಿಂದಿನ ಮಾಸಿಕ ಸಭೆಗಳಲ್ಲಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಆಟೋರಿಕ್ಷಾ ಹಾಗೂ ಇತರ ಟ್ಯಾಕ್ಷಿ ವಾಹನಗಳಿಗೆ ವಾಹನಗಳನ್ನು ನಿಲುಗಡೆ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ತೀರ್ಮಾನಿಸಲಾಗಿತ್ತು. ಅಲ್ಲದೆ ಇದೇ ಬೈಪಾಸ್ ರಸ್ತೆಯಲ್ಲಿ ಸಂತೆ ಮಾರುಕಟ್ಟೆ ಇರುವದರಿಂದ ಸಂತೆ ದಿನ ವರ್ತಕರು ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುವದರ ಜೊತೆಯಲ್ಲಿ ಜನರಿಗೂ ತೊಂದರೆ ಯಾಗುತ್ತಿರುವದರಿಂದ ಸಂತೆ ದಿನ ವ್ಯಾಪಾರಿಗಳು ಗ್ರಾ.ಪಂ. ಸಂತೆ ಮಾರುಕಟ್ಟೆಯೊಳಗೆ ನಿಗದಿಪಡಿಸಿದ ಸ್ಥಳದಲ್ಲಿ ವ್ಯಾಪಾರ ನಡೆಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡುವಂತೆಯೂ ಸಭೆಯಲ್ಲಿ ತೀರ್ಮಾನಿಸಲಾಗಿತು, ಆದರೆ ಅಂದು ಸಭೆಯಲ್ಲಿ ತೀರ್ಮಾನಿಸಿದ ಯಾವ ಕೆಲಸವೂ ಆಗಿಲ್ಲ ಎಂದು ಸದಸ್ಯ ಸರ್ದಾರ್ ಆಹಮದ್, ಹೆಚ್.ಆರ್. ಹರೀಶ್ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್ ಮತ್ತು ಪಿಡಿಓ ಧನುಂಜಯ್ ಈ ಬಗ್ಗೆ ಸಂತೆ ಮಾರುಕಟ್ಟೆಯೊಳಗೆ ನಾವು ಸೂಚಿಸುವ ಸ್ಥಳದಲ್ಲಿ ವ್ಯಾಪಾರಿಗಳು ವ್ಯಾಪಾರ ನಡೆಸಬೇಕೆಂದು ವ್ಯಾಪಾರಿಗಳಿಗೆ ಸೂಚನೆ ನೀಡುತ್ತೇವೆ ಹಾಗೂ ಸಂತೆ ದಿನ ವಾಹನಗಳಿಗೆ ಏಕಮುಖ ಸಂಚಾರದ ವ್ಯವಸ್ಥೆ ಮಾಡಿಕೊಡಬೇಕೆಂದು ಪೊಲೀಸರಿಗೆ ಮನವಿ ನೀಡಲಾಗುವದೆಂದು ಭರವಸೆ ನೀಡಿದರು. ಪಟ್ಟಣದ ಸ್ವಚ್ಛತೆ ಕುರಿತಾಗಿ ಚರ್ಚೆ ನಡೆದಾಗ ಮಧ್ಯಪ್ರವೇಶಿಸಿದ ಅಧ್ಯಕ್ಷ ಮಹಮದ್ ಗೌಸ್ ಕಾರ್ಮಿಕರ ಕೊರತೆಯಿಂದ ಪಟ್ಟಣದಲ್ಲಿ ಸಮರ್ಪಕ ವಾಗಿ ಸ್ವಚ್ಛತೆ ಮಾಡಲಾಗುತ್ತಿಲ್ಲ. ಕಾನೂನು ನಿಯಮದ ಪ್ರಕಾರವೇ ಕಾರ್ಮಿಕರ ಸಹಾಯದಿಂದ ಪಟ್ಟಣ ವನ್ನು ಸ್ವಚ್ಛತೆ ಮಾಡಬೇಕಾಗುತ್ತದೆ. ಆದರೆ ಕಾರ್ಮಿಕರ ಕೊರತೆಯಿಂದಾಗಿ ಸಮಸ್ಯೆಯಾಗಿದೆ ಎಂದು ಹೇಳಿದ ಅಧ್ಯಕ್ಷರು ಪಟ್ಟಣದ ಸ್ವಚ್ಛತೆಗಾಗಿ ಕಾಳಜಿವಹಿಸಿ ಈ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡುವಂತೆ ಪಿಡಿಓ ಧನುಂಜಯ್ ಅವರಿಗೆ ಸೂಚಿಸಿದರು.
ಈ ಸಂದರ್ಭ ಸಾರ್ವಜನಿಕರ ಅರ್ಜಿ-ಅಹಾವಲುಗಳನ್ನು ವಿಲೇವಾರಿ ಮಾಡಲಾಯಿತು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರಾದ ಹೆಚ್.ಆರ್. ಹರೀಶ್, ಸರ್ದಾರ್ ಅಹಮದ್, ಎಸ್.ಎನ್. ಪಾಂಡು, ಎನ್.ಎ. ಆದಿತ್ಯ, ಸೌಭಾಗ್ಯಲಕ್ಷ್ಮಿ, ಉಷಾ ಜಯೇಶ್, ಹೇಮಾವತಿ, ರಜಿನಿ ರಾಜು, ಕಾರ್ಯದರ್ಶಿ ತಮ್ಮಯ್ಯ ಆಚಾರ್, ಲೆಕ್ಕಾಧಿಕಾರಿ ಶರಣಪ್ಪ ಹಾಜರಿದ್ದರು.