ಗೋಣಿಕೊಪ್ಪ ವರದಿ, ಜ. 24: ಕೊಡಗಿನ ಕೃಷಿ ಭೂಮಿ ನಾಶಕ್ಕೆ ಮೂಲ ಕಾರಣವಾಗಲಿರುವ ಕೊಡಗು ಮೂಲಕ ಹಾದು ಹೋಗಲಿರುವ ರೈಲ್ವೆ ಮಾರ್ಗ ವಿರೋಧಿಸಿ ಫೆಬ್ರವರಿಯಲ್ಲಿ ಬೃಹತ್ ವಿರೋಧಿ ಹೋರಾಟ ನಡೆಸುವ ನಿರ್ಧಾರವನ್ನು ಸ್ಥಳೀಯ ಮುಖಂಡರುಗಳ ಸಭೆಯಲ್ಲಿ ತೆಗೆದು ಕೊಳ್ಳಲಾಯಿತು.
ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಕೊಡಗು ಪರಿಸರ ರಕ್ಷಣೆಗಾಗಿ ಸ್ಥಳೀಯ ಮುಖಂಡರು ಗಳ ಸಭೆಯಲ್ಲಿ ರೈಲ್ವೆ ಮಾರ್ಗ ವಿರೋಧಿ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.
ರೈಲ್ವೆ ಮಾರ್ಗವನ್ನು ಸಂಪೂರ್ಣ ವಾಗಿ ಕೈಬಿಡುವವರೆಗೆ ಸರ್ಕಾರದ ವಿರುದ್ದ ಹೋರಾಟ ನಡೆಸಲು ನಿರ್ಧರಿಸಲಾಯಿತು. ತಾ. 27 ರಂದು ಹೋರಾಟದ ಬಗ್ಗೆ ರೂಪುರೇಷೆ ನಡೆಸಲು ಹಾಗೂ ಹೋರಾಟವನ್ನು ಎಲ್ಲಿ ನಡೆಸಬೇಕು ಎಂಬ ನಿರ್ಧಾರಕೈಗೊಳ್ಳಲು ಪೂರ್ವಭಾವಿ ಸಭೆ ನಡೆಸುವಂತೆÀ ನಿರ್ಧಾರ ಕೈಗೊಳ್ಳಲಾಯಿತು. ಗ್ರಾಮ ಮಟ್ಟದಲ್ಲಿ ಸಂಘಟಿಸಲು ಜಾಗೃತಿ ಅಭಿಯಾನ, ಯೋಜನೆ ವಿರುದ್ದ ಗ್ರಾಮ ಮಟ್ಟದಲ್ಲಿ ವಿಶೇಷ ಯಾತ್ರೆ ನಡೆಸಿ ಯೋಜನೆಯ ಪರಿಣಾಮವನ್ನು ತಿಳಿಸುವಂತೆ ಸಲಹೆ ಕೇಳಿ ಬಂದಿತು.
ಪೊನ್ನಂಪೇಟೆ ಕೊಡವ ಸಮಾಜದ ಮೂಲಕ ಜನರನ್ನು ಸಂಘಟಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಕೊಡವ ಸಮಾಜ ಅಧ್ಯಕ್ಷ ರಾಜೀವ್ ಬೋಪಯ್ಯ ಅವರಿಗೆ ಜವಬ್ದಾರಿ ನೀಡಲಾಯಿತು.
ಕೃಷಿಯನ್ನು ಸಂಪೂರ್ಣ ಅವಲಂಭಿಸಿರುವ ಕೊಡಗಿನ ಜನತೆ ಭೂಮಿಯನ್ನು ಕಳೆದುಕೊಳ್ಳುವ ಆತಂಕವಿರುವದರಿಂದ ಇಂತಹ ಯೋಜನೆಯನ್ನು ಕೈಬಿಟ್ಟು ಸರ್ಕಾರ ಕೃಷಿಗೆ ಉತ್ತೇಜನ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಮೈಸೂರು, ಪಿರಿಯಾಪಟ್ಟಣ, ಕೊಡಗು, ತಲಚೇರಿಗೆ ಸಂಪರ್ಕಿಸುವ ಮತ್ತು ಕುಶಾಲನಗರ, ಮಡಿಕೇರಿ, ಮಕ್ಕಂದೂರು ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಯನ್ನು ಸಂಪೂರ್ಣ ವಾಗಿ ವಿರೋಧಿಸಲು ಹೋರಾಟ ನಡೆಸಲು ಆಗ್ರಹಿಸಲಾಯಿತು. ಕೊಡಗಿನ ಪ್ರಾಕೃತಿಕ ಸಂಪತ್ತು ನಾಶವಾಗುವದರಿಂದ ಕೃಷಿಕನ ಪ್ರಮುಖ ಜೀವನಾಧಾರ ವಾಗಿರುವ ಕೃಷಿಭೂಮಿ ಕಳೆದುಕೊಳ್ಳುವ ಬಗ್ಗೆ ಸರ್ಕಾರ ಗಮನ ಹರಿಸುವಂತಾಗಬೇಕು ಎಂದು ಮುಖಂಡರುಗಳು ಒತ್ತಾಯಿಸಿದರು. ದಕ್ಷಿಣ ಕೊಡಗಿನ ಬಹುತೇಕ ಕೃಷಿ ಭೂಮಿ ಯೋಜನೆಯಿಂದ ನಾಶವಾಗಲಿದೆ. ಇದರಿಂದ ಪ್ರತೀ ಬೆಳೆಗಾರ ಕೂಡ ಸಂಕಷ್ಠಕ್ಕೆ ಸಿಲುಕುವ ಆತಂಕ ವ್ಯಕ್ತಗೊಂಡಿತು.
ಆಕ್ರೋಶ: ಸಂಸದ ಪ್ರತಾಪ್ ಸಿಂಹ ರೈಲ್ವೆ ಯೋಜನೆ ವಿಚಾರವನ್ನು ತನ್ನ ಹೆಗಲಿಗೆ ಇಟ್ಟು ನೀವು ನಿರಾಳರಾಗಿರಿ ಎಂದು ಜನರಲ್ಲಿ ಯೋಜನೆ ಅನುಷ್ಠಾನವಾಗದಂತೆ ತಡೆಯುವ ಭರವಸೆ ನೀಡಿ ಮಾತು ಉಳಿಸಿಕೊಂಡಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಸರ್ಕಾರದ ವಿರುದ್ದ ಹೇಳಿಕೆ ನೀಡುವ ಮೂಲಕ ಯೋಜನೆಯನ್ನು ತಡೆಯುವ ಬಗ್ಗೆ ಕಾರ್ಯ ರೂಪಿಸುತ್ತಿಲ್ಲ. ಜನರಲ್ಲಿ ರೈಲ್ವೆ ಮಾರ್ಗದಿಂದಾಗುವ ಆತಂಕ ದೂರ ಮಾಡುವ ಪ್ರಯತ್ನಕ್ಕೆ ಮುಂದಾಗಿಲ್ಲ. ಜನಪ್ರತಿನಿಧಿಯಾಗಿ ಅವರು ತೊಡಗಿಕೊಂಡಿಲ್ಲ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಗೊಂಡಿತು. ಕೊಡಗಿನ ಜನಪ್ರತಿನಿಧಿಗಳು ಕೂಡ ಯೋಜನೆ ಬಗ್ಗೆ ಜನಪರವಾಗಿ ತೊಡಗಿಕೊಳ್ಳದೆ ಕೊಡಗಿನ ರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ಆರೋಪ ಕೇಳಿ ಬಂದಿತು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ಯೋಜನೆಯಿಂದ ಕೃಷಿಕರಿಗೆ ಆಗಲಿರುವ ನಷ್ಟವನ್ನು ಗ್ರಾಮ ಮಟ್ಟದಲ್ಲಿ ಸಂಘಟಿಸಿ ಜಾಗೃತಿ ಮೂಡಿಸಬೇಕಾಗಿದೆ. ಜನಪ್ರತಿನಿಧಿಗಳು ಕೂಡ ಜನರ ಪರವಾಗಿ ಹೋರಾಟ ನಡೆಸದಿರುವದು ವಿಷಾದನೀಯ, ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ಹೆಚ್ಚು ಕೆಲಸ ಮಾಡಬೇಕಾಗಿದೆ. ಆದರೆ ಅದು ನಡೆಯುತ್ತಿಲ್ಲ ಎಂದರು.
ಸೇವ್ ಕಾವೇರಿ ಸಂಘಟನೆ ಸಂಚಾಲಕ ಕರ್ನಲ್ (ನಿ) ಚೆಪ್ಪುಡೀರ ಮುತ್ತಣ್ಣ ಮಾತನಾಡಿ, ರೈಲ್ವೆ ಮಾರ್ಗ ಅನುಷ್ಠಾನಗೊಂಡರೆ ಕೃಷಿ ಭೂಮಿಯೊಂದಿಗೆ ಆನೆ ಹಾಗೂ ಮಾನವ ಸಂಘರ್ಷ ಹೆಚ್ಚಾಗಲಿದೆ. ಶಬ್ದ ಮಾಲಿನ್ಯದಿಂದ ಆನೆಗಳು ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ಹೆದರಿ ಚದುರಿ ಹೋಗುವ ಸಾಧ್ಯತೆ ಹೆಚ್ಚು. ಇದರಿಂದ ಮಾನವ ಜೀವಕ್ಕೆ ಹೆಚ್ಚು ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುಕೊ ಸಂಚಾಲಕ ಮಂಜು ಚಿಣ್ಣಪ್ಪ ಮಾತನಾಡಿ, ರೈಲ್ವೆ ಮಾರ್ಗವನ್ನು ಅಭಿವೃದ್ದಿ ಎಂದು ಬಿಂಬಿಸಿಕೊಂಡು ಸ್ಥಳೀಯರನ್ನು ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಕೊಡಗಿನ ಪ್ರಾಕೃತಿಕ ಹಾಗೂ ಕೃಷಿಕರ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ದೊಡ್ಡ ಮಟ್ಟದ ಹೋರಾಟದ ಅನಿವಾರ್ಯತೆ ಇದೆ ಎಂದರು.
ಕಾಫಿ ಬೆಳೆಗಾರರ ಒಕ್ಕೂಟದ ಸಲಹೆಗಾರ ಶೆರಿ ಸುಬ್ಬಯ್ಯ ಮಾತನಾಡಿ, ಕೊಡಗಿನ ಕಾಫಿ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುವದನ್ನು ಸರ್ಕಾರ ಅರಿತುಕೊಳ್ಳಬೇಕು. ಇಂತಹ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಮುನಾ ಚೆಂಗಪ್ಪ, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ರಾಜೀವ್ ಬೋಪಯ್ಯ, ಕೊಡಗು ಹಿತ ರಕ್ಷಣಾ ಸಮಿತಿ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಬೆಳೆಗಾರರುಗಳಾದ ಮಲ್ಲಮಾಡ ಪ್ರಭು, ಬೋಸ್ ಮಾದಪ್ಪ ಉಪಸ್ಥಿತರಿದ್ದರು.