ಮಡಿಕೇರಿ, ಜ. 25: ಮಡ್ಲಂಡ ಕ್ರಿಕೆಟ್ ಕಪ್ 2018ರ ಪ್ರಯುಕ್ತ ತಾ. 31 ರಂದು ಮಡಿಕೇರಿಯಲ್ಲಿ ಮಡ್ಲಂಡ ಕಪ್ ಕ್ರಿಕೆಟ್ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ.
ಈ ಬಾರಿಯ ಕ್ರಿಕೆಟ್ ಹಬ್ಬ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಜರುಗಲಿದ್ದು, ಈಗಾಗಲೇ ಸಿದ್ಧತೆ ಆರಂಭವಾಗಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಕಾನ್ಫರೆನ್ಸ್ ಹಾಲ್‍ನಲ್ಲಿ ರಸಪ್ರಶ್ನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ವಯೋಮಿತಿಯ ಭೇದವಿಲ್ಲದೆ ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜು ಎಂಬ ವಿಭಾಗವಿಲ್ಲದೆ ಯಾರು ಬೇಕಾದರೂ ಭಾಗವಹಿಸಬಹುದು. ಆದರೆ, ಒಂದು ವಿದ್ಯಾಸಂಸ್ಥೆಯಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿದೆ. ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರಥಮ ಟ್ರೋಫಿ ಹಾಗೂ ರೂ. 3000 ನಗದು ಬಹುಮಾನ, ದ್ವಿತೀಯ ಟ್ರೋಫಿ ಹಾಗೂ ರೂ. 2000 ನಗದು ಬಹುಮಾನ, ತೃತೀಯ ಟ್ರೋಫಿ ಹಾಗೂ ರೂ. 1000 ಬಹುಮಾನ ನೀಡಲಾಗುವದು.
ವಿದ್ಯಾರ್ಥಿಗಳು ತಮ್ಮೊಂದಿಗೆ ಶಾಲಾ ಕಾಲೇಜಿನ ಪ್ರಾಂಶುಪಾಲರು ಅಥವಾ ಮುಖ್ಯೋಪಾಧ್ಯಾಯರ ಒಪ್ಪಿಗೆ ಪತ್ರವನ್ನು ಹಾಗೂ ತಮ್ಮ ಗುರುತಿನ ಚೀಟಿಯ ನಕಲು ಪ್ರತಿಯನ್ನು ತರಬೇಕು. ಆಸಕ್ತರು ತಮ್ಮ ತಂಡದ ಹೆಸರನ್ನು ತಾ. 27 ರೊಳಗಾಗಿ ಐತಿಚಂಡ ರಮೇಶ್ ಉತ್ತಪ್ಪ, ಮೊ: 9483049005, ಬೊಳ್ಳಜಿರ ಅಯ್ಯಪ್ಪ ಇವರಲ್ಲಿ ನೋಂದಾಯಿಸಿಕೊಂಡು ಹೆಚ್ಚಿನ ಮಾಹಿತಿಯನ್ನು ಪಡೆದು ಕೊಳ್ಳಬಹುದು.
ತಾ. 31 ರಂದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅತಿಥಿಯಾಗಿ ಭಾಗವಹಿಸಲಿದ್ದಾರೆ.