ಮಡಿಕೇರಿ, ಜ. 25: ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರಿ ದಸರಾ ಅದ್ಧೂರಿಯಾಗಿ ವಿಜೃಂಭಣೆಯಿಂದ ಆಚರಣೆಯಾಗಿದೆ. ಸರಕಾರದ ಅನುದಾನ ಹಾಗೂ ದಾನಿಗಳ ನೆರವಿನಿಂದ ಉತ್ಸವದ ಖರ್ಚು ವೆಚ್ಚ ಭರಿಸಲಾಗಿದೆಯಾದರೂ ಇನ್ನೂ ಕೂಡ ರೂ. 8.90 ಲಕ್ಷ ಹಣದ ಕೊರತೆಯುಂಟಾಗಿದ್ದು, ಕೆಲವೊಂದು ಬಿಲ್‍ಗಳ ಪಾವತಿ ಮಾಡಲು ಬಾಕಿ ಉಳಿದಿದೆ. ಸರಕಾರದಿಂದ ಮತ್ತಷ್ಟು ಅನುದಾನಕ್ಕಾಗಿ ತಾ. 26 ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿರುವ ಉಸ್ತುವರಿ ಸಚಿವ ಸೀತಾರಾಂ ಅವರ ಮೊರೆ ಹೋಗಲು ದಸರಾ ಉತ್ಸವ ಸಮಿತಿ ಮುಂದಾಗಿದೆ.

ಮಡಿಕೇರಿ ನಗರ ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಕಾಯಾಧ್ಯಕ್ಷ ಮಹೇಶ್ ಜೈನಿ ನೇತೃತ್ವದ ತಂಡ ಒಟ್ಟು ರೂ. 1 ಕೋಟಿ ಮೊತ್ತದ ಬಜೆಟ್‍ನೊಂದಿಗೆ ದಸರಾ ಉತ್ಸವ ಆಚರಣೆಗೆ ಮುಂದಾಗಿತ್ತು. ಆದರೆ ಈ ಬಾರಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೆಚ್ಚಿಗೆ ಅನುದಾನ ಸಿಗದೆ ರೂ. 50 ಲಕ್ಷ ಮಾತ್ರ ಅನುದಾನ ಬಂದಿದೆ.

ಆದರೆ ಅದಕ್ಕೂ ಮುನ್ನ ದಸರಾ ಸಮಿತಿ ಕಾರ್ಯಕ್ರಮದ ರೂಪುರೇಷೆಯೊಂದಿಗೆ ವೇದಿಕೆ ನಿರ್ಮಾಣಕ್ಕೆ ಟೆಂಡರ್ ಕರೆಯುವದರಿಂದ ಹಿಡಿದು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಾಗಿತ್ತು. ಅಂದಾಜು 75 ಲಕ್ಷಕ್ಕೂ ಅಧಿಕ ಮೊತ್ತದ ಖರ್ಚುವೆಚ್ಚದ ಪಟ್ಟಿ ಸಿದ್ಧವಾಗಿತ್ತು. ಹೆಚ್ಚಿಗೆ ಅನುದಾನ ಒದಗಿಸುವಂತೆ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಉಸ್ತುವಾರಿ ಸಚಿವರೊಂದಿಗೆ ಮನವಿ ಮಾಡಲಾಯಿತಾದರೂ ಅದಕ್ಕೆ ಮನ್ನಣೆ ಸಿಗಲಿಲ್ಲ. ಮೊದಲೇ ನಗರಸಭೆ ಹಾಗೂ ದಸರಾ ಸಮಿತಿಯ ಬಗ್ಗೆ ಅಸಮಾಧಾನ ಹೊಂದಿದ್ದ ಉಸ್ತುವಾರಿಗಳು ‘ಸಮಿತಿಯ ಪದಾಧಿಕಾರಿಗಳು ಎಲ್ಲರೂ ರೂ. 20 ಲಕ್ಷ ಹಾಕಿದರೆ ನಾನೂ ವೈಯಕ್ತಿಕವಾಗಿ ರೂ. 5 ಲಕ್ಷ ನೀಡುತ್ತೇನೆ’ ಎಂದು ಮೌಖಿಕವಾಗಿ ಹೇಳಿದ್ದರು. ಈ 5 ಲಕ್ಷ ಸಿಗಬಹುದೆಂಬ ನಿರೀಕ್ಷೆಯೊಂದಿಗೆ ದಸರಾ ಸಮಿತಿ ಸಾರ್ವಜನಿಕ ದಾನಿಗಳಿಂದ ಹಣ ಸಂಗ್ರಹಾತಿಗೆ ಮುಂದಾಗಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತಾಯಿತು.

ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹಾತಿ ಆಗದೇ ಇರುವದರಿಂದ ವೇದಿಕೆ ಹಾಗೂ ಗ್ಯಾಲರಿ ನಿರ್ಮಿಸಿದ ಗುತ್ತಿಗೆದಾರರಿಗೆ ಪಾವತಿ ಮಾಡಲು ಹಣವಿಲ್ಲದಂತಾಗಿದೆ.

ಒಟ್ಟು ರೂ. 30.50 ಲಕ್ಷ ಮೊತ್ತದ ಕಾಮಗಾರಿಯನ್ನು ಮಡಿಕೇರಿಯ ಲೋಕೇಶ್ ಅವರು ಪಡೆದುಕೊಂಡಿದ್ದರು. ಅವರಿಗೆ ಇದುವರೆಗೆ ಕೇವಲ 5 ಲಕ್ಷ ಮಾತ್ರ ಮುಂಗಡವಾಗಿ ಪಾವತಿ ಮಾಡಿದ್ದು, ಇನ್ನುಳಿದ 25.50 ಲಕ್ಷ ಪಾವತಿ ಮಾಡಬೇಕಾಗಿದೆ. ಇತ್ತ ಸರಕಾರದಿಂದ ಬಿಡುಗಡೆಯಾದ ರೂ. 50 ಲಕ್ಷ ಅನುದಾನದಲ್ಲಿ ದಶಮಂಟಪಗಳಿಗೆ ತಲಾ ರೂ. 2 ಲಕ್ಷದಂತೆ 20 ಲಕ್ಷ ಹಾಗೂ ಕರಗಗಳಿಗೆ ರೂ. 1 ಲಕ್ಷದಂತೆ 4 ಲಕ್ಷ ಪಾವತಿ ಮಾಡಲಾಗಿದೆ. ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ರೂ. 8 ಲಕ್ಷ ನೀಡಲಾಗಿದೆ. ಇನ್ನುಳಿದಂತೆ ವಿವಿಧ ಸಮಿತಿಗಳಿಗೆ ನೀಡಲಾಗಿದ್ದು, ಇನ್ನು 16 ಲಕ್ಷದಷ್ಟು ಮಾತ್ರ ಬಾಕಿ ಉಳಿದಿದೆ. ಈ 16 ಲಕ್ಷವನ್ನು ಲೋಕೇಶ್ ಅವರಿಗೆ ನೀಡಲು ತೀರ್ಮಾನಿಸಿದ್ದರೂ ಅಷ್ಟನ್ನು ಮಾತ್ರ ಪಡೆದುಕೊಳ್ಳಲು ಲೋಕೇಶ್ ಅವರು ಒಪ್ಪುತ್ತಿಲ್ಲ. ‘16 ಲಕ್ಷ ಮಾತ್ರ ನೀಡಿದರೆ ಸಾಕಾಗುವದಿಲ್ಲ. 26 ರಂದು ಉಸ್ತುವಾರಿ ಸಚಿವರು ಬಂದ ನಂತರ ಇನ್ನುಳಿದ 9.50 ಲಕ್ಷ ನೀಡುವದಾಗಿ ಸಮಿತಿಯವರು ಹೇಳುತ್ತಿದ್ದಾರೆ. ಅರ್ಧ ಹಣ ಪಡೆದರೆ ಗ್ಯಾಲರಿ, ಮೈಕ್, ವೀಡಿಯೋ ಹೀಗೆ ಬೇರೆ ಬೇರೆಯವರಿಗೆ ನೀಡಲು ಕಷ್ಟವಾಗುತ್ತದೆ. ನಮಗೆ ಪೂರ್ತಿ ಹಣ ಬೇಕೆಂದು ಹೇಳಿದ್ದೇವೆ’ ಎಂದು ಲೋಕೇಶ್ ಹೇಳುತ್ತಾರೆ.

ಹೊಂದಾಣಿಕೆ ಕೊರತೆ

ಇತ್ತ ದಸರಾ ಸಮಿತಿಯಲ್ಲಿ ಹೊಂದಾಣಿಕೆಯ ಕೊರತೆ ಇರುವದು ಸಮಿತಿ ರಚನೆಯಾದ್ದಲ್ಲಿಂದಲೇ ಕಂಡು ಬಂದ ಸತ್ಯ. ಅನುದಾನ ಕೊರತೆ ಬಗ್ಗೆ ಸಮಿತಿ ಅಧ್ಯಕ್ಷರಾಗಿರುವ ಕಾವೇರಮ್ಮ ಸೋಮಣ್ಣ ಯಾವದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕಾರ್ಯಾಧ್ಯಕ್ಷ ಮಹೇಶ್ ಜೈನಿ ಅವರು ‘ರೂ. 8.90 ಲಕ್ಷ ಕೊರತೆ ಇದೆ. ತಾ. 26 ರಂದು ಉಸ್ತುವಾರಿ ಸಚಿವರು ಬಂದಾಗ ಮಾತನಾಡುತ್ತೇವೆ’ ಎಂದು ಹೇಳಿದ್ದಾರೆ.

ಖಜಾಂಚಿ ಸಂಗೀತ ಪ್ರಸನ್ನ ಅವರು ಉಸ್ತುವಾರಿ ಸಚಿವರು ರೂ. 5 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದರು. ಹಲವಾರು ಬಾರಿ ಸಚಿವರ ಬಳಿ ತೆರಳಿ ಮನವಿ ಮಾಡಿಕೊಂಡಾಗ ‘ನಮ್ಮ ಪಕ್ಷದವರೇ ನನ್ನನ್ನು ಬಯ್ಯುತ್ತಾರೆ, ಹೇಗೆ ಕೊಡಲಿ’ ಎಂದು ಸಚಿವರು ನೋವಿನ ನುಡಿಯಾಡುತ್ತಾರೆ. ಇದೀಗ 26 ರಂದು ಸಚಿವರು ಬಂದಾಗ ಮತ್ತೊಮ್ಮೆ ಭೇಟಿಯಾಗಿ ಮನವಿ ಮಾಡಿಕೊಳ್ಳುವಂತೆ ಅಧ್ಯಕ್ಷರಿಗೆ ಹೇಳಲಾಗಿದೆ. ನಮ್ಮನ್ನು ಕರೆದರೆ ನಾವೂ ಕೂಡ ಹೋಗಿ ಮಾತಾಡುತ್ತೇವೆ’ ಎಂದು ಹೇಳಿದ್ದಾರೆ.

ಕಾರ್ಯದರ್ಶಿ ಅಸಮಾಧಾನ

ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ಚುಮ್ಮಿ ದೇವಯ್ಯ ಸಮಿತಿ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಸ್ತುವಾರಿ ಸಚಿವರೊಂದಿಗೆ ಆತ್ಮೀಯತೆಯಿಂದ ಇದ್ದಿದ್ದರೆ ಸಚಿವರು ಖಂಡಿತಾ ಹಣ ಕೊಡುತ್ತಿದ್ದರು. ಆದರೆ ಸಚಿವರ ಬಗ್ಗೆ ಇಲ್ಲಸಲ್ಲದೆ ಹೇಳಿಕೆ ನೀಡುವದರಿಂದ ಅವರಿಗೂ ನೋವಾಗಿದೆ. ನಗರಸಭೆ ಹಾಗೂ ದಸರಾ ಸಮಿತಿ ಮೇಲೆ ಸಚಿವರಿಗೆ ಅಸಮಾಧಾನವಿದೆ. ಸಚಿವರ ಭೇಟಿಗೆ ತಾನೂ ಹೋಗುವದೇ ಇಲ್ಲ. ಸಚಿವರು ಹಣ ಕೊಡುವದೂ ಇಲ್ಲವೆಂದು ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ ಸರಕಾರದಿಂದ ಬಂದ ಹಣವನ್ನು ಹಂಚಿಕೆ ಮಾಡುವ ಸಂದರ್ಭ ಆಲೋಚಿಸಿ, ಚರ್ಚಿಸಿ ನೀಡಬೇಕಿತ್ತು. ಯಾರ ಗಮನಕ್ಕೂ ತಾರದೆ ಏಕಾಏಕಿ ದಶಮಂಟಪಗಳಿಗೆ ಅರ್ಧದಷ್ಟು ಹಣವನ್ನು ನೀಡಲಾಗಿದೆ. ಒಂದಿಷ್ಟು ಕಡಿಮೆ ಮಾಡಿದ್ದಲ್ಲಿ ವೇದಿಕೆ ನಿರ್ಮಿಸಿದವರಿಗೆ ಸರಿದೂಗಿಸಬಹುದಿತ್ತು. ಇದೀಗ ಎಲ್ಲರಿಗೂ ನೀಡಿ ಅವರೊಬ್ಬರಿಗೆ ಬಾಕಿ ಮಾಡಿರುವದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಿತಿಯೊಳಗಿನ ಹೊಂದಾಣಿಕೆ ಕೊರತೆಯಿಂದಾಗಿ ಅನುದಾನಕ್ಕೆ ಪರದಾಡುವಂತಾಗಿದೆ.