ಸಂಕೇತ್ ಪೂವಯ್ಯ

ಆಲೂರು-ಸಿದ್ದಾಪುರ, ಜ. 24: ಭಾರತ ದೇಶ ವಿಶಿಷ್ಟ ಸಂಸ್ಕøತಿ, ಗ್ರಾಮೀಣ ಜಾನಪದ ಸೊಗಡು ಮುಂತಾದ ಸಾಂಸ್ಕøತಿಕ ಶ್ರೀಮಂತಿಕೆ ಯನ್ನು ವಿಶ್ವಕ್ಕೆ ತೋರಿಸಿಕೊಟ್ಟ ಏಕೈಕ ರಾಷ್ಟ್ರವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್‍ನ ಕೊಡಗು ಜಿಲ್ಲಾ ಘಟಕದ ಸಂಚಾಲಕ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯ ಪಟ್ಟರು. ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಸಮಿತಿ, ಶ್ರೀ ವಿನಾಯಕ ಯುವಕ ಸಂಘ ಹಾಗೂ ಮಾಲಂಬಿ ಗ್ರಾಮಾಭಿವೃದ್ಧಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಪ್ರತಿಯೊಂದು ರಾಜ್ಯಗಳು ವಿಶಿಷ್ಟವಾದ ಸಂಸ್ಕøತಿಯಿಂದ ಕೂಡಿದೆ. ಗ್ರಾಮೀಣ ಪ್ರದೇಶಗಳ ವಿಶಿಷ್ಟವಾದ ಜಾನಪದ ಸಂಸ್ಕøತಿಯಿಂದ ಸಾಂಸ್ಕøತಿಕವಾಗಿ ಶ್ರೀಮಂತಗೊಂಡಿದೆ ಎಂದರು. ಹಿರಿಯ ಸಾಹಿತಿ ಕಣಿವೆ ಆನಂದತೀರ್ಥ ಭಾರಧ್ವಜ್ ಮಾತನಾಡಿ, ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಆಯೋಜಿಸುವದರಿಂದ ಸಾಂಸ್ಕøತಿಕ ಪ್ರತಿಭೆಗಳು ಅನಾವರಣಗೊಳ್ಳುತ್ತದೆ. ಆದರೆ ಇಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಸಾಂಸ್ಕøತಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವದರಿಂದ ಸರಕಾರಿ ಶಾಲೆಗಳು ಅವನತಿಯ ಅಂಚಿಗೆ ಬಂದಿದೆ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳೆಂಬ ವ್ಯತ್ಯಾಸದಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.

ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿ ಆಂಗ್ಲ ಭಾಷೆಗೂ ಆದ್ಯತೆ ನೀಡಬೇಕಾಗುತ್ತದೆ. ಆದರೆ ಸರಕಾರ ಸರಕಾರಿ ಶಾಲೆಗಳಿಗೆ ನುರಿತ ಆಂಗ್ಲ ಶಿಕ್ಷಕರನ್ನು ನೇಮಿಸಿದರೆ ಮಾತ್ರ ಖಾಸಗಿ ಮತ್ತು ಸರಕಾರಿ ಶಾಲೆ ಎಂಬ ತಾರತಮ್ಯ ದೂರವಾಗುತ್ತದೆ ಎಂದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯಕ್ರಮ ಸಂಯೋಜಕ ಮಣಜೂರು ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶಗಳು ಜಾನಪದ ಸಂಸ್ಕøತಿಗೆ ಹೆಸರುಗಳಿಸಿದೆ. ಪ್ರತಿಯೊಂದು ಊರುಗಳಲ್ಲಿ ಸುಗ್ಗಿ ಉತ್ಸವಗಳು ನಡೆಯುತ್ತವೆ.

ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸುಗ್ಗಿ ಸಂಕ್ರಾಂತಿ ಹಬ್ಬದ ಸಂದರ್ಭಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.

ಸಾಂಸ್ಕøತಿಕ ಪ್ರತಿಭೆಗಳ ಕಲಾತಂಡದವರು ಪ್ರತಿಭೆಗಳನ್ನು ಪ್ರದರ್ಶಿಸಿಸುವ ಮೂಲಕ ಸಾಂಸ್ಕøತಿಕ ಚಟುವಟಿಕೆಯ ನಾನಾ ಮಜಲು ಗಳನ್ನು ಗ್ರಾಮೀಣ ಭಾಗದ ಜನರಿಗೆ ಮನವರಿಕೆ ಮಾಡಿಕೊಟ್ಟಂತಾಗುತ್ತದೆ ಎಂದರು. ಆಲೂರು-ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ದೇವೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಹರೀಶ್, ಗ್ರಾ.ಪಂ. ಸದಸ್ಯರಾದ ತೀರ್ಥ ಕುಮಾರ್, ಎಸ್.ಜೆ. ಪ್ರಸನ್ನ ಕುಮಾರ್, ಮಾಜಿ ಗ್ರಾ.ಪಂ. ಅಧ್ಯಕ್ಷ ಅಶೋಕ್, ಗ್ರಾಮದ ಅಧ್ಯಕ್ಷ ಶಿವಪ್ಪ, ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ್, ಆಶ್ರಮ ಶಾಲೆ ಮುಖ್ಯ ಶಿಕ್ಷಕ ರಜನಿಕಾಂತ್, ಎಸ್‍ಡಿಎಂಸಿ ಅಧ್ಯಕ್ಷ ರಮೇಶ್, ಮಹಿಳಾ ಯುವ ಒಕ್ಕೂಟದ ಅಧ್ಯಕ್ಷೆ ಜಾನಕಿ ಗಂಗಾಧರ್, ಪ್ರಮುಖರಾದ ಲೀಲಾ ದೇವದಾಸ್, ಹೆಚ್.ಎಸ್. ವಿಶ್ವನಾಥ್, ವಿಠಲ್, ಪ್ರಸನ್ನ ಮುಂತಾದವರು ಇದ್ದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪೋಷಕರಿಗೆ, ಶಾಲಾ ಮಕ್ಕಳಿಗಾಗಿ ವಿವಿಧ ಕ್ರೀಡಾಕೂಟ ವನ್ನು ಆಯೋಜನೆ ಮಾಡಲಾಗಿತ್ತು. ಅಪರಾಹ್ನ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಬಳಿಕ ರಾತ್ರಿವರೆಗೆ ಮೈಸೂರು ಮತ್ತು ಮಡಿಕೇರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವಿವಿಧ ಕಲಾ ತಂಡದ ಕಲಾವಿದರಿಂದ ಡೊಳ್ಳು ಕುಣಿತ, ಕಂಸಾಳೆ, ಜಾನಪದ ನೃತ್ಯ, ಜಾನಪದ ಗೀತೆಗಳು, ಭಾವ ಗೀತೆಗಳು, ನವೀನ ಚಲನಚಿತ್ರ ಗೀತೆಗಳು, ಅಮರ ಮಧುರ ಚಿತ್ರ ಗೀತೆಗಳು, ಚಿತ್ರ ಗೀತೆಗಳ ನೃತ್ಯ, ಹರಿಕಥೆ, ಸ್ಯಾಕ್ಸೋಫೋನ್ ವಾದಕ, ಮಿಮಿಕ್ರಿ ಕಾರ್ಯಕ್ರಮ ನಡೆಯಿತು. ಹಾಸ್ಯ ಕಲಾವಿದ ಮೈಸೂರು ಆನಂದ್ ಅವರ ನಗೆಬುಗ್ಗೆ ಜನರನ್ನು ರಂಜಿಸಿತು.