ಕುಶಾಲನಗರ, ಜ. 24: ಕೊಡಗು ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಅಭಿವೃದ್ಧಿ ನಡುವೆ ಪ್ರಾಕೃತಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತನೆ ಹರಿಸಬೇಕಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.

ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಕಾವೇರಿ ಸಭಾಂಗಣದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ ಕೈಗಾರಿಕಾ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಹೊಂದುವದರೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಬ್ಬೀರ್ ಪಾಷಾ, ಕೈಗಾರಿಕಾ ಕೇಂದ್ರದ ಮೂಲಕ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಹ ಚಟುವಟಿಕೆಗಳಿಗೆ ಅರ್ಜಿ ನೀಡುವ ಮೂಲಕ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಬಹುದು. ಈ ಬಗ್ಗೆ ಕೇಂದ್ರವನ್ನು ಸಂಪರ್ಕಿಸುವ ಮೂಲಕ ಹೆಚ್ಚಿನ ಮಾಹಿತಿ ಪಡೆಯುವದರೊಂದಿಗೆ ಇಲಾಖೆಯಿಂದ ಸಾಲ ಮಂಜೂರಾತಿ ಪಡೆದು ಘಟಕದ ಸ್ಥಾಪನೆ, ಉತ್ಪಾದನೆ ನಂತರ ಸಹಾಯಧನಕ್ಕೆ ಅರ್ಹರಾಗಲಿದ್ದಾರೆ ಎಂದು ಮಾಹಿತಿ ಒದಗಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ನಿವೃತ್ತ ಬ್ಯಾಂಕ್ ಅಧಿಕಾರಿ ಹೆಚ್.ಎಸ್. ಕೃಷ್ಣಮೂರ್ತಿ ಅವರು ವಿದ್ಯಾರ್ಥಿಗಳಿಗೆ ಕೈಗಾರಿಕೆಗಳನ್ನು ಪ್ರಾರಂಭಿಸಲು ಇಲಾಖೆಯಲ್ಲಿನ ಕಾರ್ಯಕ್ರಮಗಳು, ದೊರೆಯುವ ಪ್ರೋತ್ಸಾಹ ಹಾಗೂ ರಿಯಾಯಿತಿಗಳ ಬಗ್ಗೆ ಮಾಹಿತಿ ಒದಗಿಸಿದರು.

ಕಾಲೇಜಿನ ಪ್ರಬಾರ ಪ್ರಾಂಶುಪಾಲ ರೂಪಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಉಮಾಪತಿ, ನಾಗರಾಜ್, ಷಣ್ಮುಗಪ್ಪ, ಬಿ.ಸಿ. ಯೋಗಾನಂದ, ಕಾರ್ಪೋರೇಷನ್ ಬ್ಯಾಂಕ್ ಅಧಿಕಾರಿ ಸೋಮಯ್ಯ ಇದ್ದರು. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಂಜೆ ತನಕ ಜಾಗೃತಿ ಶಿಬಿರ ಏರ್ಪಡಿಸಲಾಗಿತ್ತು.

ದೀಪಿಕಾ ಪ್ರಾರ್ಥಿಸಿದರು, ಇರ್ಷಾದ್ ಸ್ವಾಗತಿಸಿದರು, ವಿಭಾಗ ಮುಖ್ಯಸ್ಥ ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.