ಗೋಣಿಕೊಪ್ಪಲು, ಜ. 23: ಕ್ರೀಡೆಯಲ್ಲಿ ಪಾಲ್ಗೊಳ್ಳುವದರಿಂದ ಉತ್ತಮ ಆರೋಗ್ಯ ಪಡೆಯ ಬಹುದೆಂದು ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ ಅಭಿಪ್ರಾಯ ಪಟ್ಟರು. ಹಾತೂರಿನ ಶಾಲಾ ಮೈದಾನದಲ್ಲಿ ಹಾತೂರು ವಿಕ್ಕಿಬಾಯ್ಸ್ ಕ್ಲಬ್ ಆಯೋಜಿಸಿದ್ದ ಜಿಲ್ಲಾಮಟ್ಟದ ಫುಟ್‍ಬಾಲ್ ಪಂದ್ಯಾಟ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಕ್ರೀಡೆಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಯುವಕರು ಒಂದೆಡೆ ಸೇರುವ ಪ್ರಯತ್ನದಿಂದ ಕ್ರೀಡೆಯಲ್ಲಿ ಆಸಕ್ತಿ ಬೆಳೆಯಲಿದೆ. ಇದರಿಂದ ಯುವಕರು ದುಶ್ಚಟಗಳಿಂದ ದೂರವಾಗಬಹುದು ಎಂದರು.

ಮತ್ತೋರ್ವ ಅತಿಥಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಂಡ್ ಗಣಪತಿ ಮಾತನಾಡಿ, ಕ್ರೀಡಾ ಕೂಟಗಳು ನಡೆಸುತ್ತಿರುವದ ರಿಂದ ಯುವಕರಲ್ಲಿ ನಾಯಕತ್ವ ಗುಣ ಬೆಳೆಯುತ್ತಿದೆ ಮುಂದೆ ಕ್ರೀಡೆಯನ್ನು ಇನ್ನಷ್ಟು ಉತ್ತಮವಾಗಿ ನಡೆಸುವಂತೆ ತಿಳಿಸಿದರು. ಎರಡು ದಿನಗಳ ಕಾಲ ನಡೆದ ಈ ಪಂದ್ಯಾಟದಲ್ಲಿ ಜಿಲ್ಲೆಯ ವಿವಿಧೆಡೆಯಿಂದ 25 ತಂಡಗಳು ಭಾಗವಹಿಸಿದ್ದವು. ಕುಪ್ಪಂಡ ಹೇಮಂತ್, ಅಪ್ಪಟ್ಟೀರ ಮಂದಣ್ಣ, ಕೊಡಂದೇರ ಮಿಥುನ್, ಕೊಕ್ಕಂಡ ಶ್ರೇಯಸ್ ಇವರುಗಳ ನೇತೃತ್ವದ ಯುವಕರ ತಂಡ ಈ ಫುಟ್‍ಬಾಲ್ ಪಂದ್ಯಾಟವನ್ನು ಆಯೋಜಿಸಿತ್ತು. ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಹಾಗೂ ಮಾಜಿ ಜಿ.ಪಂ. ಸದಸ್ಯ ಬಾಂಡ್ ಗಣಪತಿ ಟ್ರೋಫಿ ಧಾನಿಗಳಾಗಿದ್ದರು.

ಅಂತಿಮ ಪಂದ್ಯದಲ್ಲಿ ಹಾತೂರಿನ ವಾರಿಯರ್ಸ್ ತಂಡ ಮಡಿಕೇರಿಯ ಎಫ್‍ಎಂಸಿ ತಂಡವನ್ನು ಸೋಲಿಸುವದರ ಮೂಲಕ ಜಯ ಪಡೆಯಿತು.