ವೀರಾಜಪೇಟೆ, ಜ. 23: ಸಾರ್ವಜನಿಕರಲ್ಲಿ ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ಅರಿವು ಮೂಡಿಸಲು ವಿವಿಧ ಸಂಘ-ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ಶಾಲಾ ಮಕ್ಕಳೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.

ರೋಟರಿ ಸಂಸ್ಥೆ, ಕ್ಲಬ್ ಮಹೇಂದ್ರ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಿಗೆ ರಸ್ತೆ ಸುರಕ್ಷಾ ನಿಯಮಗಳು ಮತ್ತು ಕಾನೂನು ಅರಿವು ಮೂಡಿಸುವ ಸಲುವಾಗಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಜಾಥಾಕ್ಕೆ ಚಾಲನೆ ನೀಡಿದ ವೀರಾಜಪೇಟೆ ವೃತ್ತ ನೀರಿಕ್ಷಕ ಕುಮಾರ್ ಅರಾದ್ಯ ಶಾಲಾ ಮಕ್ಕಳೊಂದಿಗೆ ಮಾತನಾಡಿ, ರಸ್ತೆಯ ಸುರಕ್ಷಾ ನಿಯಮಗಳನ್ನು ಪ್ರತಿಯೊಬ್ಬರು ಚಾಚೂತಪ್ಪದೆ ಪಾಲಿಸಬೇಕು, ರಸ್ತೆಯಲ್ಲಿ ಚಲಿಸುವ ವಾಹನದ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸಿದ್ದಲ್ಲಿ ಅಪಘಾತ ಪ್ರಮಾಣಗಳು ಇಳಿಮುಖವಾಗುತ್ತದೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಅಪಘಾತಗಳು ಸಂಭವಿಸುತ್ತದೆ ಎಂದು ತಿಳುವಳಿಕೆ ಹೇಳಿದರು.

ವೀರಾಜಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷ ಶಾಂತರಾಂ ಕಾಮತ್ ಮಾತನಾಡಿ, ಶಾಲಾ ವಿದ್ಯಾರ್ಥಿಗಳಲ್ಲಿ ರಸ್ತೆಯ ಸುರಕ್ಷಾ ನಿಯಮಗಳ ಬಗ್ಗೆ ಅರಿವು ಮೂಡಲು ಜಾಥಾವನ್ನು ಹಮ್ಮಿಕೊಂಡಿದ್ದೇವೆ ಎಂದರು. ವೀರಾಜಪೇಟೆ ರೋಟರಿ ಶಾಲಾ ವಿದ್ಯಾರ್ಥಿಗಳು ಮೊದಲಿಗೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಠಾಣಾಧಿಕಾರಿಗಳಿಂದ ಠಾಣೆಯ ಬಗ್ಗೆ ಮಾಹಿತಿಗಳನ್ನು ಪಡೆದರು. ರಸ್ತೆ ಸುರಕ್ಷಾ ಸಪ್ತಾಹದಲ್ಲಿ ಪೊಲೀಸರೊಂದಿಗೆ ತೆರಳಿದ ಶಾಲಾ ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ನಿಯಂತ್ರಣ ಹಾಗೂ ಚಾಲಕರಿಗೆ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಕರಪತ್ರಗಳನ್ನು ವಿತರಿಸಿದರು. ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಇಲಾಖಾ ಸಿಬ್ಬಂದಿಗಳು, ರೋಟರಿ ಶಾಲೆಯ ಮುಖ್ಯಸ್ಥ ಬಿ.ಬಿ. ಮಾದಪ್ಪ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಅದಿತ್ಯ ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು.