ಕುಶಾಲನಗರ, ಜ. 23: ಕುಶಾಲನಗರ ಪಟ್ಟಣ ಪಂಚಾಯಿತಿ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಸಂಬಂಧ ಪಂಚಾಯಿತಿ ಆಡಳಿತ ಮಂಡಳಿಯ ವಿಶೇಷ ಸಭೆ ನಡೆಯಿತು.
ಪಂಚಾಯಿತಿ ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿಗೆ ಸೇರಿದ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವ ಬಗ್ಗೆ ಚರ್ಚೆ ನಡೆಯಿತು. ಮಳಿಗೆಯಲ್ಲಿ ವ್ಯಾಪಾರ-ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ಸೌಲಭ್ಯ ಒದಗಿಸುವ ಬಗ್ಗೆ ಚರ್ಚೆ ನಡೆಸಿತು. ಕಟ್ಟಡ ಕಾಮಗಾರಿ ಪ್ರಾರಂಭಿಸುವ ಸಂದರ್ಭ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಅವಕಾಶ ಇರುವದಿಲ್ಲ ಎನ್ನುವ ಬಗ್ಗೆ ಸಭೆ ನಿರ್ಣಯ ಅಂಗೀಕರಿಸಿತು. ಪಂಚಾಯಿತಿಯ ಹಳೆಯ ಕಟ್ಟಡಗಳು ಸಂಪೂರ್ಣ ದುರಸ್ತಿಗೆ ಒಳಗಾಗಿದ್ದು ಕಾಮಗಾರಿ ಪ್ರಾರಂಭಿಸುವ ಮುನ್ನವೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಬೃಹತ್ ಯೋಜನೆ ಹಿನ್ನೆಲೆ ಸಮರ್ಪಕವಾಗಿ ಕಾಮಗಾರಿ ನಡೆಯುವ ನಿಟ್ಟಿನಲ್ಲಿ ಎಲ್ಲಾ ಮಳಿಗೆದಾರರು ತೆರವು ಮಾಡಿ ಕೈಜೋಡಿಸಿ ಸಹಕರಿಸಬೇಕೆಂದು ಸಭೆಯಲ್ಲಿ ಸದಸ್ಯರಿಂದ ಸಲಹೆಗಳು ಕೇಳಿಬಂದವು.
ಕೆಲವು ವರ್ತಕರು ಮಳಿಗೆ ತೆರವುಗೊಳಿಸುವ ಸಂಬಂಧ ನ್ಯಾಯಾಲಯಕ್ಕೆ ಮೊರೆ ಹೋಗಿರುವ ಹಿನ್ನೆಲೆ ಪಂಚಾಯಿತಿ ನಿರ್ಣಯವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಭೆ ಅಂಗೀಕಾರ ನೀಡಿತು.
ಈ ಸಂದರ್ಭ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಡಿ. ಚಂದ್ರು, ಹೆಚ್.ಕೆ. ಪಾರ್ವತಿ, ಸದಸ್ಯರುಗಳಾದ ಹೆಚ್.ಜೆ. ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಎಂ.ಎಂ. ಚರಣ್, ಮಧುಸೂದನ್, ಸುರಯ್ಯ ಭಾನು, ಕವಿತಾ, ಫಜಲುಲ್ಲಾ, ರಶ್ಮಿ, ಲಲಿತಾ ಇದ್ದರು.