ಮಡಿಕೇರಿ, ಜ. 22: ನಬಾರ್ಡ್ ನಿಂದ ತಯಾರಿಸಲ್ಪಟ್ಟಿರುವ 2018-19ನೇ ಸಾಲಿಗೆ ಕೊಡಗು ಜಿಲ್ಲೆಗೆ ರೂ. 5819.87 ಕೋಟಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಬಿಡುಗಡೆಗೊಳಿಸಿದರು.

ನಗರದ ಕಾರ್ಪೊರೇಷನ್ ಬ್ಯಾಂಕ್‍ನ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು ರೈತರು, ಬೆಳೆಗಾರರು ಹಾಗೂ ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯವನ್ನು ನಿಗಧಿತ ಅವಧಿಯಲ್ಲಿ ಒದಗಿಸು ವಂತಾಗಬೇಕು. ಆರ್ಥಿಕ ವರ್ಷದಲ್ಲಿ ಸಮಯ ಪಾಲನೆಯೊಂದಿಗೆ ಹಾಗೂ ಸಾಲ ಪಡೆದು ಪಾವತಿಸುವ ಪ್ರತಿಯೊಬ್ಬರಿಗೂ ಬ್ಯಾಂಕುಗಳ ಸೌಲಭ್ಯಗಳು ತಲುಪುವಂತೆ ಮಾಡಬೇಕು ಎಂದು ಅವರು ಹೇಳಿದರು.

ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆ, ವಿಮಾ ಸೌಲಭ್ಯಗಳು ಹೀಗೆ ವಿವಿಧ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬ್ಯಾಂಕುಗಳು ಮುಂದಾಗಬೇಕು. ಮುಖ್ಯವಾಗಿ ಜಿಲ್ಲೆಯಲ್ಲಿ ರೈತರಿಗೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಬ್ಯಾಂಕುಗಳು ಸಾಲವನ್ನು ನೀಡುವಂತ ಗಾಬೇಕು ಎಂದರು. ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಅರಿವು ಮೂಡಿಸಬೇಕು. ಬೆಳೆ ಸಾಲ, ಅಲ್ಪಾವಧಿ ಸಾಲ ಯೋಜನೆಗಳ ಜೊತೆಗೆ ವಿಮಾ ಯೋಜನೆಯನ್ನು ಪರಿಣಾಮ ಕಾರಿಯಾಗಿ ತಲುಪಿಸುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು ಎಂದು ತಿಳಿಸಿದರು. ನಬಾರ್ಡಿನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮುಂಡಂಡ ಸಿ. ನಾಣಯ್ಯ ಮಾಹಿತಿ ನೀಡಿ 2018-19ನೇ ಸಾಲಿನ ಸಾಮಥ್ರ್ಯ ಆಧಾರಿತ ಯೋಜನೆಯಲ್ಲಿ ಬೆಳೆ ಸಾಲಕ್ಕೆ 3345.89 ಕೋಟಿ, ಕೃಷಿ ಸಂಬಂಧಿತ ಅವಧಿ ಸಾಲಕ್ಕೆ 1077.92 ಕೋಟಿ ರೂ. ಒಟ್ಟು ಕೃಷಿ ಮತ್ತು ಇತರ ಚಟುವಟಿಕೆಗಳಿಗಾಗಿ 4589.16 ಕೋಟಿ ರೂ., ಕೃಷಿಗೆ ಸಂಬಂಧಿಸಿದ ಮೂಲ ಸೌಕರ್ಯಕ್ಕೆ 124.69 ಕೋಟಿ ರೂ, ಹಾಗೆಯೇ ಸಣ್ಣ, ಮಧ್ಯಮ ಹಾಗೂ ಉದ್ಯಮ ವಲಯ ಕ್ಷೇತ್ರಕ್ಕೆ ರೂ. 432.76 ಕೋಟಿ, ರಫ್ತು ವಲಯಕ್ಕೆ ರೂ. 285.60 ಕೋಟಿ, ಶಿಕ್ಷಣ ಸಾಲಕ್ಕೆ 185.40 ಕೋಟಿ, ಗೃಹ ನಿರ್ಮಾಣ ಸಾಲಕ್ಕೆ 252 ಕೋಟಿ ರೂ., ನವೀಕರಣ ವಿದ್ಯುಚ್ಛಕ್ತಿಗೆ 5.51 ಕೋಟಿ, ಇನ್ನಿತರ ವಲಯ (ಸ್ವ ಸಹಾಯ ಸಂಘಗಳು ಜಂಟಿ ಭಾದ್ಯತ ಗುಂಪು, ಸಣ್ಣ ಸಾರಿಗೆ ವಾಹನಗಳು ಮತ್ತಿತರ) 56.64 ಕೋಟಿ ಮತ್ತು ಸಾಮಾಜಿಕ ಮೂಲ ಸೌಲಭ್ಯ ವಲಯಕ್ಕೆ 12.80 ಕೋಟಿ ಹೀಗೆ ಒಟ್ಟಾರೆ ಆಧ್ಯತಾ ವಲಯಕ್ಕೆ ಒಟ್ಟಾರೆ ರೂ. 5819.87 ಕೋಟಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ನಬಾರ್ಡ್ ರೂಪಿಸಿರುವ ರೂ. 5819.87 ಸಾಲ ಯೋಜನೆಯು ಜಿಲ್ಲೆಯ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮುನ್ನೋಟವಾಗಿದ್ದು, ಜಿಲ್ಲೆಯಲ್ಲಿ ಅತ್ಯಗತ್ಯವಾಗಿ ಬೇಕಿರುವ ಕೃಷಿ, ಪಶುಪಾಲನೆ, ಕೈಗಾರಿಕೆ, ಮೀನುಗಾರಿಕೆ ಮತ್ತಿತರ ಕೃಷಿ ಆಧಾರಿತ ಅಂಶಗಳನ್ನು ಒಳಗೊಂಡ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮಹತ್ತರ ವಾದ ಸಾಲ ಯೋಜನೆಯಾಗಿದೆ ಎಂದು ತಿಳಿಸಿದರು.

ಈ ಸಾಮಥ್ರ್ಯ ಸಾಲ ಯೋಜನೆಯು ಜಿಲ್ಲೆಯ ಸರ್ಕಾರಿ ಇಲಾಖೆ ಹಾಗೂ ಬ್ಯಾಂಕುಗಳಿಗೆ 2018-19 ನೇ ಸಾಲಿನ ಆರ್ಥಿಕ ವರ್ಷಕ್ಕೆ ಯೋಜನೆ ರೂಪಿಸುವ ನಿಟ್ಟಿನಲ್ಲಿ ಮಹತ್ವದಾಗಿದೆ ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗುಪ್ತಾಜಿ ಮಾತನಾಡಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳಲ್ಲಿರುವ ಕಡಿಮೆ ಬಡ್ಡಿ, ಲಾಭವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತಾಗಲು ಬ್ಯಾಂಕ್‍ಗಳ ವ್ಯವಸ್ಥಾಪಕರು ಆದ್ಯತಾ ವಲಯದ ಗುರಿಯನ್ನು ತಲುಪಬೇಕಿದೆ ಮತ್ತು ಸಾಮಥ್ರ್ಯ ಆಧಾರಿತ ಸಾಲ ಯೋಜನೆಯ ಆಧಾರದ ಮೇಲೆ ಲೀಡ್ ಬ್ಯಾಂಕ್ 2018-19ನೇ ಸಾಲಿಗೆ ಜಿಲ್ಲಾ ಸಾಲ ಯೋಜನೆ ತಯಾರು ಮಾಡುತ್ತದೆ ಎಂದು ಹೇಳಿದರು.

ಕಾರ್ಪೋರೇಷನ್ ಬ್ಯಾಂಕಿನ ಕೂಡಿಗೆಯ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಸುರೇಶ್ ಮಾತನಾಡಿ, ನಬಾರ್ಡ್‍ನಿಂದ ಸಿದ್ಧಪಡಿಸಲಾದ ಯೋಜನೆಯನ್ನು ಪ್ರಶಂಸಿಸುತ್ತಾ ಈ ಯೋಜನೆಯನ್ನು ಅನುಷ್ಠಾನ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬ್ಯಾಂಕಿನವರು ಎಲ್ಲಾ ಗುರಿಗಳನ್ನು ಸಾಧಿಸಬೇಕು ಎಂದು ಸಲಹೆ ಮಾಡಿದರು. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಕೃಷಿ ವಲಯಕ್ಕೆ ರೂ. 3374.14 ಕೋಟಿ ಸಾಲದ ಗುರಿಯಲ್ಲಿ ರೂ. 1282.21 ಕೋಟಿ ಸಾಲ ವಿತರಣೆ ಮಾಡಿ ಶೇ. 38 ರಷ್ಟು ಪ್ರಗತಿ ಸಾಧಿಸಲಾಗಿದೆ. ಮಧ್ಯಮ ಮತ್ತು ಸಣ್ಣ ಉದ್ಯಮದಲ್ಲಿ ರೂ. 326.76 ಕೋಟಿ ಸಾಲದ ಗುರಿಯಲ್ಲಿ ರೂ. 236.35 ಕೋಟಿ ಸಾಲ ವಿತರಣೆ ಮಾಡಿ ಶೇ. 72 ರಷ್ಟು ಪ್ರಗತಿ ಸಾಧಿಸಲಾಗಿದೆ. ಇತರ ಆದ್ಯತಾ ವಲಯದ ರೂ. 299.10 ಕೋಟಿ ಸಾಲದ ಗುರಿಯಲ್ಲಿ ರೂ. 217 ಕೋಟಿ ಸಾಲ ವಿತರಣೆ ಮಾಡಿ ಶೇ.73 ರಷ್ಟು ಪ್ರಗತಿ ಸಾಧಿಸಲಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ ರೂ. 4 ಸಾವಿರ ಕೋಟಿ ಸಾಲ ಗುರಿಯಲ್ಲಿ ಡಿಸೆಂಬರ್ ಅಂತ್ಯಕ್ಕೆ ರೂ. 1736.59 ಕೋಟಿ ಸಾಲ ವಿತರಣೆ ಮಾಡಿ ಶೇ. 43 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನ ಸಹಾಯಕ ಮಹಾಪ್ರಬಂಧಕ ನಾಣಯ್ಯ ಅವರು ಮಾಹಿತಿ ನೀಡಿದರು.

ತಾಲೂಕುವಾರು ಮಾಹಿತಿ: ಮಡಿಕೇರಿ ತಾಲೂಕಿನಲ್ಲಿ ರೂ. 1394 ಕೋಟಿ ಗುರಿಯಲ್ಲಿ ರೂ. 644.83 ಕೋಟಿ ಸಾಲ ವಿತರಣೆ ಮಾಡಿ ಶೇ.46 ಪ್ರಗತಿ, ವೀರಾಜಪೇಟೆ ತಾಲೂಕಿನಲ್ಲಿ ರೂ. 1470 ಕೋಟಿ ಗುರಿಯಲ್ಲಿ ರೂ. 542.24 ಕೋಟಿ ಸಾಲ ವಿತರಣೆ ಮಾಡಿ ಶೇ.37 ಪ್ರಗತಿ. ಸೋಮವಾರಪೇಟೆ ತಾಲೂಕಿನಲ್ಲಿ ರೂ. 1135.04 ಕೋಟಿ ಗುರಿಯಲ್ಲಿ ರೂ. 549.51 ಕೋಟಿ ಸಾಲ ವಿತರಣೆ ಮಾಡಿ ಶೇ. 48 ಪ್ರಗತಿ ಸಾಧಿಸಲಾಗಿದೆ. ಹಿರಿಯ ಬ್ಯಾಂಕ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳು, ನಿಗಮಗಳ ವ್ಯವಸ್ಥಾಪಕರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.