ವೀರಾಜಪೇಟೆ, ಜ. 19: ವೀರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ 23 ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಹಾಗೂ ಸಲಹೆ ಪಡೆದು ಮನೆಗೆ ತೆರಳಿದ ಘಟನೆ ನಡೆದಿದೆ.

ತಾ. 13ರಿಂದ 19ರವರೆಗೆ ಪದವಿ ಕಾಲೇಜಿನ ಎನ್.ಎಸ್. ಎಸ್.ಘಟಕದ ವಿದ್ಯಾರ್ಥಿಗಳಿಗಾಗಿ ಮೈತಾಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಶಿಬಿರವನ್ನು ಆಯೋಜಿಸಲಾಗಿತ್ತು. ಅಂದಾಜು 80 ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾ. 18ರಂದು ರಾತ್ರಿ 9 ಗಂಟೆಯ ಸಮಯದಲ್ಲಿ ಶಿಬಿರ ಜ್ಯೋತಿಯ ಸಂದರ್ಭ ವಿದ್ಯಾರ್ಥಿಗಳು ವಿದೇಯ ಗೀತೆ ಹಾಡಿ ಒಬ್ಬರಿಗೊಬ್ಬರು ದೀಪ ನೀಡುವ ಸಮಯದಲ್ಲಿ 21 ವಿದ್ಯಾರ್ಥಿನಿಯರು 2 ವಿದ್ಯಾರ್ಥಿಗಳು ನೆಲಕ್ಕೆ ಬಿದ್ದು ಅಸ್ವಸ್ಥರಾಗಿದ್ದು, ಅಲ್ಲಿಯೇ ಇದ್ದ ಉಪನ್ಯಾಸಕರು ಇವರುಗಳನ್ನು ಕೂಡಲೇ ಕೋಣೆಗೆ ಕಳುಹಿಸಿ ಆರೈಕೆಗೆ ಪ್ರಯತ್ನಿಸಿದರು. ಮಧ್ಯರಾತ್ರಿ ಪಕ್ಕದ ಪುರೋಹಿತರು ಬಂದು ಪ್ರಾರ್ಥಿಸಿದ ನಂತರ ಅಸ್ವಸ್ಥಗೊಂಡ ವಿದ್ಯಾರ್ಥಿಗಳು ನಿದ್ರೆಗೆ ಜಾರಿದರು ಎನ್ನಲಾಗಿದೆ.

ಇಂದು ಬೆಳಿಗ್ಗೆ ವಿಶ್ರಾಂತಿ ಯಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಶೌಚಾಲಯಕ್ಕೆ ಹೋಗಿ ಹಿಂತಿರುಗುವಾಗ ಅಸ್ವಸ್ಥಗೊಂಡು ನೆಲದಲ್ಲಿ ಬಿದ್ದಳು. ಇದೇ ರೀತಿ ವಿಶ್ರಾಂತಿ ಪಡೆಯುತ್ತಿದ್ದ 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡಾಗ ಹೆದರಿದ ಉಪನ್ಯಾಸಕರು ಎಲ್ಲರನ್ನು ವಾಹನದಲ್ಲಿ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ತೋರಿಸಿದರು. ವೈದ್ಯರ ಪ್ರಕಾರ ಈ ವಿದ್ಯಾರ್ಥಿಗಳಿಗೆ ಯಾವದೇ ಕಾಯಿಲೆ ಇಲ್ಲ. ಹೆದರಿ ಮಾನಸಿಕವಾಗಿ ಭಯದ ವಾತಾವರಣ ಉಂಟಾಗಿರಬಹುದೆಂದು ಅಭಿಪ್ರಾಯಪಟ್ಟರು. ಅಪರಾಹ್ನ 3ಗಂಟೆ ವೇಳೆಗೆ ವಿದ್ಯಾರ್ಥಿಗಳ ಪೋಷಕರು ಎಲ್ಲಾ ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋದರು. ಆಸ್ಪತ್ರೆಯ ಡಾ ಆನಂದ್, ಡಾ ಪ್ರಧಾನ್, ಡಾ ಹೇಮ ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಆರೋಗ್ಯವನ್ನು ಪರೀಕ್ಷಿಸಿದರು.

ಎನ್.ಎಸ್.ಎಸ್ ಶಿಬಿರ ನಡೆಯುತ್ತಿದ್ದ ಶಾಲೆಯ ಪಕ್ಕದಲ್ಲಿಯೇ ಸ್ಮಶಾನವಿದ್ದು ಇದನ್ನು ನೋಡಿ ವಿದ್ಯಾರ್ಥಿಗಳು ಹೆದರಿ ಮಾನಸಿಕವಾಗಿ ಅಸ್ವಸ್ಥಗೊಂಡಿರಬಹುದು. ಅಸ್ವಸ್ಥಗೊಂಡ ವಿದ್ಯಾರ್ಥಿಗಳಲ್ಲಿ ಕೆಲವರು ಸ್ಮಶಾನಕ್ಕೆ ಹೋಗುವದಾಗಿ ಹೇಳುತ್ತಿದ್ದುದನ್ನು ಶಿಬಿರದಲ್ಲಿ ಕೆಲವರು ಗಮನಿಸಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಜಯ ಕರ್ನಾಟಕ ಸಂಘಟನೆಯ ತಾಲೂಕು ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ, ಮಲ್ಲಂಡ ಮಧು ದೇವಯ್ಯ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರುಗಳಿಗೆ ನಿರ್ದೇಶನ ನೀಡಿದರು.