ಮಡಿಕೇರಿ, ಜ. 18: ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಕೊಡಗು ಬಲಿಜ ಕ್ರೀಡಾ ಹಬ್ಬವನ್ನು ನಡೆಸಲು ಮೂರ್ನಾಡು ಸಮುದಾಯ ಭವನದಲ್ಲಿ ಇತ್ತೀಚೆಗೆ ಜರುಗಿದ ಮೂರು ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಕೊಡಗು ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್, ಮಡಿಕೇರಿ ತಾಲೂಕು ಬಲಿಜ ಸಮಾಜ ಅಧ್ಯಕ್ಷೆ ಮೀನಾಕ್ಷಿ ಕೇಶವ್, ಸೋಮವಾರಪೇಟೆ ತಾಲೂಕು ನೂತನ ಬಲಿಜ ಸಮಾಜ ಅಧ್ಯಕ್ಷ ಟಿ.ಡಿ. ದಯಾನಂದ್, ವೀರಾಜಪೇಟೆ ತಾಲೂಕು ಬಲಿಜ ಸಮಾಜ ಪ್ರಧಾನ ಕಾರ್ಯದರ್ಶಿ ಗಣೇಶ್ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಮೇ ತಿಂಗಳ 19 ಹಾಗೂ 20 ರಂದು ವೀರಾಜಪೇಟೆ ತಾಲೂಕಿನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್, ಹಗ್ಗ ಜಗ್ಗಾಟ, ನಿಧಾನ ಬೈಸಿಕಲ್ ರೇಸ್, ಗೋಣಿಚೀಲ ಓಟ, ಸಂಗೀತ ಕುರ್ಚಿ, ಲೆಮೆನ್-ಸ್ಪೂನ್ ಓಟ, 100 ಮೀ. ಓಟ ಹಾಗೂ ಮಕ್ಕಳಿಗೆ ಮಿಠಾಯಿ ಹೆಕ್ಕುವ ಸ್ಪರ್ಧೆ ಹಾಗೂ ಕ್ರೀಡಾಕೂಟಕ್ಕೂ ವಾರ ಮುಂಚಿತವಾಗಿ ಜಿಲ್ಲಾಮಟ್ಟದ ಮುಕ್ತ ಬಲಿಜ ಬಂಧುಗಳ ನಡುವೆ ಕೇರಂ ಪಂದ್ಯಾಟವನ್ನು ನಡೆಸಲು ತೀರ್ಮಾನಿಸಲಾಯಿತು.
ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು 15 ಸಮಿತಿಗಳ ರಚನೆ ಅಗತ್ಯವಿದ್ದು, ಮುಂದೆ ಸೋಮವಾರಪೇಟೆ ತಾಲೂಕಿನಲ್ಲಿ ಜರುಗುವ ಜಿಲ್ಲಾ ಬಲಿಜ ಸಮಾಜ ಸಭೆಯಲ್ಲಿ ಪಟ್ಟಿಯನ್ನು ಅಂತ್ಯಗೊಳಿಸಲಾಗುವದು ಎಂದು ಶ್ರೀನಿವಾಸ್ ಪ್ರಕಟಿಸಿದರು.
ಜಿಲ್ಲಾ ಬಲಿಜ ಸಮಾಜ ಅಸ್ತಿತ್ವಕ್ಕೆ ಬಂದ ನಂತರ ಸೂಕ್ತವಾಗಿ ಸ್ಪಂದಿಸದ ನಿರ್ದೇಶಕರನ್ನು ಕೈಬಿಟ್ಟು ಹೊಸ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ನೋಂದಾವಣೆ ಪ್ರಕ್ರಿಯೆ ತಡವಾಗಿದೆ ಎಂದು ಸಮಜಾಯಿಸಿಕೆ ನೀಡಿದ ಶ್ರೀನಿವಾಸ್ ಅವರು, ಸೋಮವಾರಪೇಟೆ ತಾಲೂಕು ಬಲಿಜ ಸಮಾಜ ಈ ಹಿಂದೆ ತಾಲೂಕಿನಿಂದ 5 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಿ ಕಳುಹಿಸಲು ಅಸಹಕಾರ ತೋರಿದ ಹಿನ್ನೆಲೆ ಜಿಲ್ಲಾ ಬಲಿಜ ಸಮಾಜಕ್ಕೆ ನೇರವಾಗಿ ಸೋಮವಾರಪೇಟೆ ತಾಲೂಕಿನಿಂದ ಆಯ್ಕೆ ಮಾಡಲಾಗಿತ್ತು ಎಂದು ಹೇಳಿದರು.
ಸೋಮವಾರಪೇಟೆ ತಾಲೂಕು ಅಧ್ಯಕ್ಷ ಟಿ.ಡಿ. ದಯಾನಂದ್ ಮಾತನಾಡಿ, ಈ ಹಿಂದೆ ತಾಲೂಕು ಸದಸ್ಯತನ ಹೊಂದಿಲ್ಲದವರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ತಾಲೂಕು ಬಲಿಜ ಸಮಾಜ ಆಯ್ಕೆ ಮಾಡಿದ ಸದಸ್ಯರಿಗೆ ಜಿಲ್ಲಾ ಸಮಾಜದಲ್ಲಿ ಅವಕಾಶ ನೀಡುವಂತೆಯೂ, ತುರ್ತು ಸಭೆ ಕರೆದು ಒಟ್ಟು 5 ಮಂದಿ ಹೆಸರನ್ನು ಜಿಲ್ಲಾ ಬಲಿಜ ಸಮಾಜಕ್ಕೆ ಸೂಚಿಸಲಾಗುವದು ಎಂದು ಹೇಳಿದರು.
ಸಭೆಯಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷೆ ಮೀನಾಕ್ಷಿ ಕೇಶವ್, ಪ್ರಧಾನ ಕಾರ್ಯದರ್ಶಿ ಟಿ.ವಿ. ಲೋಕೇಶ್, ವೀರಾಜಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ನಾಯ್ಡು, ಮಡಿಕೇರಿಯ ಟಿ.ಎಸ್. ವೆಂಕಟೇಶ್, ಕಾನೂನು ಸಲಹೆಗಾರ ಟಿ.ವಿ. ಸಂಜಯ್ ರಾಜ್, ಹಿರಿಯರಾದ ಟಿ.ಎನ್. ಲೋಕನಾಥ್ ಸತೀಶ್ ನಾಯ್ಡು, ಜಯರಾಂ, ಸಿ.ಎನ್. ಮದನ್, ಟಿ.ಎಸ್. ಬಾಲಕೃಷ್ಣ, ಟಿ.ಎಲ್. ನಾಗೇಂದ್ರ, ಜಯಲಕ್ಷ್ಮಿ ಮುಂತಾದವರು ಜಿಲ್ಲಾ ಬಲಿಜ ಸಮಾಜವನ್ನು ಸದೃಢವಾಗಿ ಕಟ್ಟುವ ಬಗ್ಗೆ, ಇಡೀ ಜಿಲ್ಲೆಯ ಬಲಿಜ ಸಮಾಜ ಒಂದೇ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಇತರ ಜಿಲ್ಲೆಗೆ ಮಾದರಿಯಾಗಿ ಮುನ್ನಡೆಸುವ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಾಗಲೇ ಕೊಡಗು ಬಲಿಜ ಕ್ರೀಡೋತ್ಸವ ಪೂರ್ವಭಾವಿ ಸಭೆ ಗೋಣಿಕೊಪ್ಪಲು, ಮೂರ್ನಾಡುವಿನಲ್ಲಿ ನಡೆದಿದ್ದು ಮುಂದಿನ ಜಿಲ್ಲಾ ಬಲಿಜ ಸಮಾಜ ಸಭೆಯನ್ನು ಸೋಮವಾರಪೇಟೆ ತಾಲೂಕು ಶಿರಂಗಾಲದಲ್ಲಿ ಏರ್ಪಡಿಸಲಾಗುವದು ಹಾಗೂ ಕ್ರೀಡಾ ಹಬ್ಬದ ವಿವಿಧ ಸಮಿತಿ ರಚನೆ ಅಂತಿಮಗೊಳಿಸಲಾಗುವದು ಎಂದು ಹೇಳಿದರು. ಮೂರು ತಾಲೂಕು ಸಮಾಜಗಳು ಕ್ರೀಡಾ ಕೂಟ ಯಶಸ್ಸಿಗೆ ವಿವಿಧ ತಂಡಗಳನ್ನು ರಚಿಸುವಂತೆ ಇದೇ ಸಂದರ್ಭ ಶ್ರೀನಿವಾಸ್ ಮನವಿ ಮಾಡಿದರು.
ಜಿಲ್ಲಾ ಕಾರ್ಯದರ್ಶಿ ಟಿ.ಸಿ. ಗೀತಾ ನಾಯ್ಡು ಜಿಲ್ಲಾ ಸಮಾಜದ ವರದಿಯನ್ನು ಓದಿದರು. ಸಭೆಯಲ್ಲಿ ಕಡಗದಾಳು ಗ್ರಾಮದ ಸುಶೀಲ, ಟಿ.ಜಿ. ರಾಮಚಂದ್ರ ನಾಯ್ಡು, ಜಿಲ್ಲಾ ಬಲಿಜ ಸಮಾಜದ ನಾಪೆÇೀಕ್ಲು ಟಿ.ಎನ್. ಭವಾನಿ, ಟಿ.ಎಲ್. ರಮೇಶ್, ಟಿ.ಎಲ್. ಪಾರ್ವತಿ, ಸುಬ್ರಮಣಿ, ಟಿ.ಜಿ. ಶ್ರೀನಿವಾಸ್, ಭಾಗ್ಯವತಿ ಚೆಲುವಯ್ಯ, ಹರ್ಷ, ಎ.ಕೆ. ನಾಗೇಶ್ ನಾಯ್ಡು, ಯಶ್‍ವಂತ್, ಮಾಲಿನಿ ಗಣೇಶ್, ನಿರ್ಮಲಾ ಮುಂತಾದವರು ಪಾಲ್ಗೊಂಡಿದ್ದರು.