ಮಡಿಕೇರಿ, ಜ. 18: ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟದಂಥ ಪ್ರವಾಸಿ ತಾಣಗಳಿಗೆ ಬಂದು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿ ಇತ್ಯಾದಿ ಎಸೆದು ಪ್ರಕೃತಿಯನ್ನು ಹಾಳುಗೆಡವದಂತೆ ಜಾಗೃತಿ ಮೂಡಿಸಲು ಫೆ. 4ರಂದು ಕೊಡಗಿನ ಯುವ ಕ್ರೀಡಾ ಪ್ರತಿಭೆಗಳನ್ನು ಒಗ್ಗೂಡಿಸಿ ಓಟ ಹಮ್ಮಿಕೊಂಡಿರುವದಾಗಿ 42 ಕಿ.ಮೀ. ಮೆರಥಾನ್ ವಿಜೇತ ಪಾಡೆಯಂಡ ನಾಣಯ್ಯ ತಿಳಿಸಿದ್ದಾರೆ.ಈ ದಿಸೆಯಲ್ಲಿ ಕೊಡಗಿನ ಕ್ರೀಡಾಪಟುಗಳ ಸಹಿತ ಸಾಹಸಿಗಳನ್ನು ಒಳಗೊಂಡಂತೆ ‘ಸೇವ್ ಮೈ ಕೊಡವ ಲ್ಯಾಂಡ್’ ಸಂಘಟನೆ ಮೂಲಕ ಜಾಗೃತಿ ಮೂಡಿಸಲು ಹಿಮಾಲಯ ಶಿಖರ ಓಟಗಾರ ಮುಕ್ಕಾಟಿರ ಗೌರವ್ ದೇವಯ್ಯ ಜತೆಗೂಡಿ ಕಾರ್ಯಕ್ರಮ ರೂಪಿಸುತ್ತಿರುವದಾಗಿ ‘ಶಕ್ತಿ’ಗೆ ತಿಳಿಸಿದ್ದಾರೆ.

ಕೊಡಗಿಗೆ ಪ್ರವಾಸ ಬರುವವರಿಗೆ ಈ ನಾಡಿನ ಪ್ರಕೃತಿ ಸೌಂದರ್ಯ ಹಾಳುಗೆಡವದಂತೆ ಗಮನ ಸೆಳೆಯುವ ಮೂಲಕ ಪರಿಸರ

(ಮೊದಲ ಪುಟದಿಂದ) ಸಂರಖ್ಷಣೆಯತ್ತ ಕಾಳಜಿ ತೋರುವಂತೆ ಹುರಿದುಂಬಿಸಲು ಜಿಲ್ಲೆಯ ಎಲ್ಲಸ್ತರದ ಕ್ರೀಡಾಪಟುಗಳನ್ನು ಒಗ್ಗೂಡಿಸಿ ಜಾಗೃತಿ ಮೂಡಿಸಲು ಮೊದಲ ಪ್ರಯತ್ನವಾಗಿ ಫೆ. 4ರಂದು ತಡಿಯಂಡಮೋಳ್ ಶಿಖರಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾಣಯ್ಯ ವಿವರಿಸಿದ್ದಾರೆ.

ಅಲ್ಲದೆ, ಮುಂದೆ ತಲಚೇರಿಯಿಂದ ಕೊಡಗಿಗೆ ರೈಲ್ವೇ ಯೋಜನೆ ವಿರೋಧಿಸಿ, ವೀರಾಜಪೇಟೆಯಿಂದ ಕೇರಳಕ್ಕೆ ಓಟ ಮೂಲಕ ಹೋರಾಟ ರೂಪಿಸಲಾಗುವದು ಎಂದು ಅವರು ಮಾಹಿತಿ ನೀಡಿದ್ದಾರೆ.