ಮಡಿಕೇರಿ, ಜ. 18: ರಾಷ್ಟ್ರದ ಶಕ್ತಿ ಮತ್ತು ಸೌಂದರ್ಯವಾಗಿರುವ ವಿಭಿನ್ನತೆಯ ಮೇಲಿನ ಧಾಳಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನಗಳಾಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೌಹಾರ್ದತೆಯ ಸಂದೇಶ ಸಾರುವ ಅಗತ್ಯವಿರುವದರಿಂದ ‘ಮಾನವ ಸರಪಳಿ’ ರಚಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸೌಹಾರ್ದ ಕರ್ನಾಟಕ ಸಂಘÀಟನೆ ವತಿಯಿಂದ ತಾ. 30 ರಂದು ನಡೆಸಲಾಗುವದೆಂದು ಸಂಘಟನೆಯ ಜಿಲ್ಲಾ ಸಮಿತಿ ಸಂಚಾಲಕ ಡಾ. ಇ.ರ. ದುರ್ಗಾಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯಿಂದ ರಾಜ್ಯ ವ್ಯಾಪಿ ಏಕಕಾಲಕ್ಕೆ ಮಾನವ ಸರಪಳಿ ರಚಿಸಿ ಸೌಹಾರ್ದತೆಯ ಸಂದೇಶ ಸಾರಲಾಗುತ್ತದೆ. ಅದರ ಭಾಗವಾಗಿ ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರದಲ್ಲಿ ತಾ. 30 ರಂದು ಸಂಜೆ 4 ಗಂಟೆಗೆ ಸೌಹಾರ್ದ ಸಮಾಜ ನಿರ್ಮಾಣದಲ್ಲಿ ನಂಬಿಕೆಯನ್ನು ಹೊಂದಿದ ಪ್ರತಿಯೊಬ್ಬ ನಾಗರಿಕರ ಸಹಕಾರದೊಂದಿಗೆ ಮಾನವ ಸರಪಳಿ ರಚಿಸಲಾಗುತ್ತದೆ ಎಂದರು. ಸಂಘÀಟನೆಯ ಸದಸ್ಯ ಎಸ್.ಐ. ಮುನೀರ್ ಅಹಮ್ಮದ್ ಮಾತನಾಡಿ, ಕರಾವÀಳಿ ಜಿಲ್ಲೆಗಳಲ್ಲಿ ಮೂಡಿರುವ ಕರಾಳ ಪರಿಸ್ಥಿತಿ ಮತ್ತೆಲ್ಲೂ ನಡೆಯಬಾರದೆನ್ನುವ ಹಿತಚಿಂತನೆಯಡಿ ಮಾನವ ಸರಪಳಿ ಜಾಗೃತಿ ಕಾರ್ಯ ಕ್ರಮವನ್ನು ಹಮ್ಮಿಕೊಂಡಿರುವದಾಗಿ ತಿಳಿಸಿದರು.
ಸಂಘಟನೆಯ ಮಡಿಕೇರಿ ತಾಲೂಕು ಸಂಚಾಲಕರಾದ ಬಿ.ಎ. ಷಂಶುದ್ದೀನ್ ಮಾತನಾಡಿ, ನಿಗದಿತ ದಿನದಂದು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕೈ-ಕೈ ಹಿಡಿಯುವ ಮೂಲಕ ಸಾರ್ವಜನಿಕರು ಮಾನವ ಸರಪಳಿಯನ್ನು ಫೀ.ಮಾ. ಕಾರ್ಯಪ್ಪ ವೃತ್ತದಿಂದ ಗದ್ದುಗೆಯವರೆಗೆ ವಿಸ್ತರಿಸಬೇಕೆಂದರು. ನಗರದ ವ್ಯಾಪಾರಸ್ಥರು, ಮನೆ ಮಂದಿ ತಾವಿರುವ ಕಡೆಯಲ್ಲೆ ರಸ್ತೆಯುದ್ದಕ್ಕೂ ಮಾನವ ಸರಪಳಿ ರಚನೆಗೆ ಸಹಕರಿಸುವಂತೆ ಮನವಿ ಮಾಡಿದರು.
ಮತ್ತೋರ್ವ ತಾಲೂಕು ಸಂಚಾಲಕ ಕೆ.ಟಿ. ಬೇಬಿ ಮ್ಯಾಥ್ಯು ಮಾತನಾಡಿ, ಮಾನವ ಸರಪಳಿ ಕಾರ್ಯದಲ್ಲಿ ಎಲ್ಲ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಳ್ಳಬೇಕೆಂದು ಕೋರಿದರು.
ವೀರಾಜಪೇಟೆ ತಾಲೂಕು ಸಂಚಾಲಕ ಸಂಕೇತ್ ಪೂವಯ್ಯ ಮಾತನಾಡಿ, ಅಂದು ಸಂಜೆ ವೀರಾಜಪೇಟೆಯ ಮೀನುಪೇಟೆಯಿಂದ ಸುಂಕದ ಕಟ್ಟೆಯವರೆಗೆ ಹತ್ತು ನಿಮಿಷಗಳ ಕಾಲ ಮಾನವ ಸರಪಳಿ ರಚಿಸುವದಾಗಿ ತಿಳಿಸಿದರು.