ಮಡಿಕೇರಿ, ಜ. 18: ಮಡಿಕೇರಿ ನಗರದಲ್ಲಿ ಯುಜಿಡಿ ಎಂಬ ಭೂತದಿಂದಾಗಿ ಇಲ್ಲಿನ ಜನರ ಮನಸ್ಸಿನಲ್ಲಿ ‘ಇದೆಂಥಾ ಅವಸ್ಥೆ ...? ಛೇ...’ ಎಂಬ ನೋವಿನ ನುಡಿ ದಿನೇ ದಿನೇ ಮಾರ್ಧನಿಸುತ್ತಿದ್ದರೆ ಆ ನೋವಿಗೆ ಸ್ಪಂದಿಸಬೇಕಾದವರು ಅಸಹಾಯಕರಾಗಿ ಕೈ ಕಟ್ಟಿ ಕುಳಿತಿರುವಂತಿದೆ.

ಹೌದು ಒಳಚರಂಡಿ ಕಾಮಗಾರಿ ಎಂಬ ಹೆಸರಿನಲ್ಲಿ ಮಡಿಕೇರಿ ನಗರ ವ್ಯಾಪ್ತಿಯ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ಹಾಕುತ್ತಿರುವದು ಒಂದೆಡೆಯಾದರೆ ಈ ಬಗ್ಗೆ ಪ್ರಶ್ನಿಸಬೇಕಾಗಿರುವವರು ತಮಗೇನು ತಿಳಿದೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳು ಬಂದಿದ್ದಾಗ ಅವರನ್ನು ಮಾತ್ರ ಸ್ವಾಗತಿಸಲು ಎಂಬಂತೆ ಕೆಲವು ಹಳ್ಳ ಬಿದ್ದಿದ್ದ ರಸ್ತೆಗಳು ತರಾತುರಿಯಲ್ಲಿ ರೆಡಿಯಾಗಿದ್ದವು. ರಾಜಾಸೀಟು ರಸ್ತೆಯಂತೂ ಇಲ್ಲಿನ ನಾಗರಿಕರು ಆಶ್ಚರ್ಯದಿಂದ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವ ಮಟ್ಟಿಗೆ ಗುಂಡಿಗಳು ಚಂದವಾಗಿ ಮುಚ್ಚಲ್ಪಟ್ಟು ಅಂದವಾಗಿ ಕಂಗೊಳಿಸುತ್ತಿತ್ತು.

ಆದರೆ... ಇದೀಗ ರಾಜಾಸೀಟು ಬಳಿಯ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಬಳಿಯಿಂದ ಪ್ರಸನ್ನ ಗಣಪತಿ ದೇವಾಲಯ ಜಂಕ್ಷನ್‍ನ ಆಟೋ ನಿಲ್ದಾಣದವರೆಗೆ ರಸ್ತೆ ಬದಿಯಲ್ಲಿ ಜೆಸಿಬಿ ಮೂಲಕ ಗುಂಡಿ ತೋಡ ಲಾಗುತ್ತಿದೆ. ಈ ಬಗ್ಗೆ ಕೇಳಿದರೆ ಈ ಹಿಂದೆಯೆ ಅಳವಡಿಸಿದ್ದ ಚೇಂಬರ್‍ಗೆ ಪೈಪ್ ಹಾಕುವ ಕೆಲಸ ಮಾಡ ಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಕಾಮಗಾಗಿ ಪೂರ್ಣ ಗೊಳ್ಳಲಿದ್ದು, ಬಳಿಕ ಗಣಪತಿ ಬೀದಿಯಲ್ಲಿ ಕೆಲಸ ಮುಂದುವರಿ ಯಲಿದೆ ಎನ್ನುತ್ತಾರೆ ಯುಜಿಡಿ ಕಾಮಗಾರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್.