ಕೂಡಿಗೆ, ಜ. 17: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಗೋಟೆ ಮತ್ತು 6ನೇ ಹೊಸಕೋಟೆ, ಸಿದ್ಧಲಿಂಗಪುರ, ಬಾಣಾವರ ವ್ಯಾಪ್ತಿಯಲ್ಲಿ ಕಾಡಾನೆ ಬೆಳಗ್ಗಿನ ಜಾವ 6 ಗಂಟೆಯಲ್ಲಿ ಪ್ರತ್ಯಕ್ಷಗೊಂಡ ಹಿನ್ನೆಲೆ ಈ ವ್ಯಾಪ್ತಿಯ ಗ್ರಾಮಸ್ಥರುಗಳು ಭಯಭೀತರಾಗಿದ್ದಾರೆ. ಗ್ರಾಮಸ್ಥರು ಕೆಲಸದ ನಿಮಿತ್ತ ಕೂಡಿಗೆ ಮತ್ತು ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷಗೊಂಡಿತ್ತು. ಈ ಕಾಡಾನೆಯು ಮೀಸಲು ಅರಣ್ಯ ಪ್ರದೇಶದಿಂದ ಹಳೆಗೋಟೆ ಮತ್ತು ಆರನೇ ಹೊಸಕೋಟೆಯ ರಸ್ತೆಯ ಮೂಲಕ ಊರಿನ ಒಳಭಾಗಕ್ಕೆ ಧಾವಿಸಿ ಅಕ್ಕಪಕ್ಕದ ರೈತರ ಬೆಳೆಗಳನ್ನು ನಷ್ಟ ಪಡಿಸಿದ್ದು, ದೂರದಲ್ಲಿ ಕಂಡ ಜನರನ್ನು ಬೆರಸಿರುವ ಘಟನೆ ನಡೆದಿದ್ದು, ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ಒಂಟಿ ಸಲಗವನ್ನು ಕಾಡಿನತ್ತ ಓಡಿಸಲು ಮುಂದಾಗಬೇಕು ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.