ಮಡಿಕೇರಿ, ಜ.16 : ಊರಿಗೆ ಊರೇ ಸುಖ ನಿದ್ದೆಯಲ್ಲಿರುವಾಗ ನಸುಕಿನಲ್ಲಿ ತೋಟದೊಳಗೆ ನುಸುಳಿ ಬೀಟಿ ಮರ ಕದಿಯಲು ಯತ್ನಿಸುತ್ತಿದ್ದ ಕಳ್ಳರ ಜಾಡನ್ನು ಹಿಡಿದ ‘ನಿಯತ್ತಿನ ಸಿಪಾಯಿ’ಗಳೆಂದೇ ಕರೆಯಲ್ಪಡುವ ಮನೆಯ ಸಾಕು ನಾಯಿಗಳಿಂದಾಗಿ ಕಳವು ಮಾಡಿದ ಮರ ಹಾಗೂ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವ ಪ್ರಸಂಗ ನಡೆದಿದೆ.ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕೋಡ್ಲು - ಹೊದಕಾನ ಗ್ರಾಮ ನಿವಾಸಿ, ಕೊಟ್ಟಕೇರಿಯನ ಪದ್ಮನಾಭ ಅವರ ತೋಟದಲ್ಲಿದ್ದ ಬೀಟಿ ಮರವೊಂದು 2015ರ ಜುಲೈ 15 ರಂದು ನಾಗಬಾಣೆ ಕಾಲೋನಿಗೆ ತೆರಳುವ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಅರಣ್ಯ ಇಲಾಖೆಯವರು ಸ್ಥಳಕ್ಕಾಗಮಿಸಿ ಮರಗಳನ್ನು ತುಂಡರಿಸಿ ಮೂರು ನಾಟಾಗಳಾಗಿ ಪರಿವರ್ತಿಸಿ ತೋಟದಲ್ಲಯೇ ಇರಿಸಿದ್ದರು. ಸರಕಾರಿ ನಾಟಾ ಸಂಗ್ರಹಾಲಯಕ್ಕೆ ಸಾಗಿಸಲು ಅನಾನುಕೂಲತೆಯಿದ್ದು, ಮರ ಕಳ್ಳತನವಾಗದಂತೆ ಪದ್ಮನಾಭ ಅವರ ಸುಪರ್ದಿಗೆ ಭದ್ರತೆಗೆ ನೀಡಿ ಭದ್ರತಾ ಸ್ವೀಕೃತಿ ನೀಡಿದ್ದರು.
ಆದರೆ ಇದುವರೆಗೂ ಮರವನ್ನು ಅಲ್ಲಿಂದ ತೆರವುಗೊಳಿಸಿರಲಿಲ್ಲ. ಎರಡು ವರ್ಷಗಳಿಂದ ಮರದ ನಾಟಾಗಳು ಬಿದ್ದಿರುವದನ್ನು ಗಮನಿಸಿದ ಮರಗಳ್ಳರು ತಾ. 15ರ ನಸುಕಿನ ವೇಳೆ ಮೂರು ಗಂಟೆ ಸಮಯದಲ್ಲಿ ಅಲ್ಲಿಂದ ಅಪಹರಿಸಲು ಯತ್ನಿಸಿದ್ದಾರೆ. ಮರದ ತುಂಡುಗಳನ್ನು ಕಾರಿಗೆ ಹಾಕಿ ಸಾಗಿಸುವಷ್ಟರಲ್ಲಿ ಮರದ ಭಾರಕ್ಕೆ ಕಾರಿನ ಚಕ್ರ ‘ಪಂಕ್ಚರ್’ ಆಗಿದೆ.!
ಎಚ್ಚರಿಸಿದ ಶ್ವಾನಗಳು
ಪದ್ಮನಾಭ ಅವರು ಮನೆ ಕಾವಲಿಗೆಂದು ಸಾಕಿದ್ದ ನಾಯಿಗಳು ಬೊಗಳಲಾರಂಭಿಸಿವೆ. ರಸ್ತೆ ಕಡೆಗೆ ನೋಡಿಕೊಂಡು ನಾಯಿ ಬೊಗಳುತ್ತಿದ್ದ ಸದ್ದಿಗೆ ಎಚ್ಚರಗೊಂಡ ಪದ್ಮನಾಭ ಹಾಗೂ ಪತ್ನಿ ಟಾರ್ಚ್ ಹಿಡಿದು ನೋಡಿದಾಗ ರಸ್ತೆಯಲ್ಲಿ ಎರಡು ಕಾರುಗಳು ನಿಂತಿದ್ದು, ನಾಲ್ಕೈದು ಮಂದಿ ಇರುವದು ಗೋಚರಿಸಿದೆ. ಯಾರೆಂದು? ಇಲ್ಲಿಗೇಕೆ ಬಂದುದಾಗಿ ವಿಚಾರಿಸಿದಾಗ, ‘ದಾರಿ ತಪ್ಪಿ ಬಂದಿದ್ದು, ಟಯರ್ ‘ಪಂಕ್ಚರ್’ ಆಗಿದೆ. ಸರಿಪಡಿಸಿಕೊಂಡು ಹೋಗುತ್ತೇವೆ, ಕುಡಿಯಲು ನೀರು ಕೊಡಿ’ ಎಂದು ಕೆಲವರು ಇವರತ್ತ ಬಂದಿದ್ದಾರೆ.
ಇತ್ತ ನೀರು ಕೊಟ್ಟಾದ ಮೇಲೆ ಸಂಶಯಗೊಂಡ ಪದ್ಮನಾಭ ಅವರು ಕಾರಿನ ಬಳಿ ತೆರಳಿ ಕಾರಿನಲ್ಲೇನಿದೆ ಎಂದು
(ಮೊದಲ ಪುಟದಿಂದ) ನೋಡುವಾಗ ನೇರಳೆ ಬಣ್ಣದ ಟವೇರಾ (ಕೆ.ಎ. 05 ಎಂ.ಬಿ. 7590) ಕಾರಿನೊಳಗೆ ಬೀಟಿ ಮರಗಳು ಪತ್ತೆಯಾಗಿವೆ.
ಕೋವಿ ಎಂದಾಗ ಪರಾರಿ..!
ಬೀಟಿ ಮರ ಕಂಡಾಕ್ಷಣ ಇವರು ಕಳ್ಳರೆಂದು ಅರಿತ ಪದ್ಮನಾಭ ತಮ್ಮ ಅಣ್ಣನ ಮಗ ಪ್ರದೀಪ್‍ಗೆ ಫೋನಾಯಿಸಿ ‘ಕಳ್ಳರು ಬೀಟಿ ಮರ ಕದ್ದೊಯ್ಯುತ್ತಿದ್ದು, ಕೂಡಲೇ ಕೋವಿ ತಕೊಂಡು ಬಾ’ ಎಂದು ಹೇಳಿದ್ದಾರೆ. ಕೋವಿ ಎಂದಾಕ್ಷಣ ಅಲ್ಲಿಂದ ಕಾಲ್ಕಿತ್ತ ಕಳ್ಳರು ಟವೇರಾ ಕಾರು, ಬೀಟಿ ಮರಗಳನ್ನು ಅಲ್ಲಿಯೇ ಬಿಟ್ಟು ಮತ್ತೊಂದು ಮಾರುತಿ 800 ಕಾರಿನಲ್ಲಿ ಪರಾರಿಯಾಗಿದ್ದಾರೆ. ಗ್ರಾಮದಲ್ಲಿ ಮೊಬೈಲ್ ಸಂಪರ್ಕ ಸಮಸ್ಯೆ ಇರುವದರಿಂದ ಬೆಳಿಗ್ಗೆ ಗ್ರಾಮಸ್ಥರಿಗೆ ವಿಷಯ ತಿಳಿಸಿ, ನಂತರ ಮಡಿಕೇರಿ ಗ್ರಾಮಾಂತರ ಠಾಣೆಗೆ ಆಗಮಿಸಿ, ಪದ್ಮನಾಭ ಅವರು ದೂರು ನೀಡಿದ್ದಾರೆ.
ನಂತರ ಸ್ಥಳಕ್ಕೆ ತೆರಳಿದ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿಗಳು ಮಹಜರು ಮಾಡಿ ಕಾರು ಸಹಿತ ಮರವನ್ನು ವಶಪಡಿಸಿಕೊಂಡು ಈ ಬಗ್ಗೆ ಮೊಕದ್ದಮೆ ದಾಖಲಿಸಿದ್ದಾರೆ. ಬೀಟಿ ಮರದ ಮೌಲ್ಯ ರೂ. 3 ಲಕ್ಷ ಎಂದು ಅಂದಾಜಿಸಲಾಗಿದ್ದು, ಕಾರು ಯಾರಿಗೆ ಸೇರಿದ್ದೆಂದು ಕಂಡು ಹಿಡಿದು ಮುಂದಿನ ಕ್ರಮ ಕೈಗೊಳ್ಳುವದಾಗಿ ಠಾಣಾಧಿಕಾರಿ ಚೇತನ್ ತಿಳಿಸಿದ್ದಾರೆ.
- ಸಂತೋಷ್