ಅನಿಲ್ ವಿಶ್ಲೇಷಣೆ

ಸುಂಟಿಕೊಪ್ಪ, ಜ. 17: ಕೋಮು ಸೌಹಾರ್ದತೆಯನ್ನು ಕಾಪಾಡುವ ದಿಸೆಯಲ್ಲಿ ಮೂರು ಧಾರ್ಮಿಕ ಕೇಂದ್ರಗಳು ಒಂದೇ ಭಾಗದಲ್ಲಿ ಕಾರ್ಯಾಚರಿಸುತ್ತಿದೆ. ರಾಜ್ಯದ ಯಾವದೇ ಸ್ಥಳದಲ್ಲಿ ಇಲ್ಲಿನ ಸನ್ನಿವೇಶ ಕಂಡು ಬರಲು ಸಾಧ್ಯವಿಲ್ಲ ಎಂದು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಹೆಚ್.ಟಿ. ಹೇಳಿದರು.

ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ‘ನಮ್ಮ ಸುಂಟಿಕೊಪ್ಪ ಬಳಗ’ ಮೊದಲ ವಾರ್ಷಿಕೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಕಾರರಾಗಿ ಆಗಮಿಸಿ ಮಾತನಾಡಿದ ಅವರು, ಹಿಂದಿ ನಿಂದಲೂ ಯಾವದೇ ಕಾರ್ಯಕ್ರಮಗಳನ್ನು ಆಯೋಜಿ ಸಿದರೂ ಯಶಸ್ವಿಗೊಳಿಸುವ ಸುಂಟಿಕೊಪ್ಪವೆಂದೇ ಈ ಊರು ಪ್ರಖ್ಯಾತಿ ಪಡೆದಿದೆ. ಅಂತಹ ಊರಿನಲ್ಲಿ ಫೇಸ್ ಬುಕ್ ಮೂಲಕ ಆರಂಭವಾದ ಈ ಬಳಗ ಸುಂಟಿಕೊಪ್ಪದ ವಿವಿಧ ಸಮಸ್ಯೆಗಳನ್ನು ಜನರ ಮುಂದಿಡುವ ಪ್ರಯತ್ನ ಶ್ಲಾಘನೀಯ. ಈ ಫೇಸ್ ಬುಕ್ ಖಾತೆಯಲ್ಲಿ ಅವಶ್ಯವಲ್ಲದ ಚಿತ್ರಗಳನ್ನು ಹಾಕದೇ, ಊರಿನ ಹಳೆಯ ಚಿತ್ರಣಗಳು, ಜನರ ಸಮಸ್ಯೆಗಳು, ನಿಧನ ವಾರ್ತೆಗಳಂತಹ ಜನಸೇವಾ ವಿಚಾರಗಳನ್ನು ಹಾಕುತ್ತಿರುವದರಿಂದ ಇಂತಹ ಕಾರ್ಯಕ್ರಮ ಯಶಸ್ವಿಗೊಳ್ಳುವದಕ್ಕೆ ಸಾಧ್ಯವಾಗಿದೆ ಎಂದರು. ‘ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಉಳಿಸಿ’ ಎಂಬ ಲಾಂಛನವನ್ನು ಬಿಡುಗಡೆಗೊಳಿಸಿ ನಂತರ ಮಾತನಾಡಿದ ಮಡಿಕೇರಿ ಲೆಕ್ಕ ಪರಿಶೋಧಕ ಪಿ.ಡಬ್ಲೂ. ಫ್ರಾನ್ಸಿಸ್, ಸುಂಟಿಕೊಪ್ಪ ಎಂದರೆ ಕೊಡಗಿನ ಕಲ್ಕತ್ತಾವಲ್ಲ ಅದು ಪ್ರಪಂಚದ ಬ್ರೆಜಿಲ್ ಎಂದು ಬಣ್ಣಿಸಿದರು. ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಅನ್ನು ನಶಿಸುವದಕ್ಕೆ ಬಿಡಬಾರದು. ಇದನ್ನು ಇನ್ನಷ್ಟು ಬೆಳೆÉಸುವಂತಾಗಬೇಕು ಎಂದರು.

ಕಾರ್ಯಕ್ರಮವನ್ನು ಕುಶಾಲನಗರ ಐ.ಪಿ.ಎಂ.ಸಿ.ಎಸ್. ಬ್ಯಾಂಕಿನ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಳಗದ ಮುಖ್ಯಸ್ಥ ಝಾಯ್ದ್, ಈಗಾಗಲೇ ಬಳಗವು ಹಸಿರು ಸುಂಟಿಕೊಪ್ಪ, ಸ್ವಚ್ಛ ಸುಂಟಿಕೊಪ್ಪ, ಯುವ ಸಬಲೀಕರಣ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿದ್ದು ಅದಕ್ಕೆ ಎಲ್ಲರು ಸಹಕರಿಸಬೇಕು ಎಂದರು. ವೇದಿಕೆಯಲ್ಲಿ ತಾ.ಪಂ. ಸದಸ್ಯ ಪಿ.ಎಂ. ಲತೀಫ್, ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಇದ್ದರು. ಬಳಗದ ಡೆನಿಸ್ ಡಿಸೋಜ ಪ್ರಸ್ತಾವಿಕ ನುಡಿ, ರಂಜಿತ್ ಕುಮಾರ್ ಸ್ವಾಗತಿಸಿ, ಪೆಲ್ಸಿ ಡೆನಿಸ್ ವಂದಿಸಿದರು.

ಗೌರವಾರ್ಪಣೆ: ಸುಂಟಿಕೊಪ್ಪದಲ್ಲಿ ಹಗಲಿರುಳು ಎನ್ನದೇ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಆರಕ್ಷಕ ಠಾಣೆ, ಸರ್ಕಾರಿ ಆರೋಗ್ಯ ಕೇಂದ್ರ, ಗ್ರಾ.ಪಂ.ಯ ಪೌರ ಕಾರ್ಮಿಕರು, ಸೆಸ್ಕ್ ಇವರುಗಳ ಪ್ರಮುಖರ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ರಾತ್ರಿ ಸ್ವಸ್ಥ ಶಾಲೆಯ ವಿಶೇಷ ಮಕ್ಕಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ, ಗೌಡ ಸಮಾಜದ ವತಿಯಿಂದ ಕೋಲಾಟ, ಗೌಡ ನೃತ್ಯ, ಪ್ರವೀಣ್ ಅವರಿಂದ ರಸಮಂಜರಿ ಕಾರ್ಯಕ್ರಮ, ಡ್ರೀಮ್ ಗಲ್ಸ್ ತಂಡದಿಂದ ನೃತ್ಯ, ನಾಟಿ ಕಿಡ್ಸ್ ಡ್ಯಾನ್ಸ್ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನ, ಶರವಣ ಮತ್ತು ತಂಡದವರಿಂದ ದೇಹದಾಢ್ರ್ಯ ಪ್ರದರ್ಶನ ನಡೆಯಿತು.