ವರದಿ: ಟಿ.ಎಲ್.ಶ್ರೀನಿವಾಸ್ ಬೆಂಗಳೂರು, ಜ.17: ಭಾರತದ ಕಾಫಿ ಬೆಳೆಗಾರರಿಗೆ ಉತ್ತೇಜನ ನೀಡಲು ‘ಜಿಯೋ ಟ್ಯಾಗ್’ ಕಾಫಿ ಆಪ್ ಅನ್ನು ಭಾರತೀಯ ಕಾಫಿ ಮಂಡಳಿ ಜಾರಿಗೆ ತರಲಿದೆ. ಭಾರತದ ಕಾಫಿಯ ಗುಣಮಟ್ಟವನ್ನು ಕಾಪಾಡಿ ಕೊಳ್ಳಲು, ಮಣ್ಣು ಪರೀಕ್ಷೆ ಮೂಲಕ ಬೆಳೆಗಾರರಿಗೆ ನೆರವಾಗಲು, ಭಾರತದ ಆಂತರಿಕ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ಕಾಫಿ ಬಳಕೆ ಹೆಚ್ಚಿಸಲು ವಿಭಿನ್ನ ಯೋಜನೆಯನ್ನು ಕಾಫಿ ಮಂಡಳಿ ರೂಪಿಸುತ್ತಿದೆ. ಈವರಗೆ ಕಾಫಿ ಬೆಳೆಗಾರರಿಗೆ ನೀಡುತ್ತಿದ್ದ ವಿವಿಧ ಸಹಾಯಧನ (ಸಬ್ಸಿಡಿ) ಯೋಜನೆ ಯನ್ನು ಕೇಂದ್ರ ಸರ್ಕಾರವು ಕೈಬಿಟ್ಟಿದೆ. ಆದಿವಾಸಿ ಕಾಫಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಾತ್ರಾ ಒಂದೆರಡು ಸಬ್ಸಿಡಿ ಯೋಜನೆ ಇನ್ನು ಮುಂದೆ ಜಾರಿ ಯಲ್ಲಿರುತ್ತದೆ ಎಂದು ಭಾರತೀಯ ಕಾಫಿ ಮಂಡಳಿ ಕಾರ್ಯ ನಿರ್ವಹಣಾಧಿಕಾರಿ ಶ್ರೀವತ್ಸಕೃಷ್ಣ ಬಹಿರಂಗಪಡಿಸಿದ್ದಾರೆ.
ಬೆಂಗಳೂರು ಲಲಿತ್ ಅಶೋಕ್ ಹೋಟೆಲ್ನಲ್ಲಿ ಇಂದು ಸಂಜೆ ಜರುಗಿದ ಭಾರತ ಅಂತರಾಷ್ಟ್ರೀಯ 7ನೇ ಕಾಫಿ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ 3 ಲಕ್ಷಕ್ಕೂ ಅಧಿಕ ಕಾಫಿ ಬೆಳೆಗಾರರಿದ್ದು ಎಲ್ಲ ಬೆಳೆಗಾರರನ್ನು ಒಂದೇ ವೇದಿಕೆಗೆ ತರಲು ಕಾಫಿ ಆಪ್ ಇನ್ನು ಚಾಲ್ತಿ ಯಲ್ಲಿರುತ್ತದೆ. ಕಾಫಿ ಮಂಡಳಿಯಲ್ಲಿ 170 ಸಿಬ್ಬಂದಿ ವರ್ಗವಿದ್ದು, ಎಲ್ಲ ಕಾಫಿ ತೋಟಗಳ ಮಾಹಿತಿ ಕಲೆಹಾಕಲು, ಮಾಲೀಕರ ಸಮಗ್ರ ದಾಖಲಾತಿ ಪ್ರಕ್ರಿಯೆಗೆ ಮತ್ತಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಿದ ಅವರು ಭಾರತದ ಕಾಫಿಗೆ ವಿಶ್ವ ಮಾರುಕಟ್ಟೆಯಲ್ಲಿ ಹೊಸ ಬ್ರಾಂಡ್ ಸೃಷ್ಟಿಸಬೇಕಾಗಿದೆ ಎಂದರು.
ಭಾರತವನ್ನು ಪ್ರಮುಖ ಕಾಫಿ ಉತ್ಪಾದಕ ರಾಷ್ಟ್ರವನ್ನಾಗಿ ಮಾಡಲು ಎಲ್ಲ ಸಣ್ಣ ಕಾಫಿ ಹಿಡುವಳಿದಾರರನ್ನೂ ಒಗ್ಗೂಡಿಸಿ, ಒಂದೇ ವೇದಿಕೆಗೆ ತರಲಾಗುವದು. ಭಾರತದ ಹವಾಮಾನ ವೈಪರೀತ್ಯ ನಡುವೆ ಕಾಫಿ ಮಂಡಳಿಯೂ ಬೆಳೆಗಾರರಿಗೆ ನೇರ ಸಂಭಾಷಣೆ ಮೂಲಕ ಅಗತ್ಯ ಮಾಹಿತಿ ನೀಡಲಿದೆ.ಭಾರತದ ಕಾಫಿ ಉತ್ಪಾದನೆ ಹೆಚ್ಚಲು ಇನ್ನು ಮುಂದೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗುವದು. ಭಾರತದ ನಾಲ್ಕು ಪ್ರಮುಖ ಪಾನೀಯ ಕಂಪೆನಿಗಳೊಂದಿಗೆ ಮಾತೂಕತೆ ನಡೆಸಿ ಭಾರತದ ಕಾಫಿಯನ್ನು ವಿಶ್ವಮಟ್ಟದಲ್ಲಿ ಪ್ರಚಾರ ಪಡಿಸಲು
(ಮೊದಲ ಪುಟದಿಂದ) ಹಾಗೂ ಮಾರಾಟ ವೃದ್ಧಿಸಲು ಸಹಕಾರ ಕೋರಲಾಗುವದು ಎಂದು ಹೇಳಿದ ಅವರು, ಆಂಧ್ರದ ‘ಅರಕ್ಕು’ ಆದಿವಾಸಿ ಕಾಫಿ ಪ್ಯಾರೀಸ್ನ ಮುಖ್ಯ ಬೀದಿಯಲ್ಲಿ ಲಭ್ಯವಾಗುತ್ತಿದ್ದು, ಉತ್ತಮ ದರ ಸಿಗುತ್ತಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆದಿವಾಸಿ( ಟ್ರೈಬಲ್) ಕಾಫಿ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದು, ಕೇಂದ್ರ ಹಾಗೂ ಕಾಫಿ ಮಂಡಳಿ ಸಹಾಯಧನ ಹಾಗೂ ಪೂರಕ ಸಹಕಾರ ನೀಡುತ್ತಿದೆ. ಕರ್ನಾಟಕದಲ್ಲಿಯೂ ಇನ್ನು ಮುಂದೆ ಆದಿವಾಸಿ ಕಾಫಿ ಉತ್ಪಾದನೆಗೆ ಕಾಫಿ ಮಂಡಳಿ ಒಲವು ತೋರಲಿದೆ ಎಂದು ವಿವರಿಸಿದರು. ಯಾವದೇ ಸಹಾಯಧನ ಕಾಫಿ ಕೃಷಿಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ. ಗುಜರಾತ್ ಹಾಲು ಉತ್ಪಾದನೆಯಲ್ಲಿ ಸಾಧನೆ ಮಾಡಿದಂತೆ, ಭಾರತದ ಕಾಫಿ ಬೆಳೆಗಾರರು ಇನ್ನು ಮುಂದೆ ‘ಕಾಫಿ ಬ್ಯುಸಿನೆಸ್ ನೆಟ್ವರ್ಕ್’ಗೆ ಬರಲು ಮನವಿ ಮಡಿದರು.
ಆದಿವಾಸಿಗಳನ್ನು ಕಾಫಿ ಬೆಳೆಗಾರರನ್ನಾಗಿ ಮಾಡಲು ಯೋಜನೆ- ಆಂಜನೇಯ
ಬಿಳಿಗಿರಿರಂಗನ ಬೆಟ್ಟದ ಸೋಲಿಗ ನಿವಾಸಿಗಳಿಗೆ ಕಾಫಿ ಸಸಿಗಳನ್ನು ವಿತರಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು, ಸೋಲಿಗರು ಒಳಗೊಂಡಂತೆ ರಾಜ್ಯದ ಆದಿವಾಸಿಗಳಿಗೆ ಕಾಫಿ-ಕಾಳುಮೆಣಸು ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗಿದೆ. ಸಮಾಜದ ಕಟ್ಟಕಡೆಯ ಜನಾಂಗ ಸೋಲಿಗರನ್ನೂ ಸಮಾಜದ ಮುಖ್ಯವಾಹಿನಿಗೆ ತರಲು, ಕಾಫಿ ಬೆಳೆಗಾರರಂತೆ ಸೋಲಿಗರೂ ಶ್ರೀಮಂತರಾಗಲಿ, ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಕಾಫಿ ಮಂಡಳಿ ಹಾಗೂ ರಾಜ್ಯ ಸರ್ಕಾರ ಆದಿವಾಸಿ ಯೋಜನೆ ರೂಪಿಸಲಾಗಿದೆ. ಭಾರತದಲ್ಲಿ ಸಮಾನತೆ, ಸಂಪತ್ತು, ಸಂವಿಧಾನ ಸಮಾನ ಹಂಚಿಕೆಯಾಗಬೇಕು. ಯಾವದೇ ಬಲ ಇಲ್ಲದ ಅಸಹಾಯಕರನ್ನು ಶಕ್ತಿವಂತರನ್ನಾಗಿ ರೂಪಿಸಬೇಕು. ಮೆಣಸು, ತರಕಾರಿ, ಸಾವಯವ ಕೃಷಿ ಪದ್ಧತಿ ಬಗ್ಗೆಯೂ ಆದಿವಾಸಿಗಳಿಗೆ ತರಬೇತಿ ನೀಡಲಾಗುವದು ಎಂದು ಹೇಳಿದರು.
ನಾನು ಭಾರತದ ಕಾಫಿ ಕುಡಿಯೋಲ್ಲ- ಕೃಷ್ಣ ಬೈರೇಗೌಡ
ಭಾರತದಲ್ಲಿ ಕಾಫಿ ತಯಾರಿ ಮಾಡಲು ಬರುವದಿಲ್ಲ. ಅತ್ಯಂತ ಕೆಟ್ಟ ರುಚಿ ಇರುತ್ತದೆ. ನಾನು ಟಿ ಪ್ರಿಯ. ನಾನು ಈವರೆಗೂ ಕಾಫಿ ಕುಡಿದಿಲ್ಲ. ಕುಡಿಯುವದೂ ಇಲ್ಲ ಎಂದು ಹೇಳಿ ಕಾಫಿ ಹಬ್ಬದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಎಲ್ಲರಿಗೆ ಬೆರಗು ಮೂಡಿಸಿದರು. ಕರ್ನಾಟಕದ ಬಾಬಾ ಬುಡನ್ಗಿರಿಯಲ್ಲಿ ಮೊದಲು ಕಾಫಿ ಕೃಷಿ ಆರಂಭಗೊಂಡಿದ್ದು, 300 ವರ್ಷಗಳ ಇತಿಹಾಸವಿದೆ. 1990 ರ ದಶಕದಲ್ಲಿ ಕಾಫಿ ಬೆಳೆಗಾರರಿಗೆ ಉತ್ತಮ ದರ ಸಿಗತೊಡಗಿದೆ. ಐಎಸ್ಕ್ಯೂ, ಎಫ್ಎಸ್ಕ್ಯೂ ನಂತರ ಭಾರತ ಹಾಗೂ ಸುಮಾರು 30-40 ರಾಷ್ಟ್ರಗಳಿಗೆ ಇಲ್ಲಿನ ಕಾಫಿ ರಫ್ತಾಗುತ್ತಿದೆ. ಭಾರತದ ಕಾಫಿ ನೆರಳು ಆಧಾರಿತ ಕಾಫಿ ಉತ್ಪಾದನೆ ಮಾಡುತ್ತಿದ್ದು, ಕಾಫಿ ಮಂಡಳಿ ಇಲ್ಲಿನ ಕಾಫಿಗೆ ಉತ್ತಮ ಬ್ರಾಂಡ್ ನೊಂದಿಗೆ ಮಾರುಕಟ್ಟೆಯನ್ನು ಒದಗಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಇನ್ಸ್ಟಂಟ್ ಕಾಫಿಗೆ ಶೇ.28 ಜಿಎಸ್ಟಿ ವಿಧಿಸಲಾಗಿದ್ದು, ಕೇಂದ್ರಕ್ಕೆ ಮನವರಿಕೆ ಮಾಡುವ ಮೂಲಕ ಶೇ.18 ಕ್ಕೇ ಇಳಿಸಲಾಗುವದು, ಇತರೆ ಕಾಫಿಗೆ ಶೇ.12 ಜಿಎಸ್ಟಿ ನಿಗಧಿ ಮಾಡಲಾಗಿದ್ದು ವಿಶೇಷ ಪ್ರಯತ್ನದಿಂದ ಶೇ.5ಕ್ಕೆ ಇಳಿಸಲಾಗಿದೆ ಎಂದು ಹೇಳಿದರು.
2020ಕ್ಕೆ ವಿಶ್ವ ಕಾಫಿ ಕಾಂಗ್ರೆಸ್ ಬೆಂಗಳೂರಿನಲ್ಲಿ...
ಬೆಂಗಳೂರಿನಲ್ಲಿ ದೊಡ್ಡಪ್ರಮಾಣದ ವಿಶ್ವಕಾಫಿ ಹಬ್ಬವನ್ನು ‘ವಲ್ರ್ಡ್ ಕಾಫಿ ಕಾಂಗ್ರೆಸ್’ ಹೆಸರಿನಲ್ಲಿ 2020 ನೇ ಇಸವಿಯಲ್ಲಿ ಆಯೋಜಿಸಲಾಗುವದು ಎಂದು ಕೃಷ್ಣ ಬೈರೇಗೌಡ ಪ್ರಕಟಿಸಿದರು. ಇದೇ ಸಂದರ್ಭ ಅಂತರಾಷ್ಟ್ರೀಯ ಕಾಫಿ ಸಂಘಟನೆಯ ಉಪನಿರ್ದೇಶಕ ಜೋಸ್ ಸೆಟ್ಟೆ ಅವರೂ ಧ್ವನಿಗೂಡಿಸಿ ವಿಶ್ವ ಕಾಫಿ ಸಂಘಟನೆಯೊಂದಿಗಿನ ಸದಸ್ಯತ್ವವನ್ನು ಭಾರತ 1962ರಲ್ಲಿ ಹೊಂದಿಕೊಂಡಿತು. ವಿಶ್ವದ ಕಾಫಿ ದಿಗ್ಗಜರನ್ನು ಒಂದುಗೂಡಿಸುವ ನಿಟ್ಟಿನಲ್ಲಿ 2020ರಂದು 5 ನೇ ವಿಶ್ವ ಕಾಫಿ ಹಬ್ಬದ ಆತಿಥ್ಯವನ್ನು ಭಾರತ ವಹಿಸುತ್ತಿದ್ದು, ಇದು ಏಷ್ಯಾದ ಕಾಫಿ ಬೆಳೆಯುವ ದೇಶಗಳಲ್ಲಿಯೇ ಪ್ರಥಮವಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಕಾಫಿ ಉದ್ಯಮಿಗಳು ಇಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಇಂಡಿಯಾ ಕಾಫಿ ಟ್ರಸ್ಟ್ ಅಧ್ಯಕ್ಷ ಅನಿಲ್ ಕುಮಾರ್ ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂಸ್ತಾನ್ ಯೂನಿಲಿವರ್ ಲಿ.ನ ರಿಫ್ರೆಶ್ಮೆಂಟ್ ವಿಭಾಗದ ಸುಧೀರ್ ಸೀತಾಪತಿ ಅವರು ಟಿ ಉದ್ಯಮ ಹಾಗೂ ಕಾಫಿ ಉದ್ಯಮ ಮಾರುಕಟ್ಟೆ ಕುರಿತು ಮಾತನಾಡಿದರು. ವಂದನಾರ್ಪಣೆಯನ್ನು ಕಾಫಿ ಲ್ಯಾಬ್ ಮುಖ್ಯಸ್ಥೆ ಸುನಾಲಿನಿ ಮೆನನ್ ನಿರ್ವಹಿಸಿದರು. ಕಾಫಿ. ಮಂಡಳಿ ಮಾಜೀ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ಪಾಲ್ಗೊಂಡಿದ್ದರು.
ಇಂದು ರುಚಿಕರ ಕಾಫಿ ತಯಾರಿಬಗ್ಗೆ ಮೂರು ಕಾರ್ಯಾಗಾರ ನಡೆಯಿತು. ತಾ. 18 ರಂದು (ಇಂದು) 2 ಕಾರ್ಯಾಗಾರ, ಕಾಫಿ ರಸಪ್ರಶ್ನೆ ಹಾಗೂ ಕಾಫಿ ಪ್ರವಾಸೋದ್ಯಮದ ಬಗ್ಗೆ ಪ್ರಿಯಾಂಕ್ ಖರ್ಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭವಿದೆ.