ಪೊನ್ನಂಪೇಟೆ, ಜ. 17: ಕೊಡಗಿನ ಬಡಜನರ ಮನೆಯ ಕತ್ತಲನ್ನು ಹೋಗಲಾಡಿಸಲು ತಮ್ಮ ಆಸಕ್ತಿಯಿಂದ ಜಾರಿಗೊಂಡಿರುವ ‘ಬೆಳಕಿನ ಭಾಗ್ಯ’ ಯೋಜನೆಗೆ ಕೇಂದ್ರ ಸರಕಾರದ ನಯಾಪೈಸೆಯ ಅನುದಾನವಿಲ್ಲ. ಈ ಯೋಜನೆಯನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ‘ಭಾಗ್ಯ’ ಯೋಜನೆಗಳೆ ಪ್ರೇರಣೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು.

ತಮ್ಮ ‘ಬೆಳಕಿನ ಭಾಗ್ಯ’ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾ.ಪಂ. ವ್ಯಾಪ್ತಿಯ ಕಡುಬಡವರಿಗೆ ವಿತರಿಸಲಾಗುತ್ತಿರುವ ಸೋಲಾರ್ ದೀಪಗಳನ್ನು ತಮ್ಮ 40 ಮತ್ತು 41ನೇ ಕಾರ್ಯಕ್ರಮವಾಗಿ ಮಾಯಮುಡಿ ಮತ್ತು ಕಿರುಗೂರು ಗ್ರಾ.ಪಂ. ವ್ಯಾಪ್ತಿಯ ಬಡ ಫಲಾನುಭವಿಗಳಿಗೆ ಬುಧವಾರದಂದು ಮಾಯಮುಡಿ ಗ್ರಾ.ಪಂ. ಸಭಾಂಗಣದಲ್ಲಿ ವಿತರಿಸಿ ಮಾತನಾಡಿದ ಅವರು, ಮುಂದಿನ ಫೆಬ್ರವರಿಯಲ್ಲಿ ಮಂಡನೆಯಾಗುವ ರಾಜ್ಯ ಬಜೆಟ್‍ನಲ್ಲಿ ರಾಜ್ಯದ ಬಡ ಜನತೆಗಾಗಿ ‘ಬೆಳಕಿನ ಭಾಗ್ಯ’ ಯೋಜನೆಯನ್ನು ಘೋಷಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ವಿಶೇಷ ಮನವಿ ಸಲ್ಲಿಸಲಾಗುವದು ಎಂದು ಹೇಳಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಒಟ್ಟು 58 ಗ್ರಾ.ಪಂ. ಮತ್ತು 2 ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಫಲಾನುಭವಿಗಳಿಗೆ ಸೋಲಾರ್ ಮನೆದೀಪ ನೀಡಲು ಉದ್ದೇಶಿಸ ಲಾಗಿದೆ. ಈಗಾಗಲೇ 41 ಗ್ರಾ.ಪಂ. ವ್ಯಾಪ್ತಿಯ ಫಲಾನುಭವಿಗಳಿಗೆ ವಿತರಣಾ ಕಾರ್ಯ ಪೂರ್ಣ ಗೊಂಡಿದೆ ಎಂದು ತಿಳಿಸಿದ್ದಾರೆ.

ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಅವರು ಮಾತನಾಡಿ, ಬೆಳಕಿನ ಭಾಗ್ಯ ಯೋಜನೆಯಿಂದ ತಾಲೂಕಿನ ಬಹಳಷ್ಟು ಬಡವರ ಮನೆಯ ಕತ್ತಲು ದೂರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ತಾ.ಪಂ. ಮಾಜಿ ಸದಸ್ಯ ಮತ್ತು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್. ಟಾಟು ಮೊಣ್ಣಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ 22 ಮತ್ತು ಕಿರುಗೂರು ಗ್ರಾ.ಪಂ. ವ್ಯಾಪ್ತಿಯ 17 ಫಲಾನುಭವಿಗಳಿಗೆ ಸೋಲಾರ್ ಮನೆದೀಪಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯಮುಡಿ ಗ್ರಾ.ಪಂ. ಅಧ್ಯಕ್ಷೆ ಭವಾನಿ ಮೋಹನ್ ವಹಿಸಿದ್ದರು. ಸಮಾರಂಭದಲ್ಲಿ ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಮಾಯಮುಡಿ ಗ್ರಾ.ಪಂ. ಉಪಾಧ್ಯಕ್ಷೆ ಗೌರಿರಾಮ, ಸದಸ್ಯರಾದ ಆಪಟ್ಟಿರ ಸೌಮ್ಯ ಮೊಣ್ಣಪ್ಪ, ವಿಠಲ್ ನಾಚಯ್ಯ, ಸಿ.ಕೆ. ಚಿಣ್ಣಪ್ಪ, ಶಾಂತ, ಬುಶ್ರ, ಟಿ.ವಿ.ಶ್ರೀಧರ್, ಮಣಿಕುಂಞ, ಮಂಜುಳ, ಕಿರುಗೂರು ಗ್ರಾ.ಪಂ. ಸದಸ್ಯ ಪಿ.ಕೆ. ಗಿರೀಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಕೆ.ಎಂ. ಅಬ್ದುಲ್ ರಹಮಾನ್ (ಬಾಪು), ಕಿರುಗೂರು ವಲಯ ಕಾಂಗ್ರೇಸ್ ಅಧ್ಯಕ್ಷ ಸಿ.ಪಿ. ಬೋಪಣ್ಣ, ಕಾಂಗ್ರೇಸ್ ಮುಖಂಡರಾದ ಎಸ್. ಎಂ. ವಿಶ್ವನಾಥ್, ಮಾಂಗೇರ ಪೊನ್ನಪ್ಪ, ಕಾಳಪಂಡ ರಾಜ ಮೊದಲಾದವರು ಪಾಲ್ಗೊಂಡಿದ್ದರು. ಹರೀಶ್ ಸ್ವಾಗತಿಸಿದರೆ, ಸೌಮ್ಯ ಮೊಣ್ಣಪ್ಪ ವಂದಿಸಿದರು.