ಮಡಿಕೇರಿ, ಜ. 13: ಕೊಡಗಿನ ವೀರ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಬದುಕಿನ ಸಾಕ್ಷ್ಯ ಚಿತ್ರಣದೊಂದಿಗೆ ರೂಪು ಗೊಳ್ಳುತ್ತಿರುವ, ಇಲ್ಲಿನ ಸ್ಮಾರಕ ಭವನದ (ಸನ್ನಿಸೈಡ್) ಕಾಮಗಾರಿಯನ್ನು ಮುಂದಿನ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಸಲಹೆ ನೀಡಿದ್ದಾರೆ. ನಿನ್ನೆ ಈ ಸಂಬಂಧ ನಿವೃತ್ತ ಸೈನ್ಯಾಧಿಕಾರಿಗಳು ಹಾಗೂ ಇತರ ಪ್ರಮುಖರೊಂದಿಗೆ ಚರ್ಚಿಸಿದ ಅವರು, ಸಾಧ್ಯವಿರುವಷ್ಟು ಬೇಗನೆ ಕೆಲಸ ಮುಗಿಸುವಂತೆ ಗಮನ ಸೆಳೆದರು.

ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ಭವನದ ಒಳಾಂಗಣ ಅಲಂಕಾರ ಕುರಿತು ಕಾರ್ಯ ನಿರ್ವಹಿಸುತ್ತಿರುವ ತಜ್ಞ ಸುಭಾಷ್ ಅವರು, ಈ ವೇಳೆ ನಿವೃತ್ತ ಸೈನ್ಯಾಧಿಕಾರಿಗಳ ಸಮ್ಮುಖ ನೂತನ ಜಿಲ್ಲಾಧಿಕಾರಿಗಳಿಗೆ ಯೋಜನೆಯ ಸಾಕ್ಷ್ಯ ಚಿತ್ರಣದ ಕುರಿತು ಮಾಹಿತಿ ಒದಗಿಸಿದರು. ಈಗಾಗಲೇ ಈ ಸಂಬಂಧ ಭಾರತೀಯ ಸೇನೆಯ ಯುದ್ಧ ಸ್ಮಾರಕ ಭವನ ರಾಣಿಕೇತ್‍ಗೆ ತೆರಳಿ, ಅಲ್ಲಿ ಕೊಡಗಿನ ಸೇನಾನಿಗೆ ಸಂಬಂಧಿಸಿದ ಅಮೂಲ್ಯ ದಾಖಲೆಗಳನ್ನು ಕಲೆ ಹಾಕಿರುವದಾಗಿ ವಿವರಿಸಿದರು.

ಅಲ್ಲದೆ ದೇಶದ ಇತರೆಡೆಗಳಲ್ಲಿ ಇರುವ ಸೇನಾ ನೆಲೆಗಳಲ್ಲಿ ಜ. ತಿಮ್ಮಯ್ಯ ಅವರಿಗೆ ಸಂಬಂಧ ಪಟ್ಟಂತೆಯೂ ಮಾಹಿತಿ ಕಲೆ ಹಾಕಿದ್ದು, ಡೆಹರಾಡೂನ್‍ನಲ್ಲಿರುವ ರಾಯಲ್ ಮಿಲಿಟರಿ ಕಾಲೇಜಿನಲ್ಲಿ ತಿಮ್ಮಯ್ಯ ಅವರ ವಿದ್ಯಾರ್ಥಿ ಜೀವನದ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ನವದೆಹಲಿಯ ಕೇಂದ್ರ ರಕ್ಷಣಾ ಸಚಿವಾಲಯದಲ್ಲಿರುವ ಈ ವೀರ ಸೇನಾನಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕುವ ಮೂಲಕ, ಬೆಂಗಳೂರಿನ ಬಿಷಪ್ ಕಾಟನ್ ಶಾಲೆ ಮತ್ತು ತಮಿಳುನಾಡಿನ ಕೂನೂರು ಸಂತ ಜೋಸೆಫರ ಶಾಲೆಯಿಂದ ಅವರ ವಿದ್ಯಾರ್ಥಿ ದಿಸೆಯಲ್ಲಿನ ಪ್ರಮುಖ ದಾಖಲೆಗಳನ್ನು ಕ್ರೋಢೀಕರಿಸಲಾಗುತ್ತಿದೆ ಎಂದರು.

ಪ್ರಮುಖವಾಗಿ 1922ರ ಸಂದರ್ಭ ಅವರು ಯುನೈಟೆಡ್ ಕಿಂಗ್ ಡ್ಯಾಮ್‍ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ಅಲ್ಲಿನ ವಿದ್ಯಾರ್ಥಿ ಸಮೂಹದೊಂದಿಗಿನ ಅಪೂರ್ವ ಚಿತ್ರವೊಂದನ್ನು ಖರೀದಿಸಲಾಗಿದೆ ಎಂದು ಸುಭಾಷ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಈ ಎಲ್ಲ ಅಂಶಗಳೊಂದಿಗೆ ಜ. ತಿಮ್ಮಯ್ಯ ಸ್ಮಾರಕ ಭವನದ ಒಳಾಂಗಣ ಅಲಂಕಾರದ

(ಮೊದಲ ಪುಟದಿಂದ) ಕಿರು ಸಾಕ್ಷ್ಯವುಳ್ಳ ದಾಖಲಾತಿಗಳನ್ನು ಖುದ್ದಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ನಿವೃತ್ತ ಸೈನ್ಯಾಧಿಕಾರಿಗಳಾದ ಲೆ. ಜ. ಬಿ.ಸಿ. ನಂದಾ, ಬಿ.ಎ. ನಂಜಪ್ಪ, ಕಂಡ್ರತಂಡ ಸುಬ್ಬಯ್ಯ ಮೊದಲಾದವ ರೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರೈಸಲು ಸರಕಾರದಿಂದ ಹಣ ಕಲ್ಪಿಸುವ ಆಶ್ವಾಸನೆ ನೀಡಿದರು.

ವರ್ಷದ ಹಿಂದೆ ತಾ. 7.1.2016 ರಂದು ಜನರಲ್ ತಿಮ್ಮಯ್ಯ ಸ್ಮಾರಕ ಭವನದ ನವೀಕರಣಕ್ಕೆ ಶಿಲಾನ್ಯಾಸದೊಂದಿಗೆ ರೂ. 5.50 ಕೋಟಿಯ ಯೋಜನೆ ರೂಪಿಸಲಾಗಿದೆ. ಕೊಡಗು ನಿರ್ಮಿತಿ ಕೇಂದ್ರದಿಂದ ನಿರ್ವಹಿಸಲ್ಪಡುತ್ತಿರುವ ಈ ಕೆಲಸ ಬಹುತೇಕ ಪೂರ್ಣ ಗೊಳ್ಳುವ ಹಂತದಲ್ಲಿದ್ದು, ಈ ಐತಿಹಾಸಿಕ ಸ್ಮಾರಕ ಭವನದ ವಸ್ತು ಸಂಗ್ರಹಾಲಯಕ್ಕೆ ಪ್ರಥಮ ಕಾಣಿಕೆಯೆಂಬಂತೆ ನಿನ್ನೆಯಷ್ಟೆ 1971ರ ಯುದ್ಧ ಟ್ಯಾಂಕ್ ಸೇರ್ಪಡೆಗೊಂಡಿದೆ.

ಸೈನಿಕ ಪರಂಪರೆಯ ವೀರಭೂಮಿ ಕೊಡಗಿನಲ್ಲಿ ಜ. ಕೆ.ಎಸ್. ತಿಮ್ಮಯ್ಯ ನೆನಪಿನೊಂದಿಗೆ ರೂಪುಗೊಳ್ಳುತ್ತಿರುವ ಈ ಸ್ಮಾರಕ ಭವನದಲ್ಲಿ ವಿಶ್ವಮಟ್ಟದ ಆಕರ್ಷಣೆಯೊಂದಿಗೆ, ಯುವ ಪೀಳಿಗೆಗೆ ಸ್ಪೂರ್ತಿ ನೀಡುವಂತೆ ವೀರಸೇನಾನಿಯ ಜೀವನದಿ ಯಶೋಗಾಥೆಯನ್ನು ಕನ್ನಡ, ಇಂಗ್ಲೀಷ್, ಹಿಂದಿ ಮುಂತಾದ ಭಾಷೆಗಳೊಂದಿಗೆ ಕೊಡವ ಭಾಷೆಯಲ್ಲೂ ದಾಖಲಿಸಲು ತಯಾರಿ ನಡೆದಿರುವದಾಗಿ ಇದೇ ಸಂದರ್ಭ ನಿವೃತ್ತ ಮೇಜರ್ ಬಿ.ಎ. ನಂಜಪ್ಪ ಸುಳಿವು ನೀಡಿದ್ದಾರೆ.