ಕುಶಾಲನಗರ, ಜ. 11: ದೇಶಭಕ್ತರು ಮತ್ತು ದೇಶದ್ರೋಹಿಗಳ ನಡುವೆ ಭಿನ್ನತೆ ಅರಿಯುವ ಶಕ್ತಿಯಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಪಕ್ಷವನ್ನು ಉಗ್ರಗಾಮಿ ಗಳಿಗೆ ಹೋಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿ ಕಾರ್ಯಕರ್ತರು ಒತ್ತಾಯಿಸಿದರು.

ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ವಿರುದ್ಧ ಧಿಕ್ಕಾರ ಕೂಗಿದರು. ಭಯೋತ್ಪಾದಕರಿಗೆ ಬೆಂಬಲ ನೀಡುವ ದರೊಂದಿಗೆ ಹಿಂದು ವಿರೋಧಿ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ಕೂಡಲೆ ಬಿಜೆಪಿಯ ಕ್ಷಮೆಯಾಚಿಸ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಿದ್ದರಾಮಯ್ಯ ಭಾವಚಿತ್ರ ದಹಿಸಿ ಆಕ್ರೋಷ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ರಾಜ್ಯದಲ್ಲಿ ಹಿಂದೂಪರ ಸಂಘಟನೆ ಗಳ ಕಾರ್ಯಕರ್ತರನ್ನು ಕಗ್ಗೊಲೆಗೈಯುತ್ತಿರುವ ಕೆಎಫ್‍ಡಿ ಹಾಗೂ ಪಿಎಫ್‍ಐ ಸಂಘಟನೆಗಳನ್ನು ಬೆಂಬಲಿಸುವ ಮುಖ್ಯಮಂತ್ರಿ ಬಿಜೆಪಿ ಮತ್ತು ಆರ್‍ಎಸ್‍ಎಸ್‍ನಂತಹ ದೇಶಭಕ್ತ ಸಂಘಟನೆಗಳನ್ನು ಉಗ್ರಗಾಮಿಗಳಿಗೆ ಹೋಲಿಸಿರುವದು ಖಂಡನೀಯ. ಕೂಡಲೆ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕಿದೆ ಎಂದು ಆಗ್ರಹಿಸಿದರು. ಪ್ರಮುಖರಾದ ಜಿ.ಎಲ್. ನಾಗರಾಜ್ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಸಂಸ್ಕøತಿಯ ಕೊರತೆ ಉಂಟಾಗಿದೆ. ಅವರನ್ನು ದೇವರೇ ಶಿಕ್ಷಿಸಬೇಕಾಗಿದೆ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಇಂತಹ ರಾಜಕಾರಣಿಗಳು ರಾಜಕೀಯ ತೊರೆಯುವದು ಒಳಿತು ಎಂದರು.

ಈ ಸಂದರ್ಭ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎನ್. ಕುಮಾರಪ್ಪ, ನಗರ ಉಪಾಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಸಂಘಟನೆಗಳ ಪ್ರಮುಖರಾದ ಮಂಜುನಾಥ್, ನವನೀತ್, ಅಮೃತ್‍ರಾಜ್, ಅನೀಶ್, ಅಣ್ಣಯ್ಯ, ಚೆಲುವರಾಜು, ದೇವರಾಜ್ ಮತ್ತಿತರರು ಇದ್ದರು.