ಸೋಮವಾರಪೇಟೆ, ಜ. 11: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗಗಳಲ್ಲೂ ವೈಫಲ್ಯ ಕಂಡಿದ್ದು, ಇದನ್ನು ಮುಚ್ಚಿಕೊಳ್ಳಲು ಜನರ ತೆರಿಗೆ ಹಣದಿಂದ ಸಾಧನಾ ಸಮಾವೇಶ ನಡೆಸಿದೆ. ತಲಾ 500 ರೂ. ನೀಡಿ ಸಮಾವೇಶಕ್ಕೆ ಜನರನ್ನು ಕರೆತಂದಿದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲ್ ಗೌಡ ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಿನಿಂದ ಯಾವದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಸಮಸ್ಯೆಗಳನ್ನು ಹುಟ್ಟುಹಾಕುವದೇ ಸರ್ಕಾರದ ಕೆಲಸವಾಗಿದೆ ಎಂದು ದೂರಿದರು.
ನಿಷ್ಠಾವಂತ ಅಧಿಕಾರಿ ಡಿ.ಕೆ. ರವಿ, ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರುಗಳ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್‍ನ ಕೆಲ ಸಚಿವರ ಹೆಸರು ಕೇಳಿಬಂದರೂ ಯಾವದೇ ಕ್ರಮವಾಗಿಲ್ಲ. ಚಿಕ್ಕಮಗಳೂರಿನ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಯ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಡಿವೈಎಸ್‍ಪಿ ಅನುಪಮಾ ಶೆಣೈಗೆ ಸಚಿವರ ಕಿರುಕುಳ, ಚಿಂತಕ ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಗಳು ನಡೆದರೂ ಆರೋಪಿಗಳ ಬಂಧನವಾಗಿಲ್ಲ. ಕೋಮು ವಿಚಾರದ ಘರ್ಷಣೆಗಳಿಂದ 30ಕ್ಕೂ ಅಧಿಕ ಮಂದಿ ಯುವಕರ ಹತ್ಯೆ, ಸಾವಿರಾರು ರೈತರ ಆತ್ಮಹತ್ಯೆಗಳು ನಡೆದರೂ ಸರ್ಕಾರ ಯಾವದೇ ಕ್ರಮ ಕೈಗೊಂಡಿಲ್ಲ. ಇಂತಹ ಹತ್ಯಾಕಾಂಡ ಈ ಸರ್ಕಾರದ ಅವಧಿಯಲ್ಲಿ ಮಾತ್ರ ನಡೆದಿದೆ. ಇದೇನಾ ಕಾಂಗ್ರೆಸ್‍ನ ಸಾಧನೆ? ಎಂದು ವಿಠಲ್ ಪ್ರಶ್ನಿಸಿದರು.
ಮಡಿಕೇರಿಯಲ್ಲಿ ನಡೆದ ಸಾಧನಾ ಸಮಾವೇಶಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ತಲಾ ರೂ. 500 ನೀಡಿ ಜನರನ್ನು ಕರೆತರಲಾಗಿದೆ. ಸಂಬಳದ ವಿಚಾರಕ್ಕಾಗಿ ಕುಶಾಲನಗರದಲ್ಲಿ ಘರ್ಷಣೆಯೂ ನಡೆದಿದೆ ಎಂದು ಆರೋಪಿಸಿದರು.
ಪಕ್ಷದಿಂದ ಭರತ್‍ಕುಮಾರ್, ವಿ.ಎಂ. ವಿಜಯ ಸೇರಿದಂತೆ ಇತರರು ಹೊರ ನಡೆದರೂ ಯಾವದೇ ತೊಂದರೆಯಿಲ್ಲ. ಜೀವಿಜಯ ಅವರಿಂದ ಯಾರಿಗೂ ತೊಂದರೆಯಾಗಿಲ್ಲ. ಇವರಿಬ್ಬರ ಮನೆಗೆ ಸ್ವತಃ ಜೀವಿಜಯ ತೆರಳಿದ್ದರೂ ಬೆಲೆ ನೀಡಿಲ್ಲ ಎಂದು ಗೋಷ್ಠಿಯಲ್ಲಿದ್ದ ಯುವ ಜೆಡಿಎಸ್ ಉಪಾಧ್ಯಕ್ಷ ಹೆಚ್.ಕೆ. ಪ್ರೆಸ್ಸಿ ಹೇಳಿದರು.
ಗೋಷ್ಠಿಯಲ್ಲಿ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಕೆ.ಎಸ್. ವಿಜಯ, ಅಲ್ಪಸಂಖ್ಯಾತ ಘಟಕದ ಪಿ.ಎ. ಅಬ್ಬಾಸ್ ಉಪಸ್ಥಿತರಿದ್ದರು.