ವೀರಾಜಪೇಟೆ, ಜ. 11: ವೀರಾಜಪೇಟೆಯ ಸುಣ್ಣದ ಬೀದಿಯ ನಿವಾಸಿ ಜಿಯಾವುಲ್ಲಾ(26) ಎಂಬಾತನ ಮೇಲೆ ಆತನ ಪತ್ನಿ ಅಸ್ಮಾಬಾನು ನೀಡಿದ ದೂರಿನ ಮೇರೆ ನಗರ ಪೊಲೀಸರು ಕೊಲೆ ಯತ್ನ ಹಾಗೂ ವರದಕ್ಷಿಣೆ ಕಿರುಕುಳದ ಆರೋಪದಡಿಯಲ್ಲಿ ಐ.ಪಿ.ಸಿ 307, 480 ಪ್ರಕಾರ ಪ್ರಕರಣ ದಾಖಲಿಸಿಕೊಂಡು ಜಿಯಾವುಲ್ಲಾನನ್ನು ಬಂಧಿಸಿದ್ದಾರೆ.

ಕಳೆದ ಮೂರೂವರೆ ವರ್ಷದ ಹಿಂದೆ ಪಿರಿಯಾಪಟ್ಟಣದ ಅಸ್ಮಾಬಾನು (23) ಎಂಬಾಕೆಯನ್ನು ಮದುವೆಯಾಗಿದ್ದ ಆರೋಪಿ ಮದುವೆಯ ಸಂದರ್ಭ ರೂ. 1ಲಕ್ಷ ನಗದು ಹಾಗೂ 90ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದಿದ್ದನೆನ್ನಲಾಗಿದೆ. ಮೂರು ವರ್ಷ ದಂಪತಿ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದರು. ಈ ದಂಪತಿಗೆ ಎರಡು ವರ್ಷ ಪ್ರಾಯದ ಹೆಣ್ಣು ಮಗುವಿದೆ. ಈಗ ಆರು ತಿಂಗಳ ಹಿಂದೆ ಜಿಯಾವುಲ್ಲ ತನ್ನ ಪತ್ನಿಗೆ ತವರು ಮನೆಯಿಂದ ರೂ ಎರಡು ಲಕ್ಷ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದುದರಿಂದ ಕೆಲವು ತಿಂಗಳು ಆಕೆ ತವರು ಮನೆಗೆ ತೆರಳಿದ್ದಳು.

ಪಿರಿಯಾಪಟ್ಟಣಕ್ಕೆ ಮೂರು ತಿಂಗಳ ಹಿಂದೆ ತೆರಳಿದ್ದ ಆರೋಪಿ ಪತ್ನಿಗೆ ಯಾವದೇ ಕಿರುಕುಳ ಕೊಡುವದಿಲ್ಲ ಎಂದು ಪೋಷಕರು ಹಾಗೂ ಸಂಬಂಧಿಕರ ಮುಂದೆ ತಿಳಿಸಿ ವೀರಾಜಪೇಟೆಗೆ ಪತ್ನಿಯನ್ನು ಕರೆದುಕೊಂಡು ಬಂದಿದ್ದ. ಆದರೆ ಮಾರನೇ ದಿನದಿಂದಲೇ ಆಕೆಗೆ ಕಿರುಕುಳ ನೀಡಲಾರಂಭಿಸಿದ್ದ. ಒಂದು ದಿನ ರಾತ್ರಿ ಅಸ್ಮಾಬಾನುವನ್ನು ಕೊಠಡಿಯಲ್ಲಿ ಕೂಡಿ ಹಾಕಿ ಆಕೆಯ ಮುಖಕ್ಕೆ ತಲೆದಿಂಬುವನ್ನು ಬಳಸಿ ಉಸಿರುಗಟ್ಟಿ ಕೊಲೆ ಮಾಡಲು ಯತ್ನಿಸಿದ್ದನೆನ್ನಲಾಗಿದೆ. ಚಾಕಚಕ್ಯತೆಯಿಂದ ಆತನಿಂದ ಬಿಡಿಸಿಕೊಂಡು ಮಗುವಿನೊಂದಿಗೆ ಪಿರಿಯಾಪಟ್ಟಣದ ತವರು ಮನೆಗೆ ತೆರಳಿ ಪ್ರಾಣಾಪಾಯದಿಂದ ಪಾರಾಗಿರುವದಾಗಿ ಆಕೆ ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಪೊಲೀಸರು ಜಿಯಾವುಲ್ಲನ ತಾಯಿ ಮುನಿರಾಬಾನು, ತಂಗಿ ರೇಷ್ಮಾಬಾನು, ದುಬೈನಲ್ಲಿರುವ ಸಹೋದರ ಉಸ್ಮಿಲ್ಲಾ, ಮಸಿಮ್ಮುಲ್ಲಾ, ಜಿಯಾವುಲ್ಲನ ಸೋದರ ಮಾವ ಖಾನ್ ಬಹದ್ದೂರ್ ಈ 5 ಮಂದಿ ವಿರುದ್ಧವು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಇಂದು ಪೊಲೀಸರು ಜಿಯಾವುಲ್ಲನನ್ನು ಮೊದಲು ವಿಚಾರಣೆಗೊಳಪಡಿಸಿ ನಂತರ ಬಂಧಿಸಿದ್ದಾರೆ. ಈ ಪ್ರಕರಣದ ತನಿಖಾಧಿಕಾರಿಯಾಗಿ ಸರ್ಕಲ್ ಇನ್ಸ್‍ಪೆಕ್ಟರ್ ಎನ್.ಕುಮಾರ್ ಆರಾಧ್ಯ ನೇಮಕಗೊಂಡಿದ್ದಾರೆ.