ಸೋಮವಾರಪೇಟೆ, ಜ. 11: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘಕ್ಕೆ ನಡೆಯುವ ಚುನಾವಣೆಯಲ್ಲಿ ಕೊಡಗಿನ ಪ್ರತಿನಿಧಿಯಾಗಿ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅವರನ್ನು ಆರಿಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪದಾಧಿಕಾರಿಗಳು ವಿಸ್ತøತ ಚರ್ಚೆ ನಡೆಸಿ ಅಂತಿಮವಾಗಿ ಸ್ಥಳೀಯರೇ ಆಗಿರುವ, ಒಕ್ಕಲಿಗರ ಸಂಘದ ಶ್ರೇಯೋಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಎ.ಆರ್. ಮುತ್ತಣ್ಣ ಅವರನ್ನು ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆರಿಸಲು ತೀರ್ಮಾನಿಸಲಾಯಿತು.
ಕಳೆದ 50 ವರ್ಷಗಳಿಂದ ಒಕ್ಕಲಿಗರ ಸಂಘ ಹಾಗೂ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವ ಮುತ್ತಣ್ಣ ಅವರನ್ನು ರಾಜ್ಯ ಸಂಘದ ನಿರ್ದೇಶಕರನ್ನಾಗಿ ಆರಿಸಿದರೆ ಸಮುದಾಯದ ಏಳಿಗೆ ಸಾಧ್ಯ. ರಾಜ್ಯದಿಂದ ದೊರಕುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಸಮುದಾಯ ಬಾಂಧವರಿಗೆ ತಲುಪಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕೊಡಗಿನ ಒಕ್ಕಲಿಗರ ಸರ್ವ ಸಮ್ಮತ ಅಭ್ಯರ್ಥಿಯನ್ನಾಗಿ ಮುತ್ತಣ್ಣ ಅವರನ್ನೇ ಆರಿಸಬೇಕು ಎಂದು ಸದಸ್ಯರುಗಳು ಅಭಿಪ್ರಾಯಿಸಿದರು.
ಸಭೆಯಲ್ಲಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಬಿ. ಗಣಪತಿ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರುಗಳು, ಕಾರ್ಯಕಾರಿ ಮಂಡಳಿ ಸದಸ್ಯರು, ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು.