*ಸಿದ್ದಾಪುರ, ಜ. 10: ಶಿಕ್ಷಣ ಕ್ಷೇತ್ರದಲ್ಲಿ ಶಾಲೆಗಳಲ್ಲಿ ಕಾಮಗಾರಿ, ಪ್ರವಾಸದ ಹೆಸರಿನಲ್ಲಿ ಮಕ್ಕಳಿಂದ ಹಣ ವಸೂಲಿ ಮಾಡಿ ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಅಲ್ಲೊಂದು ಇಲ್ಲೊಂದು ಪ್ರಕರಣ ಬೆಳಕಿಗೆ ಬರುತ್ತಲೇ ಇರುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಸರಕಾರಿ ಶಾಲೆಯೊಂದರಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಅದರಲ್ಲಿ ವೆಚ್ಚವಾಗಿ ಉಳಿದ ಹಣವನ್ನು ಪೋಷಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಸಂಗ ಇದಾಗಿದೆ.ಅಭ್ಯತ್‍ಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ಮಂದಿ ವಿದ್ಯಾರ್ಥಿಗಳನ್ನು ಈ ಶಾಲೆಯಿಂದ ಬೇಸಿಗೆ ಪ್ರವಾಸದ ಅಂಗವಾಗಿ ಸಾಂಸ್ಕøತಿಕ ನಗರಿ ಮೈಸೂರಿನ ಪ್ರಮುಖ ಪ್ರೇಕ್ಷಣಿಯ ಸ್ಥಳಕ್ಕೆ ಕಳೆದ ವಾರ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಕರೆದೊಯ್ದಿದ್ದರು. ಪ್ರತಿ ಮಕ್ಕಳ ಪೋಷಕರಿಂದ ರೂ. 600 ಅನ್ನು ಪ್ರವಾಸ ವೆಚ್ಚಕ್ಕೆ ಪಡೆದುಕೊಂಡಿದ್ದರು. ಅನಂತರ ಪ್ರವಾಸಿ ಕೇಂದ್ರಗಳನ್ನು ಸುತ್ತಿ ವಾಪಸ್ ಶಾಲೆಗೆ ಬಂದಾಗ ಮುಖ್ಯೋಪಾಧ್ಯಾಯಿನಿ ಹೆಚ್.ಎಂ. ಡೈಸಿ, ಶಿಕ್ಷಕ ಆಶ್ರಫ್ ಅವರು ಲೆಕ್ಕಪತ್ರವನ್ನು ಎಸ್‍ಡಿಎಂಸಿ ಅಧ್ಯಕ್ಷೆ ಸುಮಾದೇವಪ್ಪ ಹಾಗೂ ಸದಸ್ಯರುಗಳ ಮುಂದೆ ಮಂಡಿಸಿದ್ದರು. ಮಿತವಾಗಿ ವೆಚ್ಚಮಾಡಿದ್ದು, ಉಳಿಕೆ ಹಣವನ್ನು 30 ಮಂದಿ ಪೋಷಕರಿಗೆ ತಲಾ ರೂ. 200 ರಂತೆ ಶಿಕ್ಷಕರುಗಳು ಹಂಚಿ ಪ್ರಾಮಾಣಿಕತೆ ತೋರಿದ್ದಾರೆ. ಈ ಶಾಲೆಯಲ್ಲಿ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವದು ವಿಶೇಷವಾಗಿದೆ. -ಅಂಚೆಮನೆ ಸುಧಿ