ಮೇ 10 ರಂದು ಚುನಾವಣೆ ಸಾಧ್ಯತೆ ಬೆಂಗಳೂರು, ಜ. 10: ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ನಡುವೆ, ಕರ್ನಾಟಕ ಕುರುಕ್ಷೇತ್ರಕ್ಕೆ ಮುಹೂರ್ತ ಬಹುತೇಕ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗ ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಆಸಕ್ತಿ ತೋರಿದ್ದು, ಮೇ 10 ರಂದು ಮತದಾನಕ್ಕೆ ದಿನಾಂಕ ನಿಗದಿ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಯ ಸರ್ಕಾರ ಒಂದೇ ಹಂತದ ಚುನಾವಣೆ ನಡೆಸಲು ಅಪಸ್ವರ ಎತ್ತಿದ್ದು, ಕಾನೂನು ಸುವ್ಯವಸ್ಥೆಯ ನೆಪ ಹೇಳಿ ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ಆಯೋಗಕ್ಕೆ ಮನವಿ ಮಾಡಿಕೊಂಡಿದೆ. ಆದರೆ ಈ ವಿಚಾರ ನಮ್ಮ ಕೈಯಲ್ಲಿ ಇಲ್ಲ. ಮುಖ್ಯ ಚುನಾವಣಾ ಆಯುಕ್ತರೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಉಪ ಆಯುಕ್ತ ಉಮೇಶ್ ಸಿನ್ಹಾ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಚುನಾವಣಾ ಆಯೋಗ ಸ್ಪಂದಿಸಿದರೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಮೊದಲನೇ ಹಂತದ ಚುನಾವಣೆ ನಡೆದರೆ ಮೇ 10 ರಂದು ಎರಡನೇ ಹಂತದ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮೇ 14 ರಂದು ಮತ ಎಣಿಕೆ ನಡೆಯುವ ಸಂಭವ ಇದೆ.

ಇಸ್ರೋ ಅಧ್ಯಕ್ಷರಾಗಿ ಸಿವನ್ ಕೆ. ಆಯ್ಕೆ

ನವದೆಹಲಿ, ಜ. 10: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ)ಯ ನೂತನ ಅಧ್ಯಕ್ಷರನ್ನಾಗಿ ಸಿವನ್ ಕೆ. ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಸಿವಾನ್ ಕೆ. ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಬಾಹ್ಯಾಕಾಶ ಇಲಾಖೆಯ ನೂತನ ಕಾರ್ಯದರ್ಶಿ ಮತ್ತು ಇಸ್ರೋದ ಮುಖ್ಯಸ್ಥರಾಗಿ ನೇಮಕ ಮಾಡಲು ಸಂಪುಟ ನೇಮಕ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ. ಜನವರಿ 12, 2015ರಲ್ಲಿ ಇಸ್ರೋ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಕನ್ನಡಿಗ, ಆಲೂರು ಸೀಳಿನ್ ಕಿರಣ್ ಕುಮಾರ್ ಅವರ ಅಧಿಕಾರವಧಿ ಮುಗಿದ ಹಿನ್ನೆಲೆ ಅವರ ಸ್ಥಾನಕ್ಕೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿದ್ದ ಸಿವನ್ ಅವರನ್ನು ನೇಮಕ ಮಾಡಲಾಗಿದೆ. 1980 ರಲ್ಲಿ ಮದ್ರಾಸ್ ಐಐಟಿಯಿಂದ ಏರೋನಾಟಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದ ಸಿವನ್ ಅವರು, 1982ರಲ್ಲಿ ಬೆಂಗಳೂರಿನ ಐಐಎಸ್ಸಿಯಿಂದ ಏರೋಸ್ಪೇಸ್ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದು, 1982ರಲ್ಲೇ ಇಸ್ರೋ ಸೇರಿಕೊಂಡಿದ್ದರು.

ಅಮೇರಿಕಾಗೆ ಪಾಕ್ ಸಹಕಾರ ಸ್ಥಗಿತ

ಮಡಿಕೇರಿ, ಜ. 10: ಅಮೇರಿಕಾ 2 ಬಿಲಿಯನ್ ಡಾಲರ್ ನೆರವು ಸ್ಥಗಿತಗೊಳಿಸಿರುವದು ಪಾಕಿಸ್ತಾನವನ್ನು ಕೆರಳಿಸಿದ್ದು, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಅಮೇರಿಕಾಗೆ ಗುಪ್ತಚರ ಹಾಗೂ ರಕ್ಷಣಾ ಸಹಕಾರವನ್ನು ಸ್ಥಗಿತಗೊಳಿಸಿದೆ ಎಂದು ದಿ ನ್ಯೂಸ್ ಇಂಟರ್ ನ್ಯಾಷನಲ್ ಹೇಳಿದೆ. ದಿ ನ್ಯೂಸ್ ಇಂಟರ್ ನ್ಯಾಷನಲ್ ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. ಆದರೆ ಈವರೆಗೂ ಪಾಕಿಸ್ತಾನ ಅಮೇರಿಕಾಗೆ ಸಹಕಾರವನ್ನು ಸ್ಥಗಿತಗೊಳಿಸಿರುವದು ಅಧಿಕೃತವಾಗಿಲ್ಲ. ಮಂತ್ರಿಗಳು ಹೇಳಿರುವ ಹೇಳಿಕೆ ಪಾಕ್ ಸರ್ಕಾರದ ನಿಲುವನ್ನೂ ಪ್ರತಿನಿಧಿಸುತ್ತದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ಲಾಮಾಬಾದ್‍ನಲ್ಲಿರುವ ಅಮೇರಿಕಾ ರಾಯಭಾರಿ ಕಚೇರಿ ಪಾಕ್ ಅಮೇರಿಕಾಗೆ ಸಹಕಾರ ಸ್ಥಗಿತಗೊಳಿಸಿರುವದರ ಬಗ್ಗೆ ಯಾವದೇ ಅಧಿಕೃತ ಮಾಹಿತಿ ಇಲ್ಲ ಎಂದಿದೆ.

ತಾ. 27 ಕರ್ನಾಟಕ ಬಂದ್‍ಗೆ ವಾಟಾಳ್ ಕರೆ

ಬೆಂಗಳೂರು, ಜ. 10: ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ತಾ. 27 ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿರುವದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ತಾ. 27 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಬಂದ್ ಕರೆ ನೀಡಲಾಗಿದ್ದು, ಈ ಬಂದ್‍ಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ತಾ. 28 ರಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ 27ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದ್ದು, ಒಂದು ವೇಳೆ ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಭರವಸೆ ನೀಡಿದರೆ ಬಂದ್ ಹಿಂಪಡೆಯುವದಾಗಿ ವಾಟಾಳ್ ತಿಳಿಸಿದ್ದಾರೆ. ಅಲ್ಲದೆ ಬಂದ್ ದಿನವೇ ಬೃಹತ್ ಹೋರಾಟ ನಡೆಸುವ ಬಗ್ಗೆ ನಿರ್ಧರಿಸಿರುವದಾಗಿ ಹೇಳಿದರು.

ಟ್ಯಾಕ್ಸಿ ಸೇವೆ ಮತ್ತಷ್ಟು ದುಬಾರಿ

ಬೆಂಗಳೂರು, ಜ. 10: ರಾಜ್ಯ ಸರ್ಕಾರ ಸಿಲಿಕಾನ್ ಸಿಟಿಯ ಕ್ಯಾಬ್‍ಗಳಿಗೆ ಕನಿಷ್ಟ ದರ ನಿಗದಿ ಮಾಡಿದ್ದು, ಇನ್ನು ಮುಂದೆ ಟ್ಯಾಕ್ಸಿ ಸೇವೆ ಮತ್ತಷ್ಟು ದುಬಾರಿಯಾಗಲಿದೆ. ಸಣ್ಣ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ ಕನಿಷ್ಟ ದರ 44 ರೂಪಾಯಿ ಹಾಗೂ ಐಷಾರಾಮಿ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ 80 ರೂಪಾಯಿ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಟ್ಯಾಕ್ಸಿಗಳಿಗೆ ಕನಿಷ್ಟ ದರ ನಿಗದಿಪಡಿಸಿದ್ದರೂ ಟ್ಯಾಕ್ಸಿ ಕಂಪೆನಿಗಳು ಬಯಸಿದಷ್ಟು ಕಡಿಮೆ ದರ ವಿಧಿಸಬಹುದಾಗಿದೆ. ಆದರೆ ಕನಿಷ್ಟ ದರಕ್ಕಿಂತ ಹೆಚ್ಚು ವಿಧಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇಂಡಿಯನ್ ಎಕ್ಸ್‍ಪ್ರೆಸ್‍ಗೆ ಲಭ್ಯವಾಗಿರುವ ನೂತನ ದರ ಪಟ್ಟಿಯ ಪ್ರಕಾರ, ಕಾರುಗಳ ಮಾರುಕಟ್ಟೆ ಬೆಲೆ ಆಧರಿಸಿ, ಪ್ರಯಾಣ ದರವನ್ನು ಎ, ಬಿ, ಸಿ ಮತ್ತು ಡಿ ನಾಲ್ಕು ಮಾದರಿಯ ದರಗಳನ್ನು ನಿಗದಿಪಡಿಸಲಾಗಿದೆ. ಸಣ್ಣ ಕಾರುಗಳು ಡಿ ದರ್ಜೆಯಲ್ಲಿ ಬರುತ್ತಿದ್ದು, ಅವುಗಳಿಗೆ ಕನಿಷ್ಟ 44 ರೂಪಾಯಿ ಹಾಗೂ 16 ಲಕ್ಷ ರೂಪಾಯಿಗೂ ಹೆಚ್ಚಿನ ಬೆಲೆಯ ಕಾರುಗಳಿಗೆ ಎ ದರ್ಜೆ ನೀಡಲಾಗಿದ್ದು, ಅದಕ್ಕೆ ಕನಿಷ್ಟ 80 ರುಪಾಯಿ ನಿಗದಿಪಡಿಸಲಾಗಿದೆ.

ಎಂ.ಎಂ. ಕಲಬುರ್ಗಿ ಹತ್ಯೆ : ಸುಪ್ರಿಂ ನೋಟೀಸ್

ನವದೆಹಲಿ, ಜ. 10: ವಿಚಾರವಾದಿ, ಸಾಹಿತಿ ಎಂ.ಎಂ. ಕಲಬುರ್ಗಿ ಹತ್ಯೆ ಸಂಬಂಧ ಎಸ್‍ಐಟಿ ತನಿಖೆ ನಡೆಸಬೇಕೆಂದು ಮನವಿ ಬಂದಿರುವ ಹಿನ್ನೆಲೆ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ತನಿಖಾ ದಳ, ಸಿಬಿಐ, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶರಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚುಡ್ ಇವರಿದ್ದ ಪೀಠವು ಲೇಖಕನ ಪತ್ನಿ ಉಮಾ ದೇವಿ ಕಲಬುರ್ಗಿ ಸಲ್ಲಿಸಿದ ಅರ್ಜಿಯನ್ನು ಪರ್ಶೀಲಿಸಿದ್ದು ಆರು ವಾರಗಳಲ್ಲಿ ತನಿಖಾ ಸಂಸ್ಥೆಗಳು ಮತ್ತು ಎರಡು ರಾಜ್ಯಗಳ ಸರ್ಕಾರಗಳು ನೋಟೀಸ್‍ಗೆ ಉತ್ತರಿಸಬೇಕೆಂದು ಆದೇಶಿಸಿದೆ. ಎಡಪಂಥೀಯ ಚಿಂತಕ ಗೋವಿಂದ ಪನ್ಸಾರೆ ಮತ್ತು ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯ ಮಾದರಿಯಲ್ಲೇ ತನ್ನ ಪತಿಯನ್ನೂ ಹತ್ಯೆ ಮಾಡಿದ್ದಾರೆ ಎಂದು ಉಮಾ ದೇವಿ ಕಲಬುರ್ಗಿ ತನ್ನ ಅರ್ಜಿಯಲ್ಲಿ ತಿಳಿಸಿದ್ದರು. ಕಲಬುರ್ಗಿ ಅವರನ್ನು ಅವರ ಮನೆಯಲ್ಲೇ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು.

100ಕ್ಕೂ ಹೆಚ್ಚು ಮಳಿಗೆಗಳ ಮೇಲೆ ಐಟಿ ಧಾಳಿ

ಚೆನ್ನೈ, ಜ. 10: ತೆರಿಗೆ ಪಾವತಿ ವಂಚನೆ ಆರೋಪದ ಮೇಲೆ ದಕ್ಷಿಣ ಭಾರತ ಮೂಲದ ಎರಡು ಪ್ರಮುಖ ಜ್ಯುವೆಲ್ಲರಿ ಸಂಸ್ಥೆಗಳ 100ಕ್ಕೂ ಹೆಚ್ಚು ಮಳಿಗೆಗಳ ಮೇಲೆ ದೇಶಾದ್ಯಂತ ಧಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದೆ. ಕೇರಳ ಮೂಲದ ಜ್ಯುವೆಲ್ಲರಿ ಸಂಸ್ಥೆಯಾದ ಜೋಯಲುಕ್ಕಾಸ್ ಮತ್ತು ಅದರ ಜೊತೆ ಸಂಪರ್ಕ ಹೊಂದಿರುವ ಮತ್ತೊಂದು ಚಿನ್ನದ ಮಾರಾಟ ಸಂಸ್ಥೆ ಎಂಜಿ ಗೋಲ್ಡ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಚೆನ್ನೈ, ಹೈದರಾಬಾದ್, ತ್ರಿಶೂರ್, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ಜ್ಯುವೆಲ್ಲರಿ ಸಂಸ್ಥೆಗಳ 130ಕ್ಕೂ ಅಧಿಕ ಮಳಿಗೆಗಳ ಮೇಲೆ ಧಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ. ನೋಟುಗಳ ಅನಾಣ್ಯೀಕರಣದ ನಂತರ ತೆರಿಗೆ ವಂಚನೆಯ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಈ ಎರಡು ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಧಾಳಿ ನಡೆಸಿದೆ.