ಮಡಿಕೇರಿ, ಜ. 10: ಜಿಲ್ಲೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿದ್ದಾರೆಂಬ ಸುದ್ದಿ ಹರಡಿದಾಗಿನಿಂದ ಜಿಲ್ಲೆಯ ಜನತೆ, ಸಂಘ-ಸಂಸ್ಥೆಗಳು, ವಿವಿಧ ಸಮಾಜಗಳು, ಹೋರಾಟಗಾರರು ಬೇಡಿಕೆಗಳ ಮನವಿಗಳ ಪಟ್ಟೆಯನ್ನೇ ತಯಾರು ಮಾಡಿಟ್ಟುಕೊಂಡಿದ್ದರು. ನಿನ್ನೆ ದಿನ ಇಲ್ಲಿನ ಸುದರ್ಶನ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಗಳಿಂದ ಅಹವಾಲು ಸ್ವೀಕಾರ ಸಂದರ್ಭ ಮನವಿ, ಅಹವಾಲುಗಳನ್ನು ಸಲ್ಲಿಸಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರಮುಖರು ಜಮಾಯಿಸಿದ್ದರು. ಭದ್ರತೆಯಲ್ಲಿದ್ದ ಪೊಲೀಸರು ಒಬ್ಬೊಬ್ಬರನ್ನಾಗಿ ಒಳಗಡೆ ಬಿಡುತ್ತಿದ್ದರು. ಆದರೆ, ಕಾವೇರಿ ತಾಲೂಕು ಹೋರಾಟ ಸಮಿತಿಯ ಹೋರಾಟಗಾರರು ಅಧಿಕ ಸಂಖ್ಯೆಯಲ್ಲಿ ಒಳನುಗ್ಗಲು ಪ್ರಯತ್ನಿಸಿದ ಸಂದರ್ಭ ಪೊಲೀಸರು ತಡೆದರು. ಈ ಸಂದರ್ಭ ನೂಕು-ನುಗ್ಗಲು ಉಂಟಾಯಿತಲ್ಲದೆ, ಇದರಿಂದಾಗಿ ಬೇಡಿಕೆ ಸಲ್ಲಿಸಲು ಬಂದಿದ್ದ ಇತರರಿಗೂ ಅವಕಾಶವಿಲ್ಲದಂತಾಯಿತು. ಮಾಧ್ಯಮದವರಿಗೂ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ತಾಲೂಕಿಗಾಗಿ ಮನವಿ
ಕುಶಾಲನಗರ ಕಾವೇರಿ ತಾಲೂಕು ಹಾಗೂ ಪೊನ್ನಂಪೇಟೆ ತಾಲೂಕು ರಚನೆ ಮಾಡುವಂತೆ ಆಗ್ರಹಿಸಿ ಉಭಯ ಹೋರಾಟ ಸಮಿತಿಯ ಪ್ರಮುಖರಾದ ವಿ.ಪಿ. ಶಶಿಧರ್ ಹಾಗೂ ಅರುಣ್ ಮಾಚಯ್ಯ ನೇತೃತ್ವದಲ್ಲಿ ಹೋರಾಟಗಾರರು ಮನವಿ ಸಲ್ಲಿಸಿದರು. ತಾಲೂಕು ರಚನೆ ಸಂಬಂಧ ಇರುವ ವ್ಯವಸ್ಥೆಗಳನ್ನು ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ತಾಲೂಕು ರಚನೆ ಮಾಡಲು ಯಾವದೇ ತಕರಾರು, ವಿರೋಧವಿಲ್ಲ. ಆದರೆ ತಾಲೂಕು ರಚನೆ ಸಂಬಂಧ ಬಜೆಟ್ ಮಂಡನೆ ಮಾಡುವಾಗ ಬೇಡಿಕೆ ಇಟ್ಟಿದ್ದರೆ ಆಗುತ್ತಿತ್ತು. ಇದೀಗ ತಡವಾಗಿ ಬೇಡಿಕೆ ಇಟ್ಟಿದ್ದೀರಾ, ರಾಜ್ಯಾದ್ಯಂತ 20 ತಾಲೂಕುಗಳ ಬೇಡಿಕೆ ಇರುವದರಿಂದ ಈಗ ಕಷ್ಟವಾಗಲಿದೆ. ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡುವದಾಗಿ ಉಭಯ ಕಡೆಯವರಿಗೆ ಭರವಸೆ ನೀಡಿದರು.
ಕೊಡವ ಸಮಾಜ
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ನೇತೃತ್ವದ ಆಡಳಿತ ಮಂಡಳಿಯವರು ಮುಖ್ಯಮಂತ್ರಿಗಳಿಗೆ ಒಡಿಕತ್ತಿ ನೀಡಿ ಗೌರವಿಸಿದರೆ, ಮೈಸೂರು ರಸ್ತೆಯಲ್ಲಿರುವ ಕೊಡವ ಸಮಾಜದ ಜಾಗದಲ್ಲಿ ಸಾಂಸ್ಕøತಿಕ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು.
ನಗರಸಭೆ
ಮಡಿಕೇರಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಸದಸ್ಯರು ನಗರಸಭೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು.
ಗೌಡ ಸಮಾಜ
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಹಾಗೂ ಆಡಳಿತ ಮಂಡಳಿಯವರು ಗೌಡ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಸತಿ ಸಮಿತಿ
ಭೂಮಿ ಮತ್ತು ವಸತಿ ಹಕ್ಕು ಸಮಿತಿಯ ನಿರ್ವಾಣಪ್ಪ ಹಾಗೂ ಇತರರು ನಿವೇಶನ ರಹಿತರಿಗೆ ವಸತಿ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಸ್ಮಶಾನ
ಪಾಲೇಮಾಡು ಸ್ಮಶಾನ ಹೋರಾಟ ಸಮಿತಿಯ ಹೆಚ್.ಕೆ. ಮೊಣ್ಣಪ್ಪ ನೇತೃತ್ವದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಾಗುತ್ತಿದ್ದು, ಸ್ಮಶಾನಕ್ಕೆ ಜಾಗ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭ ಕಡತಗಳನ್ನು ಸರಕಾರಕ್ಕೆ ಕಳುಹಿಸಿಕೊಡುವಂತೆ ಸೂಚಿಸಿದರು.
ಇದೇ ಸಂದರ್ಭ ಕೆ.ಎಸ್.ಸಿ.ಎ. ಸ್ಟೇಡಿಯಂ ಸಂಚಾಲ ಪ್ರಥ್ವಿ ದೇವಯ್ಯ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸ್ಟೇಡಿಯಂ ಕಾಮಗಾರಿ ಹಾಗೂ ಸ್ಮಶಾನ ಜಾಗ ವಿವಾದದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು 1 ಎಕರೆ ಜಾಗ ಸ್ಮಶಾನಕ್ಕೆ ಮೀಸಲಿಡುವಂತೆ ಹಾಗೂ 11 ಎಕರೆಯಲ್ಲಿ ಸ್ಟೇಡಿಯಂ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು.
ಕಾಫಿ ಬೆಳೆಗಾರರು
ಕಾಫಿ ಬೆಳೆಗಾರರ ಒಕ್ಕೂಟದವರು ಮನವಿ ಸಲ್ಲಿಸಿ ಒತ್ತುವರಿ ನೆಪದಲ್ಲಿ ಬೆಳೆಗಾರರಿಗೆ ಕಿರುಕುಳ ನೀಡಲಾಗುತ್ತಿರುವ ಬಗ್ಗೆ ಗಮನ ಸೆಳೆದರು.
ಜಾಮೀಯ ಮಸೀದಿ
ಮಡಿಕೇರಿ ಜಾಮೀಯ ಮಸೀದಿ ಪ್ರಮುಖರು ಮಸೀದಿ ಅಧೀನದಲ್ಲಿರುವ ಜಾಗ ಒತ್ತುವರಿಯಾಗಿದ್ದು, ತೆರವುಗೊಳಿಸಿಕೊಡುವಂತೆ ಮನವಿ ಸಲ್ಲಿಸಿದರು.
ಶಾಸಕರ ಮನವಿ
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಅತಿಯಾದ ಮಳೆಯಿಂದ ರಸ್ತೆ ಹಾಳಾಗುತ್ತಿದ್ದು, ರಸ್ತೆ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ರೂ. 200 ಕೋಟಿ ಅನುದಾನ ಘೋಷಣೆ ಮಾಡಬೇಕು. ಕೊಡವ ಕುಟುಂಬ, ಗೌಡ ಕುಟುಂಬ ಹಾಗೂ ಇನ್ನಿತರ ಸಮಾಜಗಳ ಕುಟುಂಬಗಳ ಹಾಕಿ ಮತ್ತು ಇತರ ಕ್ರೀಡಾಕೂಟಗಳನ್ನು ಪ್ರತೀ ವರ್ಷ ನಡೆಸುತ್ತಿದ್ದಾರೆ. ಇದಕ್ಕೆ ಅನುದಾನದ ಅವಶ್ಯಕತೆಯಿದ್ದು, ಮುಂಬರುವ ಮುಂಗಡ ಪತ್ರದಲ್ಲಿ ರೂ. 2 ಕೋಟಿ ಅನುದಾನ ಘೋಷಣೆ ಮಾಡಬೇಕು. ಕೊಡಗಿನಲ್ಲಿ ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿ ಹಲವಾರು ಕೃಷಿಕರು ಫಾರಂ ನಂ. 50 ಹಾಗೂ 53 ರಲ್ಲಿ ಅರ್ಜಿ ಸಲ್ಲಿಸಿರುವದಿಲ್ಲ. ಅವರಿಗೆ 94 ಬಿ ಗೆ ತಿದ್ದುಪಡಿ ಮಾಡಿ ಕನಿಷ್ಟ 3 ಎಕರೆಯವರೆಗೆ 50 ಮತ್ತು 53 ರಲ್ಲಿ ಅವಕಾಶ ಮಾಡಿಕೊಡುವಂತೆ ಕೋರಿ ಹಾಗೂ ಈ ಹಿಂದೆ ಫಾರಂ ನಂ. 50 ರಲ್ಲಿ ಅರ್ಜಿ ಸಲ್ಲಸಿದ್ದು, 53 ರಲ್ಲಿ ಅರ್ಜಿ ಸಲ್ಲಿಸದೆ ಇರುವವರಿಗೆ ನಂ. 53 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂಬದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ಕೆ.ಜಿ. ಬೋಪಯ್ಯ ಮನವಿ ಸಲ್ಲಿಸಿದ್ದಾರೆ.
ಜಿ.ಪಂ. ಅಧ್ಯಕ್ಷರು
ಹಳೇ ಕೋಟೆ ವಿಧಾನ ಸಭಾಂಗಣದ ಕಟ್ಟಡದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಕಟ್ಟಡ ನಿರ್ವಹಣೆಯಿಲ್ಲದೆ ಅಲ್ಲಲ್ಲಿ ಹೆಂಚುಗಳು ಬಿದ್ದು ಸೋರಲಾರಂಭಿಸಿರುತ್ತದೆ. ನಿರ್ವಹಣೆಗೆ ತುರ್ತು ಕ್ರಮ ಕೈಗೊಳ್ಳದೆ ಇದ್ದರೆ ಕಟ್ಟಡಕ್ಕೆ ಅತೀವ ಹಾನಿಯಾಗಿ ಐತಿಹಾಸಿಕ ರಾಜರ ಕಾಲದ ಸ್ಮಾರಕ ನಶಿಸುವ ಸಂಭವ ಇರುತ್ತದೆ. ಆದ್ದರಿಂದ ಸದರಿ ಕೋಟೆಯ ನಿರ್ವಹಣೆಗೆ ತುರ್ತು ಕ್ರಮ ಕೈಗೊಳ್ಳುವದು, ರಾಜ್ಯದ 30 ಜಿಲ್ಲೆಗಳ ಪೈಕಿ ಕೊಡಗು ಜಿಲ್ಲೆಗೆ ಅತೀ ಕಡಿಮೆ ಅನುದಾನವನ್ನು ನಿಗದಿಗೊಳಿಸಲಾಗಿದೆ. 2015-16 ಮತ್ತು 2016-17ನೇ ಸಾಲಿನಲ್ಲಿ ಕೊಡಗು ಬರಪೀಡಿತ ಜಿಲ್ಲೆಯೆಂದು ಸರಕಾರದಿಂದ ಘೋಷಣೆಯಾಗಿರುತ್ತದೆ. ಕಳೆದ 2 ವರ್ಷಗಳಲ್ಲಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕಡಿಮೆಯಾಗಿದ್ದರಿಂದ ಭೂಮಿಯಲ್ಲಿ ಜಲ ಉತ್ಪತ್ತಿಯಾಗದೆ ಅಂತರ್ಜಲ ಮಟ್ಟ ಕಡಿಮೆಯಾಗಿದ್ದು, ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ಜಲಮೂಲಗಳು ಬತ್ತಿಹೋಗಿ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿರುತ್ತದೆ. ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ರೂ. 50 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು, ಕೊಡಗಿನಲ್ಲಿ ಜಿಲ್ಲಾ ಪಂಚಾಯಿತಿ ರಸ್ತೆಗಳು 4274.74 ಕಿ.ಮೀ.ಗಳಿದ್ದು, ತುಂಬಾ ವರ್ಷಗಳಿಂದ ರಸ್ತೆ ನಿರ್ವಹಣೆಗೆ ಹಂಚಿಕೆಯಾಗುತ್ತಿರುವ ಅನುದಾನ ಸಾಲುತ್ತಿಲ್ಲ. ಆದ್ದರಿಂದ ಹೆಚ್ಚುವರಿಯಾಗಿ ರೂ. 50 ಕೋಟಿ ಅನುದಾನದವನ್ನು ಬಿಡುಗಡೆ ಮಾಡಬೇಕು. ಕೊಡಗು ಜಿಲ್ಲೆ ಪ್ರವಾಸಿ ತಾಣವಾಗಿದ್ದು, ಪ್ರವಾಸೋದ್ಯಮದಲ್ಲಿ ತೀವ್ರಗತಿಯಲ್ಲಿ ಮುಂದುವರೆಯುತ್ತಿರುವ ಜಿಲ್ಲೆಯಾಗಿದೆ. ಪ್ರವಾಸೋದ್ಯಮ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ರೂ. 100 ಲಕ್ಷ, ದೇವಸ್ಥಾನ ರಸ್ತೆ ಅಭಿವೃದ್ಧಿಗೆ ರೂ. 200 ಲಕ್ಷ ಅನುದಾನವನ್ನು ಬಿಡುಗಡೆ ಮಾಡುವದು ಸೇರಿದಂತೆ ವಿವಿಧ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್
ನಮ್ಮ ದೇಶದ ಪ್ರಥಮ ಸೇನಾ ದಂಡನಾಯಕರಾಗಿದ್ದಂತಹ ಕೊಡಗಿನ ವೀರ ಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರ ಸರಕಾರಕ್ಕೆ ಕೂಡಲೇ ಶಿಫಾರಸ್ಸು ಮಾಡಬೇಕು. ಕೊಡಗಿನ ಜನತೆಯ ಬಹು ವರ್ಷಗಳ ಬೇಡಿಕೆಯಂತೆ ಕಾವೇರಿ ತಾಲೂಕು (ಕುಶಾಲನಗರ) ಹಾಗೂ ಪೊನ್ನಂಪೇಟೆ ತಾಲೂಕುಗಳನ್ನು ನೂತನವಾಗಿ ಘೋಷಿಸಬೇಕು. ರಾಜ್ಯದ ದಕ್ಷಿಣ ಕಾಶಿ ಎಂದು ಹೆಸರು ವಾಸಿಯಾಗಿರುವ ಕೊಡಗಿನ ಕುಲದೇವತೆಯಾದ ಕಾವೇರಿ ಉಗಮ ಸ್ಥಾನ ತಲಕಾವೇರಿ ಹಾಗೂ ಶ್ರೀ ಭಗಂಡೇಶ್ವರ ದೇವಸ್ಥಾನದಲ್ಲಿ ಪ್ರವಾಸಿಗರಿಂದ ಪಾವಿತ್ರ್ಯತೆ ಹಾಳಾಗದಂತೆ ಕ್ರಮವಹಿಸಬೇಕು ಮತ್ತು ಪ್ರವಾಸಿಗರ ಹಿತರಕ್ಷಣೆ ಕಾಪಾಡಬೇಕು. ಜಿಲ್ಲೆಯ ರೈತರ ಹಿತ ಕಾಪಾಡಲು ಹಾಗೂ ಭತ್ತದ ಕೃಷಿಗೆ ಉತ್ತೇಜನ ನೀಡಲು ಒಂದು ಎಕರೆ ಕೃಷಿ ಭೂಮಿಗೆ ರೂ. 10 ಸಾವಿರದಂತೆ ಪ್ರೋತ್ಸಾಹ ಧನ ನೀಡಬೇಕು. ಕೊಡಗಿನಲ್ಲಿ ವರ್ಷಂಪ್ರತಿ ನಡೆಯುವ ಪ್ರತಿಷ್ಠಿತ ಕೊಡವ ಹಾಕಿ ಹಬ್ಬ ಹಾಗೂ ಐತಿಹಾಸಿಕ ಪರಂಪರೆ ಉಳ್ಳ ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಉತ್ಸವಕ್ಕೆ ರಾಜ್ಯದ ಮುಂಗಡ ಪತ್ರದಲ್ಲಿ ಅನುದಾನವನ್ನು ಘೋಷಿಸಬೇಕು. ಕೊಡಗಿಗೆ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಮೊತ್ತವನ್ನು ವರ್ಷಕ್ಕೆ ರೂ. 50 ಕೋಟಿಯಿಂದ ರೂ. 100 ಕೋಟಿಗೆ ಏರಿಸಬೇಕು ಎಂಬದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಮನವಿ ಸಲ್ಲಿಸಿದ್ದಾರೆ.
ಅನುಸೂಚಿತ ಜಾತಿ / ಪಂಗಡ
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಈ ಮುಳಕ ಮನವಿ ಮಾಡಿಕೊಳ್ಳುವದೇನೆಂದರೆ, ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳಾದ ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ಘನ ತ್ಯಾಜ್ಯ ಮತ್ತು ವಿಲೇವಾರಿ ಕೆಲಸವನ್ನು ಹೊರಗುತ್ತಿಗೆ ಆಧಾರದಲ್ಲಿ ಹಲವಾರು ಪೌರ ಕಾರ್ಮಿಕರು ಸುಮಾರು 10-15 ವರ್ಷಗಳಿಂದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಹೊರಗುತ್ತಿಗೆ ಕೆಲಸಗಾರರನ್ನು ಸ್ಥಗಿತಗೊಳಿಸಿದ್ದು, ಈ ಆದೇಶವನ್ನು ಹಿಂಪಡೆಯುವಂತೆ ಅನುಸೂಚಿತ ಜಾತಿ ಮತ್ತು ಪಂಗಡ ಸಮಿತಿಯ ಕೆ. ಪಳನಿ ಪ್ರಕಾಶ್ ಮನವಿ ಸಲ್ಲಿಸಿದ್ದಾರೆ.
ಪ್ರಜಾಪರಿವರ್ತನಾ ವೇದಿಕೆ
ಜಿಲ್ಲೆಯಾದ್ಯಂತ ಇರುವಂತಹ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ ಧಾರ್ಮಿಕ ಅಲ್ಪಸಂಖ್ಯಾತರ ಬಡಜನರಿಗೆ ಇರುವಂತಹ ಮೂಲಭೂತ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಬಗೆಹರಿಸಿಕೊಡುವಂತೆ ಪ್ರಜಾಪರಿವರ್ತನಾ ವೇದಿಕೆ ಅಧ್ಯಕ್ಷ ಹೆಚ್.ಎಸ್. ಮುತ್ತಪ್ಪ ಮನವಿ ಸಲ್ಲಿಸಿದ್ದಾರೆ.