ಮಡಿಕೇರಿ, ಜ. 9: ನಿರಾಶ್ರಿತ ದಲಿತ ಸಮುದಾಯಕ್ಕೆ ನಿವೇಶನ ಭಾಗ್ಯ ನೀಡಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಕೊಡಗು ಜಿಲ್ಲೆಯಾದ್ಯಂತ ಸುಮಾರು 1.30 ಲಕ್ಷ ಮಂದಿ ದಲಿತರು ನೆಲೆಸಿದ್ದು, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಲಿತರ ಅಭ್ಯುದಯಕ್ಕಾಗಿ ಸರಕಾರ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತಿಲ್ಲವೆಂದು ಟೀಕಿಸಿದರು. ಜಿಲ್ಲೆಯಲ್ಲಿರುವ ಬಹುತೇಕ ದಲಿತರು ನಿವೇಶನ ರಹಿತರಾಗಿದ್ದು, ಕನಿಷ್ಟ ವಾಸದ ಮನೆಯೂ ಇಲ್ಲದೆ ಲೈನ್‍ಮನೆಗಳಲ್ಲಿ ವಾಸ ಮಾಡುವ ಪರಿಸ್ಥಿತಿ ಇದೆ. ಸ್ವಂತ ಮನೆ ಹೊಂದಲು ಸರಕಾರ ತಕ್ಷಣ ನಿವೇಶನವನ್ನು ಮಂಜೂರು ಮಾಡಬೇಕು. ಸರಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ದಲಿತ ಸಮುದಾಯಕ್ಕೆ ಯಾವದೇ ತಾಂತ್ರಿಕ ಅಡಚಣೆಯ ಕಾರಣ ನೀಡದೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ಉಳ್ಳವರಿಂದ ಹಾಗೂ ತೋಟದ ಮಾಲೀಕರಿಂದ ದಲಿತರು ಪಡೆದಿರುವ ಸಾಲದ ಹಣವನ್ನು ಸರಕಾರವೇ ಭರಿಸುವ ಮೂಲಕ ಲೈನ್‍ಮನೆಯಲ್ಲಿ ಪೌಷ್ಟಿಕಾಂಶದ ಆಹಾರ ದಲಿತ ಕುಟುಂಬಗಳಿಗೆ ದೊರೆಯುತ್ತಿದೆಯೇ ಎನ್ನುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ವಿಶೇಷ ತನಿಖಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದರು.

ಬಹುತೇಕ ದಲಿತ ಕುಟುಂಬಗಳು 94 ಸಿ ಮತ್ತು 94 ಸಿಸಿ ಅರ್ಜಿ ಸಲ್ಲಿಕೆಯ ಬಗ್ಗೆ ಮಾಹಿತಿಯ ಕೊರತೆಯನ್ನು ಎದುರಿಸುತ್ತಿದ್ದು, ನಿವೇಶನದ ಹಕ್ಕು ಪತ್ರದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಅರ್ಜಿ ಸಲ್ಲಿಕೆಗೆ ಸರಕಾರ ಇನ್ನಷ್ಟು ಕಾಲಾವಕಾಶ ನೀಡಿ ಅನಕ್ಷರಸ್ತರಿಗೆ ಅಗತ್ಯ ಸಹಕಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ತಿಳಿಸಿದರು.

ಮಡಿಕೇರಿ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಕಳೆದ 25 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಇಲ್ಲಿಯವರೆಗೆ ಸಂವಿಧಾನ ಶಿಲ್ಪಿಯ ಪ್ರತಿಮೆಯನ್ನು ಸ್ಥಾಪಿಸಿರುವದಿಲ್ಲ. ತಕ್ಷಣ ಪ್ರತಿಮೆ ಸ್ಥಾಪಿಸಲು ಜಿಲ್ಲಾಡಳಿತಕ್ಕೆ ತಾವು ಸೂಚನೆ ನೀಡಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎನ್ನುವ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡುವದಾಗಿ ದಿವಾಕರ್ ತಿಳಿಸಿದರು.

ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಸಂಚಾಲಕ ಹೆಚ್.ಎಲ್. ಕುಮಾರ್, ಮೂರ್ನಾಡು ಸಂಚಾಲಕ ರಘುಬೈರ ಹಾಗೂ ಸದಸ್ಯರಾದ ಈರಾ ಸುಬ್ಬಯ್ಯ ಉಪಸ್ಥಿತರಿದ್ದರು.