ನಾಪೆÉÇೀಕ್ಲು, ಜ. 9 : ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ನಡೆಯುತ್ತಿರುವ ಅಪವಿತ್ರ್ಯತೆ ತಡೆಗಟ್ಟಲು ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆ ಮೂಲಕ ಪರಿಹಾರ ನಡೆಸಿ ಪಾವಿತ್ರ್ಯತೆ ಕಾಪಾಡಬೇಕೆಂದು ಬೇಂಗ್‍ನಾಡ್ ಕೊಡವ ಸಮಾಜ ಮತ್ತು ರಿಕ್ರೀಯೇಷನ್ ಕ್ಲಬ್ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಕೊಡವ ಸಮಾಜದ ಸಭಾಂಗಣದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಕುಟ್ಟೇಟಿರ ಕುಂಞಪ್ಪ ಬ್ರಹ್ಮಗಿರಿ ಬೆಟ್ಟವನ್ನು ನೈಜ ಭಕ್ತರು ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರಧಾನ ಮಾಡಿ ಭಗಂಡೇಶ್ವರ ಸನ್ನಿಧಿಯಲ್ಲಿ ಮತ್ತು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಭಕ್ತಿಯಿಂದ ಹೋಗುವವರಿಗೆ ನಿರ್ಬಂಧವಿಲ್ಲ. ಆದರೆ ಪ್ರವಾಸಿಗರಿಗೆ ಬೆಟ್ಟ ಹತ್ತಲು ಅವಕಾಶ ನೀಡಬಾರದು ಎಂದರು.
ತಲಕಾವೇರಿಯಲ್ಲಿ ಅನಧಿಕೃತ ಅಂಗಡಿ ಮತ್ತು ಹೋಟೆಲುಗಳಿಂದ ಪರಿಸರ ಹಾಳಾಗುತ್ತಿದ್ದು, ಕೂಡಲೇ ಇವುಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಿಸಬಾರದು. ದೇವಳದ ಎತ್ತರಕ್ಕಿಂತ ಇಲ್ಲಿ ಯಾವದೇ ಕಟ್ಟಡವಾಗಲಿ ಇನ್ನಿತರ ಸೇತುವೆಯಾಗಲಿ ಕಟ್ಟುವ ಕ್ರಮವಿಲ್ಲ ಎಂದರಲ್ಲದೆ ತ್ರಿವೇಣಿ ಸಂಗಮದ ಬಳಿ ಪ್ರವಾಸಿಗರು ಅಡುಗೆ ಮಾಡುವದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪ್ರವಾಸಿಗರಿಗೆ ಅಡುಗೆ ಮಾಡಲು ಬೇರೆ ವ್ಯವಸ್ಥೆ ಯನ್ನು ಕಲ್ಪಿಸಲು ಕ್ರಮಕೈಗೊಳ್ಳ ಬೇಕೆಂದು ಒತ್ತಾಯಿಸಿದರು. ತಪ್ಪಿದ್ದಲ್ಲಿ ಕೊಡವ ಸಮಾಜ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಗ್ರ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ರಿಕ್ರೀಯೇಷನ್ ಕ್ಲಬ್ ಅಧ್ಯಕ್ಷ ಪಟ್ಟಮಾಡ ಕುಶಾಲಪ್ಪ, ಕಾರ್ಯದರ್ಶಿ ಬಾಚರಣಿಯಂಡ ಗಣಪತಿ, ನಿರ್ದೇಶಕರಾದ ಕೊಟ್ಟುಕತ್ತಿರ ಸಾಬು, ನಾಪಂಡ ಪ್ರತಾಪ್, ಅಮ್ಮಂಡ ಅಪ್ಪಯ್ಯ, ಪಟ್ಟಮಾಡ ಅಶೋಕ್, ಮಂದಪಂಡ ಸೂರಜ್, ಬಡ್ಡೀರ ಮನು ಇದ್ದರು.