ಮಡಿಕೇರಿ, ಜ. 9: ದೇಶದ ಒಳಿತಿಗಾಗಿ ಮುಂಬರಲಿರುವ ಕರ್ನಾಟಕ ವಿಧಾನ ಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆ ಕಾಂಗ್ರೆಸ್‍ಗೆ ಅತೀ ಮುಖ್ಯವೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕರ್ನಾಟಕದ ಪ್ರಭಾರಿ ಕೆ.ಸಿ. ವೇಣುಗೋಪಾಲ್ ಒತ್ತಿ ಹೇಳುವದರೊಂದಿಗೆ, ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡುವಂತೆ ಕರೆ ನೀಡಿದರು.

ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಒಡೆದು ಆಳುವ ನೀತಿಯೊಂದಿಗೆ, ಜನರಿಗೆ ಒಳ್ಳೆಯ ದಿನಗಳು ಬರಲಿವೆ ಎಂದು ಕನಸು ಕಾಣುವಂತೆ ಮಾಡಿ ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವದ ಬಿಜೆಪಿಗೆ ಪಾಠ ಕಲಿಸಬೇಕೆಂದು ಕಿವಿ ಮಾತು ಹೇಳಿದರು.

ಕೊಡವ ಭಾಷೆಗೆ ಸ್ಥಾನಮಾನ: ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪ್ರಧಾನಿಯಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಒಳ್ಳೆಯ ಸರಕಾರದೊಂದಿಗೆ ಕೊಡಗಿನ ಹಿತ ಕಾಪಾಡುವ ಮೂಲಕ ಕೊಡವ ಭಾಷೆ ಮತ್ತು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವದಾಗಿ ಘೋಷಿಸಿದರು. ಕೊಡಗಿನಂತಹ ಗಂಡುಮೆಟ್ಟಿದ ನೆಲದಲ್ಲಿ ರಾಷ್ಟ್ರಘಾತುಕರಿಗೆ ನೆಲೆ ಕಲ್ಪಿಸದಂತೆ ಜನತೆಗೆ ಕರೆ ನೀಡಿದರು.

ಕುಶಾಲನಗರಕ್ಕೆ ರೈಲು : ಮಾಜಿ ಕೇಂದ್ರ ರೈಲ್ವೆ ಸಚಿವ ಹಾಗೂ ಸಂಸದ ಕೆ.ಹೆಚ್. ಮುನಿಯಪ್ಪ ಮಾತನಾಡಿ, ಯುಪಿಎ ಸರಕಾರದ ಅವಧಿಯಲ್ಲಿ ಕೊಡಗಿನ ಕುಶಾಲನಗರ ತನಕ ರೈಲ್ವೆ ಯೋಜನೆಗೆ ಸರ್ವೆ ನಡೆಸಲಾಗಿದೆ ಎಂದು ನೆನಪಿಸಿದರು. ಅಲ್ಲದೆ ರಾಜ್ಯ ಸರಕಾರದಿಂದ ಜಾಗ ಮತ್ತು ಶೇ. 50 ಹಣ ಹೂಡಿಕೆಗೆ ಒಡಂಬಡಿಕೆ ಯಾಗಿದ್ದರೂ, ಎಂದರಲ್ಲದೆ, ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವದರೊಂದಿಗೆ ರೈಲ್ವೆ ಯೋಜನೆ ಪೂರ್ಣಗೊಳಿಸುವದಾಗಿ ಘೋಷಿಸಿದರು.

ಬಿಜೆಪಿ ಗಂಟೇನು ಹೋಯ್ತು : ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ, ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ದೇವಾಲಯಗಳಿಗೆ ಭೇಟಿ ನೀಡಿದರೆ, ಬಿಜೆಪಿಯವರ ಗಂಟೇನು ಹೋಯ್ತು ಎಂದು ಖಾರವಾಗಿ ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಾನು ಸೋದರರಂತೆ ಜತೆಗೂಡಿ ಕೆಲಸದಲ್ಲಿ ತೊಡಗಿದ್ದು, ವಿರೋಧಿಗಳು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದರು.

ಮುಂದಿನ ಶಿಕ್ಷಕ ಕ್ಷೇತ್ರ ಚುನಾವಣಾ ಅಭ್ಯರ್ಥಿಯಾಗಿ ಪಕ್ಷದಿಂದ ಕೆ.ಕೆ. ಮಂಜುನಾಥ್ ಹಾಗೂ ಪದವೀಧರ ಕ್ಷೇತ್ರದಿಂದ ಎಸ್.ಪಿ. ದಿನೇಶ್ ಸ್ಪರ್ಧಿಸಲಿದ್ದಾರೆ ಎಂದು ಇದೇ ಸಂದರ್ಭ ರಾಜ್ಯಾಧ್ಯಕ್ಷರು ಘೋಷಿಸಿದರು.

ಉಪಚುನಾವಣೆ ಪಾಠ: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದಲ್ಲಿ ವೈಯಕ್ತಿಕ ದ್ವೇಷದಿಂದ ನಡೆದಿರುವ ಕೊಲೆಗಳನ್ನು ಮತೀಯ ನೆಲೆಯಲ್ಲಿ ಬೆಂಕಿ ಹಚ್ಚುತ್ತಿರುವ ಬಿಜೆಪಿ ಕೀಳು ಮಟ್ಟದ ರಾಜಕಾರಣದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಿಜಯ ಧ್ವಜ: ರಾಜ್ಯ ಇಂಧನ ಸಚಿವ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ ಗೆಲ್ಲಿಸಿ ಆ ಮೂಲಕ ಕೊಡಗಿನ ನೆಲದ ಋಣ ತೀರಿಸಲು ಅವಕಾಶ ಮಾಡಿಕೊಡಬೇಕೆಂದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಪ್ರಾಸ್ತಾವಿಕ ನುಡಿಯಾಡಿದರು. ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿಗಳಿಗೆ ಕೊಡಗಿನ ಮುಖ್ಯ ಬೇಡಿಕೆಗಳೊಂದಿಗೆ 40 ಅಂಶಗಳ ಪಟ್ಟಿಯನ್ನು ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ, ಕದ್ದಣಿಯಂಡ ಹರೀಶ್ ಬೋಪಣ್ಣ, ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಹಿರಿಯರಾದ ಮಿಟ್ಟು ಚಂಗಪ್ಪ ಮೊದಲಾದವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಈ ಮನವಿಯನ್ನು ಈಡೇರಿಸಲು ಕೋರಿದರು.

ರೈತಗೀತೆಯೊಂದಿಗೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಚಾಲನೆಗೊಂಡಿತು. ಆ ಮುನ್ನ ಕೊಡಗಿನ ಸಾಂಪ್ರದಾಯಿಕ ದುಡಿಪಾಟ್‍ನೊಂದಿಗೆ ಗಣ್ಯರನ್ನು ವೇದಿಕೆಗೆ ಕರೆ ತರಲಾಯಿತು. ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಸ್ವಾಗತಿಸಿದರೆ, ನೆರವಂಡ ಉಮೇಶ್ ಹಾಗೂ ಮಣವಟ್ಟಿರ ದಯಾ ಕುಟ್ಟಪ್ಪ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶ ಸ್ಥಳದ ಬಳಿಯೇ ಆಗಮಿಸಿದ್ದ ಕಾರ್ಯಕರ್ತರಿಗೆ ಭೋಜನ ಕಲ್ಪಿಸಲಾಗಿತ್ತು.

ವೇದಿಕೆಯಲ್ಲಿ ಮಾಜಿ ಸಚಿವರುಗಳಾದ ರಾಣಿ ಸತೀಶ್, ಸುಮಾವಸಂತ್, ಕಾಂಗ್ರೆಸ್ ಮುಖಂಡರಾದ ಮಿಟ್ಟು ಚಂಗಪ್ಪ, ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ, ಪದ್ಮಿನಿ ಪೊನ್ನಪ್ಪ, ಟಿ.ಪಿ. ರಮೇಶ್, ಸೂರಜ್ ಹೆಗಡೆ, ಬ್ರಿಜೇಶ್ ಕಾಳಪ್ಪ, ಇತರ ಪ್ರಮುಖರಾದ ಹುಸೇನ್, ಮಮತಾ ಗಟ್ಟಿ, ವಿಷ್ಣುನಾಥನ್, ಅರುಣ್ ಮಾಚಯ್ಯ, ನಾಪಂಡ ಮುತ್ತಪ್ಪ, ಹುಣಸೂರು ಶಾಸಕ ಮಂಜುನಾಥ್, ಕೆ.ಪಿ. ಚಂದ್ರಕಲಾ, ಸರಿತಾ ಪೂಣಚ್ಚ, ಕಾವೇರಮ್ಮ ಸೋಮಣ್ಣ ಸೇರಿದಂತೆ, ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳು, ಜನಪ್ರನಿತಿಧಿಗಳು ಉಪಸ್ಥಿತರಿದ್ದರು.