ರೋಗಗಳ ಕುರಿತು ನೋಡಿದಾಗ, ತೆಗೆದುಕೊಂಡರೆ ಕರಿಮೆಣಸಿನಲ್ಲಿ ರೋಗಗಳು ಪಂಗೈ ವೈರಸಸ್ ಬೇರು ಗಂಟು ಹುಳುಗಳು ಎಲೆತಿನ್ನುವ ಕೀಟಗಳು ಕೂಡಿರುತ್ತವೆ. ಈ ಕಾರಣಗಳಿಂದ ಒಂದು ಸಂಯುಕ್ತ ರೀತಿಯಲ್ಲಿ ಸಮಸ್ಯೆಗಳು ತಲೆದೊರುವುದರಿಂದ ಕರಿಮೆಣಸಿನ ತೋಟಗಳು ಕ್ಷೀಣಿಸುತ್ತವೆ. ಆದುದ್ದರಿಂದ ಪ್ರತಿಯೊಂದು ಕಾರಣಗಳ ಸಮಸ್ಯೆಯನ್ನು ಕ್ಷಿಣಿಸುತ್ತವೆ. ಆದುದ್ದರಿಂದ ಪ್ರತಿಯೊಂದು ಕಾರಣಗಳ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸಮಸ್ಯೆ ನಿರ್ವಹಣೆಯನ್ನು ಮಾಡಬೇಕಾಗುತ್ತದೆ. ಕರಿಮೆಣಸು ಹಳದಿಯಾಗುವುದರಿಂದ ಕರಿಮೆಣಸಿನ ಉತ್ಪಾದನೆ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಇದಕ್ಕೆ ಮುಖ್ಯ ಕಾರಣಗಳು ಕರಿಮೆಣಸನ್ನ ವಿವಿಧ ರೀತಿಯ ಪ್ರದೇಶಗಳಲ್ಲಿ ಅಂದರೆ ಉಷ್ಣವಲಯದಿಂದ ಸಮಶೀತೋಷ್ಣ ವಲಯದ ಎತ್ತರ ಪ್ರದೇಶಗಳಿಂದ ಬೆಳೆಯುತ್ತಿರುವದು.
ಕರಿಮೆಣಸಿನಲ್ಲಿ ನೀರು ಮತ್ತು ಪೋಷಕಾಂಶಗಳನ್ನು ತೆಗೆದುಕೊಳ್ಳುವ ಹೊಸ ಬೇರುಗಳು ಮತ್ತು ಎಲೆ ಮುಂಗಾರು ಮಳೆ ಬಿದ್ದ ನಂತರ ಕಾಣಿಸುತ್ತದೆ. ಈ ಸಮಯವು ಈ ರೋಗದ ಜೀವಾಣು ಉತ್ಪತ್ತಿಯಲ್ಲಿ ಸಹಾಯ ಮಾಡುತ್ತದೆ. ಈ ರೋಗಾಣುಗಳು ಹೊಸ ಬೇರುಗಳನ್ನು ತಿನ್ನುತ್ತಾ ಮುಖ್ಯ ಬೇರಿನ ಕತ್ತಿನ ಭಾಗವನ್ನು ಹಾಳು ಮಾಡುತ್ತದೆ. ಇದರಿಂದ ಗಿಡವು ಹಳದಿಯಾಗಿ ಎಲ್ಲಾ ಎಲೆಗಳು ಬಿದ್ದು ಹೋಗಿ ನಂತರ ಆ ಗಿಡವು ಸಾಯುತ್ತವೆ. ಈ ರೋಗಾಣುಗಳು ಪೋಷಕಾಂಶ ತೆಗೆದುಕೊಳ್ಳುವ ಬೇರುಗಳನ್ನು ಮಾತ್ರ ತಿನ್ನುತ್ತವೆ. ಈ ರೋಗದ ಲಕ್ಷಣಗಳು ಮಳೆ ನಿಲ್ಲುವವರೆಗೂ ಕಾಣಿಸುವುದಿಲ್ಲ. ಈ ರೀತಿ ತೊಂದರೆಗೊಳಪಟ್ಟ ಗಿಡಗಳು ಕುಂಠಿತವಾಗುತ್ತವೆ. ಹಳದಿಯಾಗಿ ಸೊರಗಿ ಎಲೆಗಳನ್ನು ಬಿಟ್ಟು ತಮ್ಮ ಗಾತ್ರವನ್ನು ಕಡಿಮೆ ಮಾಡಿ ಎಲೆ ಮತ್ತು ಕಾಂಡ ಒಣಗಿ ಹೋಗುತ್ತವೆ. ಹಳದಿಯಾಗುವುದು ಮಳೆ ನಿಂತ ನಂತರ ಜಾಸ್ತಿಯಾಗುತ್ತದೆ. (ಅಕ್ಟೋಬರ್ - ನವೆಂಬರ್) ಜಾಸ್ತಿಯಾಗುವುದಕ್ಕೆ ಮುಖ್ಯ ಕಾರಣ ನೀರು ಮತ್ತು ಪೋಷಕಾಂಶಗಳನ್ನು ಗಿಡಕ್ಕೆ ಒದಗಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಹಳದಿಯಾಗುತ್ತದೆ.
ನಿಧಾನ ಸೊರಗು ರೋಗ : ಬಳ್ಳಿಯ ನಿಧಾನ ಸೊರಗುವಿಕೆ ಅದರ ನಿಶಕ್ತಿಯಿಂದ ಉಂಟಾಗುತ್ತದೆ. ಎಲೆ ಉದುರುವಿಕೆ ಮತ್ತು ಬಳ್ಳಿಯ ತುದಿಯಿಂದ ಒಣಗುವುದು, ಈ ರೋಗದ ಲಕ್ಷಣಗಳು. ಸೋಂಕು ತಗುಲಿದ ಬಳ್ಳಿಗಳಲ್ಲಿ ಜಂತುಹುಳುಗಳ ಬಾಧೆಯಿಂದ ಬೇರುಗಳು ನಾಶವಾಗುತ್ತವೆ. ಇದರಿಂದಾಗಿ ರೋಗ ತಗುಲಿದ ಬಳ್ಳಿಗಳು ಅಕ್ಟೋಬರ್ ನಂತರ ತೇವಾಂಶ ಕಡಿಮೆಯಾಗುತ್ತಿ ದ್ದಂತೆ ಹಳದಿಯಾಗುತ್ತದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಮೇ-ಜೂನ್ ತಿಂಗಳಲ್ಲಿ ಸೋಂಕು ಇರುವ ಬಳ್ಳಿಗಳು ಸಹಜ ಸ್ಥಿತಿಗೆ ಬರುತ್ತವೆ.
ನಿರ್ವಹಣೆ : ಸಾಮಾನ್ಯವಾಗಿ ಮುಂಗಾರು ಮುಕ್ತಾಯದ ನಂತರ ಕಂಡುಬಂದ ರೋಗ ಮುಕ್ತ ಬಳ್ಳಿಗಳು ತಮ್ಮ ಸತ್ವವನ್ನು ಕಳೆದುಕೊಂಡು ಅನುತ್ಪಾದಕವಾಗುತ್ತವೆ. ಜಂತು ಹುಳುಗಳ ಬಾಧೆಯಿಂದ ಬೇರು ಕೊಳೆಯುತ್ತದೆ. ಈ ಬೇರುಗಳು ಕೊಳೆಯುವುದಕ್ಕೆ ಫೈಟೋಪ್ತೋರಾ ಕ್ಯಾಪ್ಸಿಸಿ ಶಿಲೀಂಧ್ರವು ಕಾರಣವಾಗಿರಬಹುದು, ಅಥವಾ ಎರಡು ಸೇರಿ ಈ ಬಾಧೆ ಬರಬಹುದು. ಆದುದರಿಂದ ಶಿಲೀಂಧ್ರನಾಶಕ ಮತ್ತು ಜಂತುಹುಳು ನಾಶಕಗಳ ಬಳಕೆಯಿಂದ ರೋಗ ನಿರ್ವಹಣೆ ಮಾಡಬಹುದು. ತೀವ್ರ ಭಾಧೆಗೆ ತುತ್ತಾದ ಬಳ್ಳಿಗಳನ್ನು ಭೂಮಿಯಿಂದ ತೆಗೆದು ನಾಶಮಾಡಬಹುದು. ಆದುದರಿಂದ ಈ ರೋಗವನ್ನು ನಿರ್ವಹಣೆ ಮಾಡಲು ಶೇ. 1ರ ಬೋರ್ಡೋ ದ್ರಾವಣ ಮತ್ತು ಶೇ. 0.2 ರ ಕಾಪರ್ ಆಕ್ಸಿ ಕ್ಲೋರೈಡ್ (ತಾಮ್ರದ ಆಕ್ಸಿ ಕ್ಲೋರೈಡ್) ಅಥವಾ ಪೋಟಾಷಿಯಂ ಪಾಸ್ಪೋನೆಟ್ ಶೇ 0.3 ರ ಅಥವಾ ಶೇ 0.125 ಮೆಟಾಲಾಕ್ಸಿಲ್ ಮ್ಯಾಮಕೋಜಿಬ್ ದ್ರಾವಣವನ್ನು ಸಿಂಪಡಿಸಿ ಅದೇ ಬಳ್ಳಿಗೆ 3-4 ಲೀ ದ್ರಾವಣವನ್ನು ಸುರಿಯುವುದು. ಗಿಡ ನೆಡುವಾಗ ಬಳ್ಳಿಗಳಿಗೆ ಗಿಡಕ್ಕೆ 5 ರಿಂದ 10 ಗ್ರಾಂ ಕಾರ್ಬೋಪ್ಯೂರಾನ್ ಹರಳುಗಳು ಅಥವಾ 250 ಗ್ರಾಂ ಬೇವಿನ ಹಿಂಡಿಯನ್ನು ಗುಂಡಿಗೆ ಹಾಕುವುದು. ತೋಟದಲ್ಲಿ ಪ್ರತೀ ವರ್ಷ ಪ್ರತೀ ಬಳ್ಳಿಗೆ 250 ರಿಂದ 1 ಕೆಜಿ ಬೇವಿನ ಹಿಂಡಿಯನ್ನು ಮುಂಗಾರು ಮಳೆ ಮತ್ತು ಹಿಂಗಾರು ಮಳೆಗಾಲದಲ್ಲಿ ಕೊಡುವದರಿಂದ ಜಂತು ಹುಳು ಗಳ ಬಾಧೆ ಕಡಿಮೆಯಾಗಿ ಇಳುವರಿ ಜಾಸ್ತಿಯಾಗುತ್ತದೆ. ಮಣ್ಣನ್ನು ಜೈವಿಕ ಗೊಬ್ಬರಗಳಾದ ಪೊಚೊನಿಯ ಕ್ಲೇಮೆಡೊಸ್ಟೊರಿಯ ಅಥವಾ ಟ್ರೈಕೋಡರ್ಮಾ ಹಾರಜನಿಯಾಮ್‍ನನ್ನು ವರ್ಷದಲ್ಲಿ ಎರಡು ಬಾರಿ ಪ್ರತಿ ಗಿಡಕ್ಕೆ 50 ಗ್ರಾಂ ನಂತೆ ಏಪ್ರಿಲ್ -ಮೇ ಮತ್ತು ಸೆಪ್ಟಂಬರ್-ಅಕ್ಟೋಬರ್‍ನಲ್ಲಿ ಕೊಡಬೇಕಾಗುತ್ತದೆ.
ವೈರಸ್ ರೋಗಗಳು : ವೈರಸ್ ರೋಗಗಳು ಇತ್ತೀಚಿನ ದಿನಗಳಲ್ಲಿ ಕರಿಮೆಣಸಿನ ಉತ್ಪಾದನೆ ಕಡಿಮೆಯಾಗುವುದಕ್ಕೆ ಒಂದು ಮುಖ್ಯ ಕಾರಣವಾಗಿದೆ. ವೈರಸ್ ರೋಗಗಳ ಮುಖ್ಯ ಲಕ್ಷಣಗಳೆಂದರೆ ಕರಿಮೆಣಸು ಬಳ್ಳಿಯ ಗಿಣ್ಣುವಿನ ನಡುವಿನ ಅಂತರವು ಬಳ್ಳಿಯಿಂದ ಬಳ್ಳಿಗೆ ವಿವಿಧ ಪ್ರಮಾಣದಲ್ಲಿ ಗಿಡ್ಡವಾಗಿರುವುದು ಕಂಡುಬರುತ್ತದೆ. ಬಾಧೆಗೊಳಗಾದ ಬಳ್ಳಿಯ ಇಳುವರಿಯು 5 ರಿಂದ 6 ವರ್ಷಗಳಲ್ಲಿ ಕಡಿಮೆಯಾಗಿ ಆರ್ಥಿಕವಾಗಿ ಬಳ್ಳಿಯಿಂದ ಯಾವುದೇ ಪ್ರಯೊಜನವಾಗುವುದಿಲ್ಲ. ಹೆಚ್ಚು ರೋಗ ಬಾಧೆಗೊಳಗಾದ ಬಳ್ಳಿಗಳು ಕುಬ್ಜವಾಗಿ ಎಲೆಗಳು ಸಣ್ಣದಾಗಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಲಕ್ಷಣಗಳು ಚಿಗುರು ಮತ್ತು ಬೆಳೆಯುತ್ತಿರುವ ಎಲೆಯ ಮೇಲೆ ಫೆಬ್ರವರಿ ಮೇ ತಿಂಗಳಲ್ಲಿ ಹೆಚ್ಚು ಕಾಣುತ್ತವೆ. ಈ ರೀತಿಯಾಗುವುದು ನೀರಿನಾಂಶ ಕಡಿಮೆಯಿರುವ ಸಂದರ್ಭ ಅಂದರೆ ಬೇಸಿಗೆ ಕಾಲದಲ್ಲಿ ಜಾಸ್ತಿ ಕಾಣುತ್ತದೆ. ಈ ರೋಗವು ಗಣನೆಗೆ ತೆಗೆದುಕೊಳ್ಳದೆ ಪೋಷಕಾಂಶ ಕೊಡದ ಮತ್ತು ತುಂಬಾ ಹಳೆಯದಾದ ಕರಿಮೆಣಸಿನ ತೋಟದ ಬಳ್ಳಿಗಳಲ್ಲಿ ಹೆಚ್ಚಿಗೆ ಕಾಣುತ್ತದೆ. ಈ ರೋಗವು ಮುಖ್ಯವಾಗಿ ರೋಗ ಪೀಡಿತ ಗಿಡಗಳಿಂದ ಹರಡುತ್ತದೆ. ಈ ರೋಗವು ಕೀಟಗಳಾದ ಎಫಿಡ್ಸ್ ಮತ್ತು ಬಿಳಿ ಹೇನುಗಳ ಮೂಲಕ ಹರಡುತ್ತದೆ. ಆದುದ್ದರಿಂದ ರೋಗ ಪೀಡಿತ ಗಿಡಗಳ ಮತ್ತು ಕೀಟಗಳ ನಿರ್ವಹಣೆ ಬಹಳ ಮುಖ್ಯವಾಗುತ್ತದೆ. ಆದುದರಿಂದ ಯಾವುದೇ ಕಾರಣಕ್ಕೂ ರೋಗದ ಚಿಹ್ನೆಗಳು ಇರುವ ಬಳ್ಳಿಗಳಿಂದ ಬಳ್ಳಿಯನ್ನು ತೆಗೆದು ಗಿಡ ಮಾಡಬಾರದು.
ರೋಗದ ಚಿಹ್ನೆಗಳು ಕಾಲ ಮತ್ತು ವಾತಾವರಣದ ಮೇಲೆ ಕಂಡುಬರುತ್ತದೆ. ಆದುದ್ದರಿಂದ ಗಿಡ ಮಾಡಲು ಬಳ್ಳಿ ತೆಗೆದುಕೊಳ್ಳುವ ಮುಂಚೆ ತಾಯಿಗಿಡದ ಎಲೆಗಳನ್ನು ಎಲಿಸಾ ಟೆಸ್ಟ್ ಮತ್ತು ಎ.ಸಿ.ಆರ್ ಟೆಸ್ಟ್ ಮಾಡಿ ವೈರಸ್‍ಗಳಿಲ್ಲವೆಂದು ಖಾತರಿಪಡಿಸಿಕೊಳ್ಳಬೇಕು. ಖಾತರಿಪಡಿಸಿಕೊಂಡಂತಹ ಬಳ್ಳಿಗಳಿಂದ ಗಿಡ ಮಾಡಿಕೊಳ್ಳಲು ಬೇಕಾದ ಬಳ್ಳಿಗಳನ್ನ ತೆಗೆದುಕೊಂಡು ಗಿಡ ಉತ್ಪಾದನೆ ಮಾಡಬಹುದು. ನರ್ಸರಿ ಗಳನ್ನು ಹುಳುಗಳು ಸೇರಿಕೊಳ್ಳದಂತೆ ತಂತಿ ಆಥವಾ ನೆಟ್ ಹಾಕಿಕೊಳ್ಳಬೇಕು. ನರ್ಸರಿ ಗಿಡಗಳನ್ನು ಕಾಲಕಾಲಕ್ಕೆ ಸೂಕ್ಷ್ಮವಾಗಿ ಗಮನಿಸಿ ಈ ರೋಗದ ಲಕ್ಷಣಗಳು ಕಂಡ ಗಿಡಗಳನ್ನು ತೆಗೆಯಬೇಕು. ಕೀಟಗಳಾದ ಎಫಿಡ್ ಮತ್ತು ಬಿಳಿಹೆನುಗಳು ಕಂಡುಬಂದರೆ ಈ ಕೀಟಗಳನ್ನು ನಿಯಂತ್ರಿಸುವುದಕ್ಕೆ ಕೀಟನಾಶಕಗಳನ್ನು ಸಿಂಪಡಿಸಬೇಕು. ತೋಟದಲ್ಲಿ ಗಿಡಗಳನ್ನು ಸೂಕ್ಷ್ಮವಾಗಿ ಈ ರೋಗದ ಲಕ್ಷಣಗಳನ್ನು ಗಮನಿಸಿ ಈ ರೋಗದ ಲಕ್ಷಣ ಕಂಡುಬಂದ ಗಿಡಗಳನ್ನು ತೆಗೆದು ಉತ್ತಮ ಗಿಡಗಳನ್ನು ನಾಟಿ ಮಾಡಬೇಕು. ಕಳೆಗಳು ವೈರಸ್ಗಳನ್ನು ಪೋಷಿಸುವುದರಿಂದ ಕಳೆಗಳನ್ನು ಕಾಲಕಾಲಕ್ಕೆ ತೆಗೆಯುತ್ತಿರ ಬೇಕು. ಕೀಟಗಳಾದ ಎಫಿಡ್ ಮತ್ತು ಬಿಳಿಹೇನುಗಳನ್ನು ಹತೋಟಿ ಮಾಡಲು ಶೇ 0.05 ರ ಡೈಮಿಥೋಯೆಟ್ ದ್ರಾವಣವನ್ನು ಸಿಂಪಡಣೆ ಮಾಡಬೇಕು.
ಶಲ್ಕ ಕೀಟಗಳು : ಸುಮಾರು 10 ಜಾತಿಯ ಶಲ್ಕ ಕೀಟಗಳು ಕರಿಮೆಣಸಿನ ನರ್ಸರಿ ಮತ್ತು ತೋಟದಲ್ಲಿ ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಮುಖ್ಯವಾದವು ಗಳೆಂದರೆ ಮಸ್ಸೆಲ್ ಶಲ್ಕ ಮತ್ತು ತೆಂಗು ಶಲ್ಕ. ಸಾಮಾನ್ಯವಾಗಿ ಈ ಕೀಟಗಳ ಹಾವಳಿ ಹಿಂಗಾರು ಮಳೆಯ ಮತ್ತು ಬೇಸಿಗೆ ಕಾಲದಲ್ಲಿ ಜಾಸ್ತಿ. ಈ ಕೀಟಗಳು ರಸ್ತೆ ಬದಿಯ ಕರಿಮೆಣಸಿನ ಬಳ್ಳಿಗಳಿಗೆ ಕಾಣಿಸಿಕೊಳ್ಳುವುದು ಜಾಸ್ತಿ. ಮಸ್ಸೆಲ್ ಶಲ್ಕ ಕೀಟವು ತಗುಲಿದ ಬಳ್ಳಿಗೆ ಕಜ್ಜಿಯಂತಹ ಮುಖ್ಯ ಕಾಂಡ ಕಾಯಿ ಬಿಡುವ ಕಾಂಡ ಬಲಿತಿರುವ ಎಲೆ ಮತ್ತು ಬಲಿಯುತಿರುವ ಎಲೆಗಳ ಮೇಲೆ ಜಾಸ್ತಿ ಕಾಣಿಸಿಕೊಂಡು ಸ್ವಲ್ಪ ಪ್ರಮಾಣದಲ್ಲಿ ಕಾಯಿ ಬಿಡುವ ಭಾಗ ಮತ್ತು ಕಾಯಿಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಈ ಕೀಟದ ಭಾಧೆಯಿಂದ ಎಲೆಗಳು ಪತ್ರ ಹರಿತ ರಂಧ್ರ ಕಡಿಮೆಯಾಗುತ್ತ ನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ. ನಂತರ ಒಣಗುತ್ತವೆ. ಆದರೆ ಶಲ್ಕ ಕೀಟಗಳಿಂದ ಹಳದಿಯಾಗುವುದು ಗಿಡದ ಒಂದು ಭಾಗಕ್ಕೆ ಸೀಮಿತವಾಗಿರುತ್ತದೆ. ಬೇರೆ ನಿಧಾನ ಸೊರಗು ರೋಗ ಮತ್ತು ವೈರಸ್ ರೋಗಗಳಿಂದ ಹಳದಿಯಾದಾಗ ಗಿಡಗಳು ಪೂರ್ತಿ ಹಳದಿಯಾಗುತ್ತದೆ. ಈ ಕೀಟಗಳನ್ನು ಹತೋಟಿ ಮಾಡಲು ಸಾಂಪ್ರದಾಯಿಕ ರಾಸಾಯನಿಕ ಮತ್ತು ಜೈವಿಕ ನಿಯಂತ್ರಣ ಕ್ರಮಗಳನ್ನ ಬಳಸಬೇಕಾಗುತ್ತದೆ. ಶಲ್ಕ ಕೀಟಗಳಿಗೆ ತೊಂದರೆ ಆದಂತಹ ಕರಿಮೆಣಸಿನ ಕಾಂಡ ಮತ್ತು ಎಲೆಗಳನ್ನು ಸುಟ್ಟುಹಾಕಬೇಕು. ರಾಸಾಯನಿಕಗಳಾದ ಶೇ. 0.5 ರ ಡೈಮಿಥೋಯೆಟ್ ಮಾನಕ್ರೋಟೋಪಾಸ್ ದ್ರಾವಣವನ್ನು 2 ಸಾರಿ 30 ದಿನಗಳ ಅಂತರದಲ್ಲಿ ಜನವರಿ ಫೆಬ್ರವರಿ ತಿಂಗಳಲ್ಲಿ ಸಿಂಪಡಣೆ ಮಾಡಬೇಕು. ಅಥವಾ ಈ ಕೀಟಗಳನ್ನು ನಿಯಂತ್ರಣ ಮಾಡಲು ಬೇವು ಆದಾರಿತ ಕೀಟ ನಾಶಕಗಳನ್ನು ಸಿಂಪಡಣೆ ಮಾಡಬೇಕು. (ಮುಂದುವರಿಯುವದು)
- ಡಾ. ಎಸ್. ಜೆ. ಅಂಕೇಗೌಡ, ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಅಪ್ಪಂಗಳ-08272-298574