ಶನಿವಾರಸಂತೆ, ಜ. 7: ರಾಷ್ಟ್ರ ಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯ ವಿಶ್ವ ಸಾಹಿತ್ಯಕ್ಕೆ ಸರಿಸಾಟಿಯಾಗಿ ರಚನೆಯಾಗಿದ್ದು, ಕುವೆಂಪು ವಿಶ್ವ ಮಾನವರೆಂಬದನ್ನು ಸಾಬೀತು ಪಡಿಸಿದೆ ಎಂದು ವೇದಿಕೆ ಸಂಚಾಲಕ ಸತೀಶ್ ಕುಮಾರ್ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆಯ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಮಿತಿ ವತಿಯಿಂದ ಇತ್ತೀಚೆಗೆ ನಡೆದ ಕುವೆಂಪು ವಿಶ್ವ ಮಾನವ ಸಂದೇಶ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾಥಾ ಹಾಗೂ ವೇದಿಕೆಯ ಉದ್ದೇಶದೊಂದಿಗೆ ವಿಶ್ವ ಮಾನವ ಕುವೆಂಪು ಅವರ ಸಂದೇಶವನ್ನು ವಿದ್ಯಾರ್ಥಿಗಳಿಗೆ ಸತೀಶ್ ಕುಮಾರ್ ಸವಿಸ್ತಾರವಾಗಿ ತಿಳಿಸಿದರು.

ವೇದಿಕೆಯ ಜಿಲ್ಲಾ ಸಂಚಾಲಕ ಬೇಕಲ್ ರಮಾನಾಥ್, ವಕೀಲ ಕುಂಞ ಅಬ್ದುಲ್, ಪ್ರಾಂಶುಪಾಲ ನಿರಂಜನ್ ಹಾಗೂ ಶಿಕ್ಷಕ ಕಿರಣ್ ಕುಮಾರ್ ಮಾತನಾಡಿದರು.

ವೇದಿಕೆಯ ರಾಜ್ಯಮಟ್ಟದ ಕಲಾತಂಡದವರು ಮಾನವ ಸಂದೇಶ ಸಾರುವ ಗೀತೆಗಳನ್ನು ಹಾಡಿ ರಂಜಿಸಿದರು. ವೇದಿಕೆಯ ತಾಲೂಕು ಸಂಚಾಲಕ ಟಿ.ಈ. ಸುರೇಶ್, ವಿದ್ಯಾಸಂಸ್ಥೆ ಖಜಾಂಚಿ ಡಾ. ಉದಯಕುಮಾರ್, ಕಾರ್ಯದರ್ಶಿ ಪರಮೇಶ್, ಉಪನ್ಯಾಸಕಿ ಪರಿಮಳ, ಮುಖ್ಯ ಶಿಕ್ಷಕ ಅಬ್ದುಲ್ ರಬ್ ಮತ್ತಿತರರು ಉಪಸ್ಥಿತರಿದ್ದರು.