ಮಡಿಕೇರಿ, ಜ. 7: ಒಂದೊಮ್ಮೆ ಮಡಿಕೇರಿ ಎಪಿಎಂಸಿಗೆ ಅಧಿಕ ಆದಾಯದೊಂದಿಗೆ ಕೃಷಿ ಉತ್ಪನ್ನಗಳ ಅಕ್ರಮ ಸಾಗಾಣೆದಾರರಿಗೆ ಸಿಂಹಸ್ವಪ್ನದಂತಿದ್ದ ಸಂಪಾಜೆಯ ಎಪಿಎಂಸಿ ತಪಾಸಣಾ ಕೊಠಡಿ ಸದ್ದಿಲ್ಲದೆ ಬಾಗಿಲು ಮುಚ್ಚಿಕೊಂಡಿದೆ. ಸಹಜವಾಗಿಯೇ ಎಪಿಎಂಸಿ ಆದಾಯಕ್ಕೂ ಹಿನ್ನಡೆಯಾದಂತಿದೆ.

ಹಿಂದೆ ಸಂಪಾಜೆಯ ಅರಣ್ಯ ತಪಾಸಣಾ ಠಾಣೆಯೊಂದಿಗೆ, ಎಪಿಎಂಸಿ ಮಡಿಕೇರಿ ಆಡಳಿತ ಮಂಡಳಿ ಪಕ್ಕದಲ್ಲೇ ಸುಸಜ್ಜಿತ ಕೊಠಡಿಯೊಂದನ್ನು ನಿರ್ಮಿಸಿ ಅಲ್ಲಿ ಅಕ್ರಮ ಸಾಗಾಣಿಕೆ ತಡೆಗಟ್ಟಲು 24 ಗಂಟೆ ಸಿಬ್ಬಂದಿಯನ್ನು ಕೂಡ ನಿಯೋಜಿಸಿತ್ತು.

ಹಾಗಾಗಿ ಸಂಪಾಜೆ ತಪಾಸಣಾ ಠಾಣೆ ಭಾರೀ ಸುದ್ದಿಯೊಂದಿಗೆ ಅಂದಿನ ಎಪಿಎಂಸಿ ಅಧ್ಯಕ್ಷರುಗಳೇ ಖುದ್ದಾಗಿ ಅಲ್ಲಿ ಸಂಸ್ಥೆಯ ಕಾರ್ಯದರ್ಶಿಯೊಡಗೂಡಿ ಕಾರ್ಯಾಚರಣೆ ನಡೆಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇಲ್ಲಿ ಕಾವಲು ಸಿಬ್ಬಂದಿ ಕೂಡ ಕಾರ್ಯನಿರ್ವಹಿಸದೆ ಸಂಬಂಧಿಸಿದ ಕಚೇರಿಗೆ ಬೀಗ ಜಡಿಯಲ್ಪಟ್ಟಿದೆ.

ಉಪಯೋಗವಿಲ್ಲದಂತಾಗಿರುವ ಈ ಕೊಠಡಿಯನ್ನು ಸಂಸ್ಥೆಯು ಇತರ ಇಲಾಖೆಗಳ ಉಪಯೋಗಕ್ಕಾದರೂ ಬಿಟ್ಟುಕೊಟ್ಟಲ್ಲಿ ಗಡಿ ಪ್ರದೇಶದ ಸಂಪಾಜೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶಕ್ಕೆ ಈ ತಪಾಸಣಾ ಕೊಠಡಿ ಸದುಪಯೋಗ ವಾದೀತು ಎನ್ನುವದು ಸಂಪಾಜೆ ವ್ಯಾಪ್ತಿಯ ನಾಗರಿಕರ ಆಶಯ.