ಮಡಿಕೇರಿ, ಜ. 7: ಏಳು ದಶಕಗಳ ಹಿಂದೆ ಜಿಲ್ಲೆಯ ಹಿರಿಯರ ಕನಸಿನೊಂದಿಗೆ ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘವು ಸ್ಥಾಪನೆಗೊಂಡಿದ್ದು, ಇಂದು ಈ ಸಂಘವು ಸದಸ್ಯರುಗಳು ಪಡೆದಿರುವ ಸಾಲವನ್ನು ಮರುಪಾವತಿ ಮಾಡದೆ ಸಂಕಷ್ಟದಲ್ಲಿ ಸಿಲುಕಿದೆ.ಮೂಲಗಳ ಪ್ರಕಾರ ಪ್ರಸಕ್ತ ಸಂಘವು ರೂ. 4,10,56,000 (ನಾಲ್ಕು ಕೋಟಿ ಹತ್ತು ಲಕ್ಷದ ನವಲತ್ತಾರು ಸಾವಿರ) ಮೊತ್ತದ ಸಲ ಮರುಪಾವತಿ ಯಾಗದೆ ತೊಂದರೆಯಲ್ಲಿದೆ. 1954ರಲ್ಲಿ ಸಹಕಾರ ಸಂಘಗಳ ನಿಯಮಗಳಿಗೆ ಒಳಪಟ್ಟು ಸ್ಥಾಪಕ ಅಧ್ಯಕ್ಷ ಪಿ.ಡಿ. ಸುಬ್ಬಯ್ಯ ಮುಂದಾಳತ್ವದಲ್ಲಿ ಪ್ರಾರಂಭಗೊಂಡಿದ್ದು, ಈಗಿನ ಅಂದಾಜಿನಂತೆ ಈ ಸಂಘವು 1794 ಮಂದಿ ಸದಸ್ಯರನ್ನು ಹೊಂದಿದೆ. ಮುಖ್ಯವಾಗಿ ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘವು ತನ್ನ ಸದಸ್ಯರಿಗೆ ಮನೆಗಳನ್ನು ನಿರ್ಮಿಸುವದು, ಮನೆಗಳ ದುರಸ್ತಿ, ಮನೆಗಳ ಹಾಗೂ ನಿವೇಶನಗಳನ್ನು ಖರೀದಿಗೆ ಸಾಲ ನೀಡುವದು, ಜಾಗ ಖರೀದಿಸಿ ಲೇಔಟ್ (ಬಡಾವಣೆ)ಗಳಾಗಿ ರೂಪಿಸಿ ಸಂಘವು ಸದಸ್ಯರಿಗೆ ಹಂಚಿಕೆ ಮಾಡಲು ಆರ್ಥಿಕ ನೆರವು ಕಲ್ಪಿಸಲಿದೆ. ಪ್ರಸಕ್ತ ದಿನಗಳವರೆಗೆ ಸಂಘವು ಈ ಎಲ್ಲ ಉದ್ದೇಶಗಳಿಗಾಗಿ ರೂಪಾಯಿ ಏಳುಕೋಟಿ

(ಮೊದಲ ಪುಟದಿಂದ) ಅರವತ್ತು ಲಕ್ಷದ ಎಂಬತ್ತೇಳು ಸಾವಿರ (7,60,87,000)ದಷ್ಟು ಸಾಲವನ್ನು ನೀಡಿದೆ.

ಈ ನಡುವೆ ಸಾಲ ಪಡೆದು ಕೊಂಡಿರುವ ಸದಸ್ಯರುಗಳಲ್ಲಿ 131 ಮಂದಿ ಮರುಪಾವತಿಸದೆ ಬಾಕಿ ಉಳಿಸಿಕೊಂಡಿರುವದು ಬೆಳಕಿಗೆ ಬಂದಿದೆ. ಪರಿಣಾಮ ಡಿಸೆಂಬರ್ ಅಂತ್ಯಕ್ಕೆ ಸಾಲ ಮೊತ್ತ ರೂ. 1,52,00,000 ಬಾಕಿಯೊಂದಿಗೆ ಬಡ್ಡಿ ರೂ. 2,58,46,000ರಷ್ಟು ಬೆಳೆಯುವಂತಾಗಿದ್ದು, ಒಟ್ಟಾರೆ ರೂ. 4,10,46,000 ತಲಪಿದೆ.

ಇದೀಗ ತೊಂದರೆಯಲ್ಲಿರುವ ಸಂಘವು ಆರಂಭಿಕ ದಿನಗಳಿಂದ ತನ್ನ ಸದಸ್ಯರಿಗೆ ಸಾಲ ನೀಡಿ 1455 ಮನೆಗಳನ್ನು ಕಲ್ಪಿಸಿದೆ. ಅಲ್ಲದೆ 104 ಮನೆಗಳನ್ನು ನಿರ್ಮಿಸಿ ಸದಸ್ಯರುಗಳಿಗೆ ಹಂಚಿಕೆ ಮಾಡಿದೆ. ಇದರೊಂದಿಗೆ ಇತರ 140 ಮಂದಿ ಸದಸ್ಯರಿಗೆ ನಿವೇಶನ ಕಲ್ಪಿಸಿದೆ.

ತೊಂದರೆಗೆ ಕಾರಣ: ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘವು ತನ್ನ ಸದಸ್ಯರಿಗೆ, ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾ ಮಂಡಳದಿಂದ ನೇರವಾಗಿ ಸಾಲವನ್ನು ಮಂಜೂರುಗೊಳಿಸಲು ಅವಕಾಶ ನೀಡಿದ್ದು, ಜಿಲ್ಲಾ ಸಂಘಕ್ಕೆ ಶೇ. 1 ರಷ್ಟು ಬಡ್ಡಿಯನ್ನು ಮಾತ್ರ ಹೊಂದಿ ಕೊಂಡಿರುವದಾಗಿದೆ. ಹೀಗಿದ್ದೂ ಸದಸ್ಯರು ಮಹಾ ಮಂಡಲದಿಂದ ಪಡೆದಿರುವ ಸಾಲ ಹಿಂತಿರುಗಿಸದ ಕಾರಣ, ಪ್ರಸಕ್ತ ರಾಜ್ಯದಿಂದ ಜಿಲ್ಲೆಗೆ ಸಾಲ ಮಂಜೂರಾತಿ ತಡೆಹಿಡಿ ಯಲಾಗಿದೆ.

ಸದಸ್ಯರ ನಿಲುವು: ಗೃಹ ಸಾಲ ಪಡೆದಿರುವ ಸಂಘದ ಸದಸ್ಯರು ಸಾಲ ಹಿಂತಿರುಗಿಸುವ ಬದಲು, ಕಾಫಿ ಮಂಡಳಿಯ ಫಸಲು ಸಾಲಕ್ಕೆ ತುಲನೆ ಯೊಂದಿಗೆ, ಸರಕಾರದ ಸಾಲಮನ್ನಾ ಯೋಜನೆಯಡಿ ಹೊಂದಾಣಿಕೆಯ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ ಗೃಹ ಸಾಲವನ್ನು ಫಸಲು ಸಾಲದಡಿ ಮನ್ನಾ ಮಾಡಬೇಕೆಂಬ ಬೇಡಿಕೆಯನ್ನು ಕಾಫಿ ಮಂಡಳಿ ಮತ್ತು ಕರ್ನಾಟಕ ಸಹಕಾರಿ ವಸತಿ ಮಹಾ ಮಂಡಲ ತಳ್ಳಿ ಹಾಕಿದೆ.

ನ್ಯಾಯಾಲಯದ ಮೊರೆ: ಈ ಸಂಬಂಧ ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ಸಾಲ ಪಡೆದಿರುವ ಬಾಕಿದಾರ ಸದಸ್ಯರು, ಕಾಫಿ ಮಂಡಳಿ ಹಾಗೂ ಜಿಲ್ಲಾ ಸಂಘದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲದೆ ಗೃಹ ಸಾಲ ವಸೂಲಿ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ.

ಈ ಎಲ್ಲ ಗೊಂದಲಗಳ ನಡುವೆ ಸಹಜವಾಗಿಯೇ ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘವು ಇಂದು ಲಕ್ಷಗಟ್ಟಲೆ ರೂಪಾಯಿ ನಷ್ಟದೊಂದಿಗೆ, ತನ್ನ ಮೂಲ ಉದ್ದೇಶದಂತೆ ಹಾಲೀ ಸದಸ್ಯರು ಪಡೆದಿರುವ ಹಣ ಮರುಪಾವತಿ ಯಾಗದ ಕಾರಣಕ್ಕಾಗಿ ಇತರ ಸದಸ್ಯರಿಗೆ ಮನೆಗಳ ನಿರ್ಮಾಣ, ಖರೀದಿ, ದುರಸ್ತಿ ಇತ್ಯಾದಿಗಳಿಗೆ ನೆರವು ನೀಡಲಾರದ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದೆ.