ವೀರಾಜಪೇಟೆ, ಜ. 6: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ನೈರ್ಮಲ್ಯ ವಿಭಾಗದ 26ಮಂದಿ ನೌಕರರನ್ನು ಯಾವದೇ ಮುನ್ಸೂಚನೆ ನೀಡದೆ ವಜಾಗೊಳಿಸಿರುವ ಕ್ರಮ ಖಂಡಿಸಿ ಇಂದು ಉದ್ಯೋಗವಿಲ್ಲದೆ ಅತಂತ್ರದಲ್ಲಿರುವ ನೌಕರರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲದೆ ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜ್ ಅವರಿಗೆ ಮನವಿ ಸಲ್ಲಿಸಿದರು.
ಕೊಡಗು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಕೆ.ಪಳನಿ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೌಕರರನ್ನು ವಜಾಗೊಳಿಸಿದ ಪೌರಾಡಳಿತ ನಿರ್ದೇಶನಾಲಯದ ಆದೇಶವನ್ನು ಪುನರ್ ಪರಿಶೀಲಿಸುವಂತೆ ನೌಕರರು ಸರಕಾರವನ್ನು ಒತ್ತಾಯಿಸಿದರು. ವೀರಾಜಪೇಟೆ ಪೌರಸೇವಾ ನೌಕರರ ಅಧ್ಯಕ್ಷ ಎಚ್.ಕುಮಾರ್, ಎಚ್. ಜೀವನ್, ವಿನೋದ್, ನಾಗಮಣಿ, ಸರಸ್ವತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.