ಸೋಮವಾರಪೇಟೆ,ಜ.6: ಪದವಿ ಗಳಿಸುವದೆ ಶಿಕ್ಷಣದ ಗುರಿಯಲ್ಲ, ಸಂಸ್ಕಾರಯುತ ಶಿಕ್ಷಣ ಅಗತ್ಯವಾಗಿದೆ ಎಂದು ರಾಜ್ಯ ಪಶು ಸಂಗೋಪನಾ ಸಚಿವ ಎ.ಮಂಜು ಅಭಿಪ್ರಾಯಪಟ್ಟರು. ಮಸಗೋಡು ಚನ್ನಮ್ಮ ಹಿರಿಯ ಆಂಗ್ಲ ಮಾಧ್ಯಮ ಶಾಲೆಯ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಕೇವಲ ಪದವಿ ಗಳಿಸುವದಕ್ಕೆ ಮಾತ್ರ ವಿದ್ಯಾರ್ಥಿಗಳು ಹಾಗೂ ಪೋಷಕರು ಆಸಕ್ತರಾಗಿದ್ದಾರೆ. ಆದರೆ ಪ್ರಾಯೋಗಿಕ ವಾಗಿ ಶಿಕ್ಷಣವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಆದ್ದರಿಂದ ಪದವಿ ಪಡೆಯುತ್ತಾರೆಯೆ ಹೊರತು ಪ್ರಜ್ಞಾ ವಂತರಾಗುವದಿಲ್ಲ. ನಮ್ಮ ಸಂಸ್ಕøತಿ, ಆಚಾರ ವಿಚಾರಗಳನ್ನು ತಿಳಿಸುವಂತಹ ಸಂಸ್ಕಾರಯುತ ಶಿಕ್ಷಣ ಅನಿವಾರ್ಯ ವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆ ಅನಿವಾರ್ಯವಾಗಿದೆ. ವಿದ್ಯೆಯಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದರು.

ಬೆಂಗಳೂರು ಸರ್ಪಭೂಷಣ ಮಠಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸೋಮವಾರಪೇಟೆ ವಿರಕ್ತ ಮಠಾಧೀಶ ವಿಶ್ವೇಶ್ವರ ಸ್ವಾಮೀಜಿ, ಜಲಾಲಿಯ ಮಸೀದಿಯ ಧÀರ್ಮಗುರು ಅಬೂಬಕರ್ ಸಿದ್ದಿಕ್ ಮೋಂಟುಗೋಳಿ, ರಾಜ್ಯ ಮಾಹಿತಿ ಆಯೋಗದ ಮಾಜಿ ಆಯುಕ್ತ ವಿರೂಪಾಕ್ಷಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎ. ಆದಂ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ಜಲಾನಯನ ಸಮಿತಿ ಅಧ್ಯಕ್ಷ ಲೋಕೇಶ್, ಕಟ್ಟಡ ದಾನಿಗಳಾದ ಡಾ. ಎಂ.ಸಿ ಗಾಯಿತ್ರಿ, ಹೆಚ್.ಎಂ.ರೇವಣ್ಣ ಸಿದ್ದಯ್ಯ, ಆಶಾಲತಾ ದಿವಾಕರ್, ತಿಪ್ಪೇಸ್ವಾಮಿ, ಕೊಟ್ರಪ್ಪ ಜಾಲಿ, ಗಣೇಶ್ ಮತ್ತು ಹರೀಶ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಕಿಶೋರ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಪ್ರಮೀಳ ವಂದಿಸಿದರು.