ರಾಂಚಿ, ಜ. 6: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‍ಗೆ ಸಿಬಿಐ ವಿಶೇಷ ಕೋರ್ಟ್ 3.5 ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದು, ಲಾಲುಗೆ 3.5 ವರ್ಷ ಜೈಲು ಹಾಗೂ ರೂ. 5 ಲಕ್ಷ ದಂಡ ವಿಧಿಸಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿದ ಆರು ಪ್ರಕರಣಗಳ ಪೈಕಿ ಒಂದು ಪ್ರಕರಣದ 22 ಆರೋಪಿಗಳ ಪೈಕಿ ಲಾಲು ಪ್ರಸಾದ್ ಯಾದವ್ ಸೇರಿ 15 ಆರೋಪಿಗಳು ದೋಷಿ ಎಂದು ರಾಂಚಿ ಸಿಬಿಐ ವಿಶೇಷ ಕೋರ್ಟ್ ಕಳೆದ ಡಿ. 23ರಂದು ತೀರ್ಪು ನೀಡಿತ್ತು. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ಜ.3ಕ್ಕೆ ಕಾಯ್ದಿರಿಸಿತ್ತು. ಆದರೆ ನಿನ್ನೆ ಮೂರನೇ ಬಾರಿಗೆ ತೀರ್ಪನ್ನು ಮುಂದೂಡಿದ್ದು, ಇಂದಿಗೆ ತೀರ್ಪನ್ನು ಕಾಯ್ದಿರಿಸಿದ್ದರು. ಫೆಬ್ರವರಿಯಲ್ಲಿ ಇನ್ನು ಎರಡು ಮೊಕದ್ದಮೆ ತೀರ್ಮಾನವಾಗಲಿದ್ದು, ಪುತ್ರ ವಿರುದ್ಧವು ದಾಖಲಾದ ಪ್ರಕರಣ ಬಾಕಿ ಉಳಿದಿದೆ. ಇದೇ ಪ್ರಕರಣ ಸಂಬಂದ ಬಿಹಾರ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಸೇರಿ ಇತರೆ ಏಳು ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಖುಲಾಸೆಗೊಳಿಸಿದ್ದರು.