ಮಹಮ್ಮದ್ ರಾಫಿ ಪ್ರಥಮ
ಮೂರ್ನಾಡು, ಜ. 5: ಕನ್ನಡ ಸಾಹಿತ್ಯ ಪರಿಷತ್ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಶುದ್ಧ ಕನ್ನಡದಲ್ಲಿ ಮಾತನಾಡುವ ಆಶುಭಾಷಣ ಸ್ಪರ್ಧೆ ನಡೆಯಿತು.
ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಪರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕನ್ನಡವನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಕರ್ತವ್ಯ ಎಂದರು. ಶುದ್ಧ ಕನ್ನಡದಲ್ಲಿ ಮಾತನಾಡುವ ಆಶುಭಾಷಣ ಸ್ಫರ್ಧೆಯಲ್ಲಿ ಮಾರುತಿ ವಿದ್ಯಾಸಂಸ್ಥೆಯ ಮಹಮ್ಮದ್ ರಾಫಿü (ಪ್ರ), ಮೂರ್ನಾಡು ಪದವಿಪೂರ್ವ ಕಾಲೇಜಿನ ಎಲ್.ಆರ್. ಮನು (ದ್ವಿ) ಹಾಗೂ ಪಿ.ಎಂ. ಪೊನ್ನಮ್ಮ (ತೃ) ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡರು. ಮೂರ್ನಾಡು ಹೋಬಳಿ ವ್ಯಾಪ್ತಿಯ ಮೂರ್ನಾಡು ವಿದ್ಯಾಸಂಸ್ಥೆ, ಮಾರುತಿ ವಿದ್ಯಾಸಂಸ್ಥೆ, ಮರಗೋಡು ಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಪಿ.ಪಿ. ಸುಕುಮಾರ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ, ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ಹೋಬಳಿ ಘಟಕದ ಕಾರ್ಯದರ್ಶಿ ಪಿ.ಎಸ್. ರವಿಕೃಷ್ಣ, ನಿರ್ದೇಶಕರಾದ ಎಸ್.ಡಿ. ಪ್ರಶಾಂತ್, ಹೆಚ್.ಬಿ. ಕೃಷ್ಣಪ್ಪ, ಎಂ.ಜಿ. ಗಣೇಶ್ ಇತರರು ಹಾಜರಿದ್ದರು. ಪ್ರೌಢಶಾಲಾ ಶಿಕ್ಷಕಿ ತೇಜಸ್ವಿ, ಪುಷ್ಪವೇಣಿ, ಸರಳ ಆಶುಭಾಷಣ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ರೂ. 15 ಸಾವಿರ ಮೌಲ್ಯದ ಪುಸ್ತಕಗಳನ್ನು ವಿದ್ಯಾಸಂಸ್ಥೆ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಲಾಯಿತು.