ಆಲೂರು-ಸಿದ್ದಾಪುರ, ಜ. 6: ಮಗುವಿಗೆ ಎದೆ ಹಾಲಿನ ಸೇವನೆ, ಗರ್ಭಿಣಿ ಯರು ಪೌಷ್ಟಿಕ ಆಹಾರ ಸೇವನೆಯ ಕ್ರಮದಿಂದ ಶಿಶು ಮತ್ತು ತಾಯಿಯ ಮರಣದ ಪ್ರಮಾಣವನ್ನು ತಡೆಗಟ್ಟ ಬಹುದು ಎಂದು ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಸುಪರ್ಣ ಕೃಷ್ಣಾನಂದ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಮಾಲಂಬಿ ಅಂಗನವಾಡಿ ಕೇಂದ್ರದಲ್ಲಿ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿ ಕೊಂಡಿದ್ದ ಆರೋಗ್ಯವಂತ ಶಿಶು ಪ್ರದರ್ಶನ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಗುವಿಗೆ ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನವಾಗುತ್ತದೆ, ಎದೆ ಹಾಲಿನಲ್ಲಿ ಪೌಷ್ಟಿಕಾಂಶ ಹಾಗೂ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿರುತ್ತದೆ, ಮಗುವಿಗೆ 6 ತಿಂಗಳ ವರೆಗೆ ನಿರಂತರವಾಗಿ ಮತ್ತು 2 ವರ್ಷದ ತನಕವೂ ತಾಯಿಯ ಎದೆ ಹಾಲನ್ನು ನೀಡಿದರೆ ಮುಂದೆ ಮಗು ಆರೋಗ್ಯವಂತವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ರಮೇಶ್ ಮಾತನಾಡಿ, ತಾಯಿ ಮತ್ತು ಮಗು ಆರೋಗ್ಯದಿಂದ ಜೀವನ ನಡೆಸಬೇಕೆಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ, ಈ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವ ಮಗು ಮತ್ತು ತಾಯಂದಿರು ಹಾಗೂ ಗರ್ಭಿಣಿ ಯರಿಗೆ ಆರೋಗ್ಯ ಮಾಹಿತಿಯನ್ನು ನೀಡುವದರ ಜೊತೆಯಲ್ಲಿ ಆರೋಗ್ಯವಂತ ಮಗುವಿನ ಜೊತೆಯಲ್ಲಿ ಆರೋಗ್ಯವಂತ ತಾಯಿಗೂ ಆರೋಗ್ಯ ಇಲಾಖೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿದೆ, ಈ ನಿಟ್ಟಿನಲ್ಲಿ ತಾಯಂದಿರು ತನ್ನ ಮತ್ತು ಮಗುವಿನ ಆರೋಗ್ಯ ಸುರಕ್ಷತೆಯನ್ನು ಕಾಪಾಡಿಕೊಂಡು ಆರೋಗ್ಯವಂತ ಜೀವನವನ್ನು ನಡೆಸಬೇಕೆಂದರು.
ಕಾರ್ಯಕ್ರಮದಲ್ಲಿ ಮಾಲಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ್, ಆಲೂರು-ಸಿದ್ದಾಪುರ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆ ನಮಿತ, ಮಾಲಂಬಿ ಅಂಗನವಾಡಿ ಕೇಂದ್ರದ ಶಿಕ್ಷಕಿ ವೇದಕುಮಾರಿ, ಕಣಿವೆ ಬಸವನಹಳ್ಳಿ ಅಂಗನವಾಡಿ ಕೆಂದ್ರದ ಶಿಕ್ಷಕಿ ಕಾವ್ಯ, ಹೊಸಗುತ್ತಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಗಾಯತ್ರಿ, ಜಾನಕಿ ಗಂಗಾದರ್, ಗಿರೀಶ್ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಪೋಷಕರು ಹಾಜರಿದ್ದರು.