ಸೋಮವಾರಪೇಟೆ,ಜ.6: ಪ್ರಕೃತಿ ನಿರ್ಮಿತ ಶಾಂತಿನಿಕೇತನದಂತಿರುವ ಕೊಡಗಿನ ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆ ಆಗಬೇಕಿದೆ. ಜೀವನದಿಗಳು ಹುಟ್ಟುವ ಸ್ಥಳದಲ್ಲೇ ಕಲುಷಿತ ವಾಗುತ್ತಿರುವದನ್ನು ಗಂಭೀರವಾಗಿ ಪರಿಗಣಿಸಿ, ನೈರ್ಮಲ್ಯಕ್ಕಾಗಿ ಎಲ್ಲರೂ ಚಿಂತನೆ ನಡೆಸಬೇಕಿದೆ ಎಂದು ಹಿರಿಯ ಜಾನಪದ ಸಂಶೋಧಕ ಪ್ರೊ. ಕಾಳೇಗೌಡ ನಾಗವಾರ ಅಭಿಮತ ವ್ಯಕ್ತಪಡಿಸಿದರು.ಕರ್ನಾಟಕ ಜಾನಪದ ಪರಿಷತ್‍ನ ಕೊಡಗು ಜಿಲ್ಲಾ ಘಟಕ, ಜಿಲ್ಲಾ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಹಾಗೂ ಸೂರ್ಲಬ್ಬಿ ನಾಡಿನ ವತಿಯಿಂದ ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿರುವ ಉತ್ತರ ಕೊಡಗಿನ ಸೂರ್ಲಬ್ಬಿ ನಾಡಿನ ಬಗ್ಗೆ ಇನ್ನಷ್ಟು ಅಧ್ಯಯನದ ಅಗತ್ಯತೆ ಇದೆ. ಇಲ್ಲಿನ ಕಲೆ, ಸಂಸ್ಕøತಿ ಮತ್ತು ವಾತಾವರಣ ಹಾಗೂ ಜೀವನ ಪದ್ಧತಿ ಸಂಶೋಧಕರಿಗೆ ಹೆಚ್ಚಿನ ನೆರವು ನೀಡಲಿದೆ ಎಂದರು.
ವೈಜ್ಞಾನಿಕತೆ ಮತ್ತು ಜಾನಪದ ಸಂಸ್ಕøತಿ ಕೊಡಗಿನಲ್ಲಿ ಸಮ ಪ್ರಮಾಣದಲ್ಲಿದೆ. ಸಂಶೋಧನಾ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಅಕ್ಷರ ಜ್ಞಾನ ಪ್ರಾರಂಭವಾಗುವದಕ್ಕಿಂತ ಮೊದಲು ನಾಡಿನ ಜಾನಪದ ಕಲೆಗಳನ್ನು ಕರಗತ ಮಾಡಿಕೊಂಡು
(ಮೊದಲ ಪುಟದಿಂದ) ಬಾಯಿ ಮಾತಿನ ಮೂಲಕ ಜಾನಪದ ಸಂಸ್ಸøತಿಯನ್ನು ಶ್ರೀಮಂತಗೊಳಿಸಿದ ಹಿರಿಯ ಚೇತನಗಳನ್ನು ಇಂತಹ ಸಂದರ್ಭಗಳಲ್ಲಿ ಗುರುತಿಸು ವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಾನಪದ ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಜಾನಪದ ಕ್ಷೇತ್ರದ ಸಂಪೂರ್ಣ ಇತಿಹಾಸವನ್ನು ಪರಿಚಯಿಸುವ ಕೆಲಸವನ್ನು ಪರಿಷತ್ ಮಾಡುತ್ತಿದೆ. ತಾಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಗಳಲ್ಲಿ ಘಟಕಗಳನ್ನು ರಚಿಸುವ ಮೂಲಕ ಗ್ರಾಮೀಣ ಕ್ರೀಡೆಗಳನ್ನು ಅನಾವರಣಗೊಳಿಸಿದೆ. ಮುಂದಿನ ದಿನಗಳಲ್ಲಿ ಸೂರ್ಲಬ್ಬಿ ಮತ್ತು ನಾಪೋಕ್ಲುವಿನಲ್ಲಿ ಹೋಬಳಿ ಘಟಕಗಳನ್ನು ರಚಿಸಲಾಗುವದು ಎಂದರು.
ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಆಡಳಿತ ಸಹಕಾರ ನೀಡಿದ್ದೇ ಆದಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಈ ನಾಡಿನ ಕಲೆ ಮತ್ತು ಸಂಸ್ಕøತಿಯನ್ನು ಉಳಿಸಿಕೊಂಡು ಹೋಗಲು ನಮ್ಮ ಹಿರಿಯರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ, ಇಂದಿನ ಯುವ ಜನಾಂಗ ಪಟ್ಟಣದಲ್ಲಿ ನೆಲೆಸುವ ಪ್ರವೃತ್ತಿಯನ್ನು ಬಿಟ್ಟು, ಜನರ ಜೀವನಾಡಿಯಾದ ಕೃಷಿ ಪದ್ಧತಿಯಲ್ಲಿ ತೊಡಗಿಸಿಕೊಂಡು, ಮೂಲ ಸಂಸ್ಕøತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ಕರೆನೀಡಿದರು.
ಮತ್ತೋರ್ವ ಅತಿಥಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಸೂರ್ಲಬ್ಬಿ ಗ್ರಾಮ ವ್ಯಾಪ್ತಿಯಲ್ಲಿ ಇಂದಿಗೂ ಕಾಣಸಿಗುವ ವೀರಗಲ್ಲುಗಳು ಗ್ರಾಮದ ವೀರ ಪರಂಪರೆಯನ್ನು ತಿಳಿಸುತ್ತವೆ. ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದಿದ್ದರೂ, ಇಲ್ಲಿನ ಜನರ ಬದುಕು ಹಸನಾಗಿಲ್ಲ. ಬದುಕನ್ನು ರೂಪಿಸುವ ಕೆಲಸಗಳು ಆಗಬೇಕಾಗಿದೆ ಎಂದರು.
ಗ್ರಾಮದ ಪ್ರಮುಖರಾದ ಚಿ.ನಾ. ಸೋಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಸಂಸ್ಕøತಿ, ಆಚಾರ ವಿಚಾರಗಳು ಬೆಳೆದು ಬಂದ ಬಗೆಯನ್ನು ವಿವರಿಸಿದರಲ್ಲದೇ, ಜಾನಪದೀಯ ಬದುಕು ನಶಿಸುತ್ತಿರುವ ಕಾಲಘಟ್ಟದಲ್ಲಿ ಅದನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿಯನ್ನು ಎಲ್ಲರೂ ಹೊತ್ತುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ನಾಡು ತಕ್ಕ ಮೇದುರ ಪೂವಯ್ಯ, ಸೂರ್ಲಬ್ಬಿ ನಾಡು ಅಧ್ಯಕ್ಷ ಮುದ್ದಂಡ ತಿಮ್ಮಯ್ಯ, ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕನ್ನಿಕಂಡ ಸುಭಾಶ್, ಉಪಾಧ್ಯಕ್ಷ ಚಾಮೇರ ಪಳಂಗಪ್ಪ, ಸದಸ್ಯೆ ಮಾಯಮ್ಮ, ಕೊಡವ ಟ್ರಸ್ಟ್ ಅಧ್ಯಕ್ಷ ಅಜ್ಜಿನಂಡ ತಮ್ಮು ಪೂವಯ್ಯ, ಹಿರಿಯ ಅಂಬೆಕಲ್ ಕುಶಾಲಪ್ಪ, ಕ್ರೀಡಾಕೂಟ ಸಂಚಾಲಕ ಚಾಮೇರ ದಿನೇಶ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಹಿರಿಯರಾದ ಮುದ್ದಂಡ ತಿಮ್ಮಯ್ಯ, ಪುದಿಯತಂಡ ಪೂವಮ್ಮ, ಉದಿಯಂಡ ಪೊನ್ನಪ್ಪ, ಓಡಿಯಂಡ ಬೆಳ್ಳಿಯಪ್ಪ, ನಾಪಂಡ ಪೂವಯ್ಯ, ಗೌಡಂಡ ತಮ್ಮಯ್ಯ, ನಾಳಿಯಮ್ಮಂಡ ಮೇದಮಯ್ಯ ಹಾಗೂ ಜಾನಪದ ಪ್ರಶಸ್ತಿ ಪುರಸ್ಕøತ ಐಮುಡಿಯಂಡ ರಾಣಿ ಮಾಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ ಹಂಚೇಟ್ಟಿರ ಫ್ಯಾನ್ಸಿ ಮುತ್ತಣ್ಣ, ಹಿರಿಯ ಸಾಹಿತಿ ಶೋಭಾ ಸುಬ್ಬಯ್ಯ, ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರುಗಳನ್ನು ಗ್ರಾಮಸ್ಥರು ಸನ್ಮಾನಿಸಿದರು.